ಮಳೆಗಾಳಿಗೆ ಧರೆಗುರುಳಿದ ಮರ, ವಿದ್ಯುತ್‌ ಕಂಬಗಳು

| Published : Apr 19 2024, 01:12 AM IST / Updated: Apr 19 2024, 11:12 AM IST

rain

ಸಾರಾಂಶ

ಮಜ್ಜಿಗೇರಿ ಗ್ರಾಮದಲ್ಲಿ ಸುಮಾರು ೫ಕ್ಕೂ ಹೆಚ್ಚು ಮನೆಗಳ ಚಾವಣಿ ಹಾರಿ ಹೋಗಿದ್ದು, ಕೆಲ ಮನೆಗಳು ಕುಸಿದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ಮುಂಡಗೋಡ: ಗುರುವಾರ ಸಂಜೆ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸಿಡಿಲು, ಗಾಳಿ ಸಹಿತ ಭಾರಿ ಮಳೆಯು ತೀವ್ರ ಅವಾಂತರವನ್ನೇ ಸೃಷ್ಟಿಸಿದೆ. ಗಿಡ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿ ರಸ್ತೆ ಸಂಚಾರ ಸ್ಥಗಿತಗೊಂಡರೆ, ಸಾಕಷ್ಟು ಮನೆಗಳಿಗೆ ಹಾನಿಯಾಗಿದ್ದು, ಆಸ್ತಿಪಾಸ್ತಿ ಹಾನಿಯುಂಟಾಗಿದೆ.

ಸಂಜೆ4 ಗಂಟೆಗೆ ಪ್ರಾರಂಭವಾದ ಧಾರಾಕಾರ ಮಳೆಗೆ ಪಟ್ಟಣ ಹೊರವಲಯ ಕಲಘಟಗಿ ರಸ್ತೆಯಲ್ಲಿ ೨ ಬೃಹತ್ ಮರಗಳು ಧರೆಗುರುಳಿದ ಪರಿಣಾಮ ಕೆಲಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಈ ಮಾರ್ಗವಾಗಿ ಸಂಚರಿಸಬೇಕಾದ ವಾಹನಗಳು ಸುತ್ತು ಹೊಡೆದು ಹೋಗಬೇಕಾಯಿತು.

ಮನೆಗಳಿಗೆ ಹಾನಿ: ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ಕೋಳಿ ಫಾರ್ಮ್‌ ಚಾವಣಿ ಸೀಟ್‌ಗಳು ಗಾಳಿ ಮಳೆಗೆ ಹಾರಿ ಹೋದ ಪರಿಣಾಮ ಕಟ್ಟಡ ಕುಸಿದು ಬಿದ್ದು ನೂರಾರು ಕೋಳಿ ಸಾವಿಗೀಡಾಗಿವೆ.

ಅದೇ ರೀತಿ ಮಜ್ಜಿಗೇರಿ ಗ್ರಾಮದಲ್ಲಿ ಸುಮಾರು 5ಕ್ಕೂ ಹೆಚ್ಚು ಮನೆಗಳ ಚಾವಣಿ ಹಾರಿ ಹೋಗಿದ್ದು, ಕೆಲ ಮನೆಗಳು ಕುಸಿದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಇದರಿಂದ ಕುಟುಂಬಸ್ಥರು ಮನೆ ಬಿಟ್ಟು ಮಳೆಯಲ್ಲಿ ನೆನೆಯುತ್ತ ಬೀದಿಯಲ್ಲಿ ನಿಲ್ಲುವಂತಾಗಿತ್ತು.

ಹುನಗುಂದ ಗ್ರಾಮದಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಹೊತ್ತಿಕೊಂಡು ಧಗ ಧಗ ಉರಿದಿದ್ದು, ಸಾರ್ವಜನಿಕರಲ್ಲಿ ದಿಗ್ಭ್ರಮೆ ಉಂಟು ಮಾಡಿತ್ತು. ಕಾಳಗನಕೊಪ್ಪ ಸೇರಿದಂತೆ ವಿವಿಧ ಕಡೆ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ರಾತ್ರಿಯವರೆಗೂ ವಿದ್ಯುತ್ ಇರಲಿಲ್ಲ.

ಗಾಳಿ, ಮಳೆಗೆ ಧರೆಗುರುಳಿದ ಮರಗಳುಯಲ್ಲಾಪುರ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಗುರುವಾರ ಭಾರಿ ಗಾಳಿ, ಗುಡುಗು, ಸಿಡಿಲು ಮಳೆಯಾಗಿದೆ.

ಹಲವೆಡೆ ಮರ, ಟೊಂಗೆಗಳು ಮುರಿದು ಬಿದ್ದಿವೆ. ಮಂಚಿಕೇರಿ ಪೊಲೀಸ್ ಠಾಣೆ ಎದುರು ಶಿರಸಿ ರಸ್ತೆ ಮೇಲೆ ಬೃಹತ್ ಮರ ಬಿದ್ದ ಪರಿಣಾಮ ಸುಮಾರು 1 ಗಂಟೆಗಳ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಮಂಚಿಕೇರಿ ಬಳಿ ನಾಲ್ಕು ವಿದ್ಯುತ್ ಕಂಬಗಳೂ ಧರೆಗುರುಳಿವೆ. ಇದರಿಂದ ವಿದ್ಯುತ್‌ ವ್ಯತ್ಯಯ ಕೂಡ ಉಂಟಾಗಿದೆ.ರಸ್ತೆ ತೆರವುಗೊಳಿಸುವುದಕ್ಕಾಗಿ ಪೊಲೀಸ್, ಅರಣ್ಯ, ಹೆಸ್ಕಾಂ ಇಲಾಖೆ ಅಲ್ಲದೆ ಸಾರ್ವಜನಿಕರ ಸಹಕಾರದಲ್ಲಿ ಜೆಸಿಬಿ ಮೂಲಕ ರಸ್ತೆ ತೆರವುಗೊಳಿಸಲಾಗಿದೆ.