ಸಾರಾಂಶ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಶುಕ್ರವಾರ ಸಂಜೆ ಮತ್ತು ರಾತ್ರಿ ಬಿರುಗಾಳಿಗೆ ಕೆಲವು ಕಡೆ ಸಾಲು ಸಾಲು ಮರಗಳು ನೆಲಕ್ಕುರುಳಿದ್ದು, ಹಲವು ಮನೆಗಳಿಗೆ ಹಾನಿಯಾಗಿದೆ. ಉಪ್ಪಿನಂಗಡಿ ಪರಿಸರದಲ್ಲಿ ಒಂದು ಗಾಳಿ ಮಳೆಗೆ ೩೫ ವಿದ್ಯುತ್ ಕಂಬಗಳು ತುಂಡರಿಸಲ್ಪಟ್ಟು ಭಾರೀ ಹಾನಿ ಉಂಟಾಗಿದೆ.ಗಾಳಿಯ ಹೊಡೆತಕ್ಕೆ ಸಿಲುಕಿ ಮರಗಳು ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ತುಂಡರಿಸಲ್ಪಡುವ ಜೊತೆಗೆ ಎರಡು ವಿದ್ಯುತ್ ಪರಿವರ್ತಕಗಳು ಧರೆಗುರುಳಿವೆ. ವಿದ್ಯುತ್ ವ್ಯವಸ್ಥೆ ಅಸ್ತವ್ಯಸ್ಥವಾಗುವುದರೊಂದಿಗೆ ಮೆಸ್ಕಾಂಗೆ ಭಾರೀ ನಷ್ಟ ಸಂಭವಿಸಿದೆ.
ಉಪ್ಪಿನಂಗಡಿ ಗ್ರಾಮದ ನೂಜಿ, ನಿನ್ನಿಕ್ಕಲ್, ವರೆಕ್ಕಾ, ಪಾತಾಳ, ಆರ್ತಿಲ, ಬಾರ್ಲ, ನಂದಿನಿ ನಗರ, ನೆಡ್ಚಿಲ್, ನಟ್ಟಿಬೈಲ್ ಪರಿಸರದಲ್ಲಿ ಅಲ್ಲಲ್ಲಿ ಮರಗಳು ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ತುಂಡರಿಸಲ್ಪಟ್ಟಿವೆ. ಈ ಬಾರಿಯ ಮಳೆಗಾಲದಲ್ಲಿ ಈವರೆಗೆ ಒಟ್ಟು ೯೮ ವಿದ್ಯುತ್ ಕಂಬಗಳು ತುಂಡಾಗಿದ್ದು ಇಲಾಖೆಗೆ ೩೫ ಲಕ್ಷ ರು. ನಷ್ಟ ಸಂಭವಿಸಿದೆ.ಪಟ್ಲ, ನೆಕ್ಕರೆ, ೩೪ ನೆಕ್ಕಿಲಾಡಿ ಗ್ರಾಮದ ದರ್ಬೆ, ಬೀತಲಪ್ಪು ಬೇರಿಕೆಗಳಲ್ಲಿ ಬಹಳಷ್ಟು ಹಾನಿ ಸಂಭವಿಸಿದೆ. ಉಪ್ಪಿನಂಗಡಿ ಗ್ರಾಮದ ಬಸ್ತಿಕ್ಕಾರ್ ಎಂಬಲ್ಲಿ ಮನೆಯ ಮೇಲೆ ಮರವೊಂದು ಬಿದ್ದು ಮನೆಗೆ ಹಾನಿಯಾಗಿದೆ. ೩೪ ನೆಕ್ಕಿಲಾಡಿಯ ಬೀತಲಪ್ಪು ಎಂಬಲ್ಲಿ ಬಬಿತಾ ಅವರ ಮನೆಯ ಮೇಲೆ ಮರ ಬಿದ್ದು ಮನೆಗೆ ಹಾಗೂ ಕೊಟ್ಟಿಗೆಗೆ ಹಾನಿ ಆಗಿದೆ. ಅಲ್ಲಿಯೇ ಸುಬ್ಬ ಎಂಬವರ ಕೊಟ್ಟಿಗೆಯ ಶೀಟ್‌ಗಳೆಲ್ಲಾ ಗಾಳಿಗೆ ಹಾರಿ ಹೋಗಿ ಪುಡಿಪುಡಿಯಾಗಿವೆ. ಇನ್ನೂ ಹಲವು ಕೃಷಿಕರ ಅಡಕೆ ಮರಗಳು ಗಾಳಿ ಹೊಡೆತೆಕ್ಕೆ ಸಿಲುಕಿದ್ದು, ಅಪಾರ ನಷ್ಟ ಸಂಭವಿಸಿದೆ. ಮೆಸ್ಕಾಂ ಸಿಬ್ಬಂದಿ ಮನವಿ: ವಿದ್ಯುತ್ ಕಂಬಗಳು ತುಂಡಾಗಿ ಸಮಸ್ಯೆ ಉಂಟಾಗಿತ್ತು. ವಿದ್ಯುತ್ ಸ್ಥಗಿತದಿಂದ ಪರದಾಡುತ್ತಿದ್ದ ಸಾರ್ವಜನಿಕರು ಮೆಸ್ಕಾಂ ಸಿಬ್ಬಂದಿಗೆ ಕರೆ ಮಾಡಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ವಿದ್ಯುತ್ ಕಂಬಗಳ ದುರಸ್ತಿಗಾಗಿ ಹರಸಾಹಸಪಡುತ್ತಿದ್ದ ಸಿಬ್ಬಂದಿ ಕರೆ ಸ್ವೀಕರಿಸುವ ಸ್ಥಿತಿಯಲ್ಲಿರಲಿಲ್ಲ. ಸಾರ್ವಜನಿಕರ ಕರೆಗಳಿಂದ ಬೇಸತ್ತ ಮೆಸ್ಕಾಂ ಸಿಬ್ಬಂದಿ, ಬಿರುಗಾಳಿಗೆ ಮರ ಬಿದ್ದು ಹಲವೆಡೆ ವಿದ್ಯುತ್ ಕಂಬಗಳು ತುಂಡರಿಸಲ್ಪಟ್ಟಿದೆ. ದುರಸ್ತಿ ಕಾರ್ಯದಲ್ಲಿ ನಾವೆಲ್ಲಾ ತೊಡಗಿದ್ದೇವೆ .ಕರೆಗಳನ್ನು ಸ್ವೀಕರಿಸುವ ಸ್ಥಿತಿಯಲ್ಲಿ ನಾವಿಲ್ಲ. ದಯವಿಟ್ಟು ವಿದ್ಯುತ್ ಯಾಕಿಲ್ಲ ಎಂದು ಕೇಳಲು ಫೋನಾಯಿಸಬೇಡಿ. ನಾಳೆಯೂ ವಿದ್ಯುತ್ ಬಾರದಿದ್ದಲ್ಲಿ ಸಂಪರ್ಕಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದರು.