ಸಾರಾಂಶ
- ಚಿಗಟೇರಿ ಆಸ್ಪತ್ರೆಗೆ ₹2.5 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳ ಹಸ್ತಾಂತರ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಜಿಲ್ಲಾಸ್ಪತ್ರೆಯಲ್ಲಿ ಪ್ರತಿ ತಿಂಗಳು ಸುಮಾರು 45 ಸಾವಿರ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಮಧ್ಯ ಕರ್ನಾಟಕ ಹೃದಯ ಭಾಗದಲ್ಲಿರುವ ಈ ಜಿಲ್ಲೆಗೆ ನೆರೆ ಜಿಲ್ಲೆಗಳಿಂದ ವೈದ್ಯಕೀಯ ಚಿಕಿತ್ಸೆ ಪಡೆಯಲು ರೋಗಿಗಳು ಬರುತ್ತಾರೆ. ಅವರಿಗೆ ವೆಂಟಿಲೇಟರ್ಸ್ ಫಿಸಿಯೋಥೆರಫಿ, ಲ್ಯಾಕ್ಟೋಸ್ಕೋಪಿ ಸೇರಿದಂತೆ ಮುಂತಾದ ಉಪಕರಣಗಳ ಕೊರತೆ ಇತ್ತು. ಇದರಿಂದ ಖಾಸಗಿ ಆಸ್ಪತ್ರೆಗಳಿಗೆ ಅಥವಾ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಿಗೆ ಕಳುಹಿಸಬೇಕಾದ ಅನಿವಾರ್ಯತೆ ದಟ್ಟವಾಗಿತ್ತು. ಆದರೆ, ಇಂದು ಸಿಎಸ್‌ಆರ್ ನಿಧಿಯಡಿ ನೀಡಲಾದ ಉಪಕರಣ ಸರಿಯಾದ ರೀತಿಯಲ್ಲಿ ಬಳಸಿ ಸಾರ್ವಜನಿಕರಿಗೆ ಉಪಯುಕ್ತ ಆಗುವಂತೆ ಗುಣಮಟ್ಟದ ಚಿಕಿತ್ಸೆ ನೀಡಬೇಕು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಹೇಳಿದರು.ನಗರದ ಚಿಗಟೇರಿ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿಗಟೇರಿ ಜಿಲ್ಲಾಸ್ಪತ್ರೆ ಹಾಗೂ ಬಿಎನ್‌ಪಿಎಂಐ (ಬ್ಯಾಂಕ್ ನೋಟ್ ಪೇಪರ್ ಮಿಲ್) ಸಹಯೋಗದಲ್ಲಿ ಆಸ್ಪತ್ರೆಯ ಡಿಐಇಸಿ ಸಭಾಂಗಣದಲ್ಲಿ ಸಿಎಸ್‌ಆರ್ ನಿಧಿಯಡಿ ವೈದ್ಯಕೀಯ ಉಪಕರಣಗಳ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯ ಚಿಗಟೇರಿ ಆಸ್ಪತ್ರೆಗೆ ಆರ್‌ಬಿಐ ಅಂಗ ಸಂಸ್ಥೆಯಾದ ಮೈಸೂರಿನ ಬಿಎನ್‌ಪಿಎಂಐ (ಬ್ಯಾಂಕ್ ನೋಟ್ ಪೇಪರ್ ಮಿಲ್) ಸಿಎಸ್‌ಆರ್ ನಿಧಿಯಡಿ ₹2.5 ಕೋಟಿ ಮೊತ್ತದ ಅತ್ಯಾಧುನಿಕ ವಿವಿಧ ವೈದ್ಯಕೀಯ ಉಪಕರಣಗಳ ಹಸ್ತಾಂತರಿಸಲಾಗಿದೆ. ಇನ್ನೂ ಅಗತ್ಯ ಉಪಕರಣಗಳ ಒದಗಿಸಲು ಕ್ರಮವಹಿಸುವ ಭರವಸೆ ನೀಡಿದರು.ಜಿಲ್ಲಾಸ್ಪತ್ರೆಗೆ ಸಾರ್ವಜನಿಕರು ವೈದ್ಯಕೀಯ ಚಿಕಿತ್ಸೆಗೆ ಬಂದಾಗ ಮಾನವೀಯತೆಯಿಂದ ಸ್ಪಂದಿಸಿ, ಉತ್ತಮ ಸೇವೆ ನೀಡಬೇಕು. ಅನುದಾನ ಮತ್ತು ಔಷಧ ಲಭ್ಯತೆಗೆ ಅನುಗುಣವಾಗಿ ಜನರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಬೇಕು. ನೂತನ ಆಸ್ಪತ್ರೆಗೆ ₹267 ಕೋಟಿ ವೆಚ್ಚದಲ್ಲಿ ನೂತನ ಸುಸಜ್ಜಿತ ಕಟ್ಟಡ ನಿರ್ಮಾಣವಾಗುತ್ತಿದೆ. ಹಾಗೆಯೇ ಜಿಲ್ಲಾಸ್ಪತ್ರೆ ಹಳೇ ಕಟ್ಟಡ ದುರಸ್ತಿಗೆ ₹43 ಕೋಟಿ ಅನುದಾನ ಒದಗಿಸಿದ್ದು, ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿ ಕೊರೆತೆ ಕಾಣುತ್ತಿದೆ. ಅಗತ್ಯ ಸಿಬ್ಬಂದಿ ನಿಯೋಜಿಸಲು ಸೂಚನೆ ನೀಡಿದರು. ಅಗತ್ಯವಿದ್ದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
