ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯಿಂದ ದಶಲಕ್ಷ ಗಿಡ ನೆಡುವ ಅಭಿಯಾನ

ಕನ್ನಡಪ್ರಭ ವಾರ್ತೆ ಸಿದ್ದಾಪುರ

ದಶಲಕ್ಷ ಗಿಡ ನೆಡುವ ಅಭಿಯಾನದ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ 77 ಹಳ್ಳಿಗಳಲ್ಲಿ ಗಿಡ ನೆಡುವ ಕಾರ್ಯಕ್ರಮಕ್ಕೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.

ಜಿಲ್ಲಾ ಸಂಚಾಲಕ ಮಹಾಬಲೇಶ್ವರ ನಾಯ್ಕ ಬೇಡ್ಕಣಿ ಪ್ರಕಟಣೆಯಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ. ಅರಣ್ಯವಾಸಿಗಳಿಂದ ಗಿಡ ನೆಡುವುದು ಪರಿಸರ ಜಾಗೃತಿಯ ಸಂಕೇತ. ಅರಣ್ಯವಾಸಿಗಳು ಅರಣ್ಯಭೂಮಿ ಸಾಗುವಳಿ ಜತೆಯಲ್ಲಿ ಪರಿಸರ ಉಳಿಸಿ, ಬೆಳೆಸುವ ಉದ್ದೇಶದಿಂದ ಈ ಅಭಿಯಾನ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

ದಶಲಕ್ಷ ಗಿಡ ನೆಡುವ ಅಭಿಯಾನ ಮುಂದಿನ ೨೧ ದಿನಗಳ ವರೆಗೆ ಜಿಲ್ಲಾದ್ಯಂತ ಗ್ರಾಮೀಣ ಭಾಗದಲ್ಲಿ ನಡೆಯಲಿದೆ. ಸಹಸ್ರಾರು ಅರಣ್ಯವಾಸಿಗಳು ಮನೆ ಮನೆಯಲ್ಲಿ ಗಿಡ ನೆಡುವ ಕಾರ್ಯ ನಡೆಸಲಿದ್ದಾರೆ. ಅರಣ್ಯವಾಸಿಗಳು ಭೂಮಿ ಹಕ್ಕಿನ ಹೋರಾಟಕ್ಕೆ ನೀಡುವ ಪ್ರಾಮುಖ್ಯತೆಯಷ್ಟೇ, ಪರಿಸರ ಉಳಿಸಿ ಬೆಳೆಸುವುದಕ್ಕೂ ಆದ್ಯತೆ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.


ಕಾರ್ಯಕ್ರಮದಲ್ಲಿ ಸಂಚಾಲಕ ಮಹಾಬಲೇಶ್ವರ ನಾಯ್ಕ, ಹರಿಹರ ನಾಯ್ಕ ಓಂಕಾರ, ಗಂಗಾಧರ ದ್ಯಾವ ನಾಯ್ಕ ಹೊಸಗದ್ದೆ, ಎಂ.ಆರ್. ನಾಯ್ಕ ಬೇಡ್ಕಣಿ, ತಿಮ್ಮಪ್ಪ, ಹರೀಶ್ ದೇವಡಿಗ ಹಾರ್ಸಿಕಟ್ಟಾ, ಮಂಜುನಾಥ ಮಡಿವಾಳ, ದಿನೇಶ ನಾಯ್ಕ ಕಿಲಾರ, ಭರತ್ ನಾಯ್ಕ, ನಾಗೇಂದ್ರ ಗೌಡ, ನಾಗರಾಜ ಆಚಾರಿ, ಸಾತ್ವಿಕ್‌ ಮಡಿವಾಳ, ದಿವಾಕರ ಟಿ. ನಾಯ್ಕ ಕ್ಯಾದಗಿ, ರಾಜು ಕೆ. ನಾಯ್ಕ, ಮಂಜುನಾಥ ಮಾದೇವ ನಾಯ್ಕ ಮುಂತಾದವರಿದ್ದರು.

21ಎಸ್ಡಿಪಿ4-

ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಹಮ್ಮಿಕೊಂಡಿದ್ದ ಗಿಡ ನೆಡುವ ಅಭಿಯಾನಕ್ಕೆ ಸಿದ್ದಾಪುರ ತಾಲೂಕಿನಲ್ಲಿ ಚಾಲನೆ ನೀಡಲಾಯಿತು.