19 ಅತ್ಯಾಧುನಿಕ ಉಪಕರಣ:ಬ್ಯಾಂಕ್ ನೋಟ್ ಪೇಪರ್ ಮಿಲ್ ಸಂಸ್ಥೆಯ ಎಂಡಿ ಡಾ. ಎಸ್.ತಾಳಕೇರಪ್ಪ ಮಾತನಾಡಿ, ನಮ್ಮ ಬಿಎನ್‌ಪಿಎಂಐ ಸಂಸ್ಥೆಯಿಂದ ಇಷ್ಟು ಮೊತ್ತದ ಉಪಕರಣ ನೀಡಿರುವುದು ಇದೇ ಮೊದಲು. ದಾವಣಗೆರೆಯು ನೆರೆ ಜಿಲ್ಲೆಯವರಿಗೂ ಸಮೀದಲ್ಲಿರುವ ಕಾರಣ ವೈದ್ಯಕೀಯ ಚಿಕಿತ್ಸೆಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬರುವುದು ಅರಿತು ಜಿಲ್ಲಾಸ್ಪತ್ರೆಗೆ ₹2.5 ಕೋಟಿ ಮೊತ್ತದಲ್ಲಿ ಫಿಜಿಯೋಥೆರಫಿ ಘಟಕ -01, ವೆಂಟಿಲೇಟರ್ ಒಳಗೊಂಡ ಅನಸ್ಥೇಸಿಯಾ ವರ್ಕ್ ಸ್ಟೇಷನ್-02, ಮೊಬೈಲ್ ಓಟಿ ಲೈಟ್-05, ಪೀಡಿಯಾಟ್ರಿಕ್ ವೆಂಟಿಲೇಟರ್ -02 ಸೇರಿದಂತೆ ಒಟ್ಟು 19 ಅತ್ಯಾಧುನಿಕ ವೈದ್ಯಕೀಯ ಉಪಕರಣ ನೀಡಲಾಗಿದೆ. ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಚಿಗಟೇರಿ ಜಿಲ್ಲಾಸ್ಪತ್ರೆ ಅಧಿಕ್ಷಕ ಡಾ.ನಾಗೇಂದ್ರಪ್ಪ, ಜಿಪಂ ಸಿಇಒ ಗಿತ್ತೆ ಮಾಧವ ವಿಠಲ ರಾವ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ಡಿಎಚ್‌ಒ ಡಾ.ಷಣ್ಮುಖಪ್ಪ, ಚಿಗಟೇರಿ ಜಿಲ್ಲಾಸ್ಪತ್ರೆಯ ಸಿಬ್ಬಂದಿ, ನರ್ಸಿಂಗ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.- - -
(ಕೋಟ್) ಅಂಗಾಂಗ ಮತ್ತು ದೇಹದಾನದಲ್ಲಿ ರಾಜ್ಯವು ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಅಂಗಾಂಗ ಬದಲಾವಣೆಗೆ ಅಥವಾ ಜೋಡಣೆ ಖಾಸಗಿ ಆಸ್ಪತ್ರೆಗಳಲ್ಲಿ ಸಾಧ್ಯವಾದರೂ ₹20 ರಿಂದ ₹25 ಲಕ್ಷ ವೆಚ್ಚವಾಗುತ್ತದೆ. ಈ ದುಬಾರಿ ವೆಚ್ಚ ಸಾರ್ವಜನಿಕರು, ಬಡವರು ಭರಿಸಲು ಸಾಧ್ಯವಿಲ್ಲ. ಜಿಲ್ಲೆಯಲ್ಲಿ ಅಂಗಾಂಗ ದಾನಗಳ ಮಹತ್ವ ಕುರಿತು ಚಿಗಟೇರಿ ಆಸ್ಪತ್ರೆಯಲ್ಲಿ ಕಾರ್ಯಾಗಾರ ಆಯೋಜಿಸಬೇಕು.- ಡಾ.ಪ್ರಭಾ ಮಲ್ಲಿಕಾರ್ಜುನ, ಸಂಸದೆ.
- - --16ಕೆಡಿವಿಜಿ34:
ದಾವಣಗೆರೆಯ ಜಿಲ್ಲಾಸ್ಪತ್ರೆಯಲ್ಲಿ ಸಿಎಸ್‌ಆರ್ ನಿಧಿಯಡಿ ವೈದ್ಯಕೀಯ ಉಪಕರಣಗಳ ಹಸ್ತಾಂತರ ಕಾರ್ಯಕ್ರಮವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಉದ್ಘಾಟಿಸಿ ಮಾತನಾಡಿದರು.