ತಡೆ ರಹಿತ ವಿದ್ಯುತ್ ಪೂರೈಸುತ್ತಲೇ ದೋಷ ನಿವಾರಣೆ!

| Published : Jun 14 2024, 01:04 AM IST

ಸಾರಾಂಶ

ದಾವಣಗೆರೆ ಬಿಐಇಟಿ ಕಾಲೇಜು ಆವರಣದಲ್ಲಿ ಕೆಪಿಟಿಸಿಎಲ್‌ ಬ್ರೆಜಿಲ್‌ನಿಂದ ಸುಮಾರು ₹16 ಕೋಟಿ ವೆಚ್ಚದ ಇನ್ಸುಲೇಟೆಡ್‌ ಏರಿಯಲ್ ವರ್ಕ್ ಫ್ಲಾಟ್ ಫಾರಂ ವಾಹನ ಬಳಸಿ, ಹೈಟೆನ್ಷನ್ ವಿದ್ಯುತ್ ಮಾರ್ಗದ ಕಾಮಗಾರಿ ಕೈಗೊಂಡಿರುವುದು

ಕನ್ನಡಪ್ರಭ ವಾರ್ತೆ ದಾವಣಗೆರೆ

ಹೈಟೆನ್ಷನ್ ವಿದ್ಯುತ್ ಮಾರ್ಗದ ಕೆಲಸ, ಕಾರ್ಯಕ್ಕೆ ಗಂಟೆಗಟ್ಟಲೇ ವಿದ್ಯುತ್ ಕಡಿತದ ಬದಲಿಗೆ, ವಿದ್ಯುತ್ ಅಡಚಣೆ ಇಲ್ಲದೇ ದುರಸ್ತಿ ಕೈಗೊಳ್ಳುವ ಬ್ರೆಜಿಲ್‌ ನಿರ್ಮಿತ ಅತ್ಯಾಧುನಿಕ ವಾಹನವು ಈಗ ಕೆಪಿಟಿಸಿಎಲ್‌ಗೆ ವರವಾಗಿ ಪರಿಣಮಿಸಿದ್ದು, ಇದರಿಂದಾಗಿ ನಿಗಮಕ್ಕೆ ಆದಾಯದ ಜೊತೆಗೆ ಗ್ರಾಹಕರಿಗೆ ಸಮರ್ಪಕ ವಿದ್ಯುತ್ ಪೂರೈಸಿದ ಆತ್ಮತೃಪ್ತಿಗೂ ಪಾತ್ರವಾಗಿದೆ.

ಬ್ರೆಜಿಲ್‌ನಿಂದ ಆಮದು ಮಾಡಿಕೊಂಡ ಇನ್ಸುಲೇಟೆಡ್‌ ಏರಿಯಲ್ ವರ್ಕ್ ಫ್ಲಾಟ್‌ ಫಾರಂ ವಾಹನವು ಸದ್ಯಕ್ಕೆ 66 ಕಿಲೋ ವ್ಯಾಟ್‌ನಿಂದ 110 ಕೆವಿ, 220 ಕೆವಿ ಹಾಗೂ 400 ಕೆವಿವರೆಗೆ ನಾಲ್ಕೂ ವೋಲ್ಟೇಜ್ ಲೆವೆಲ್‌ನಲ್ಲಿ ನಿರಂತರ ವಿದ್ಯುತ್‌ ಪೂರೈಕೆಯಾಗುತ್ತಿರುವಂತೆಯೇ ದುರಸ್ತಿ, ಇನ್ಸುಲೇಟರ್ ಪರಿಶೀಲನೆ, ಬದಲಾವಣೆ, ವಿದ್ಯುತ್ ತಂತಿಗಳಲ್ಲಿ ಡ್ಯಾಮೇಜ್ ಆಗಿದ್ದರೆ, ಜಂಪ್‌ ಟೈಟ್ ಮಾಡಲು ಹೀಗೆ ನಾನಾ ರೀತಿ ಯಂತ್ರ ಬಳಸುವ ಮೂಲಕ ಕೆಪಿಟಿಸಿಎಲ್ ಅತ್ಯಾಧುನಿಕ ಸೌಲಭ್ಯ ಬಳಸಿ, ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಮುಂದಾಗಿದೆ.

ಕೆಪಿಟಿಸಿಎಲ್‌ನಿಂದ 220 ಕೆವಿ ಗುತ್ತೂರು ದಾವಣಗೆರೆ ಮಾರ್ಗ-1ರ ಇನ್ಸುಲೇಟೆಡ್‌ ಏರಿಯಲ್ ವರ್ಕ್ ಫ್ಲಾಟ್ ಫಾರಂ ವಾಹನದ ಸಹಾಯದಿಂದ ಯಾವುದೇ ವಿದ್ಯುತ್ ಅಡಚಣೆ ಇಲ್ಲದಂತೆ, ಇಲ್ಲಿನ ಬಿಐಇಟಿ ಕಾಲೇಜು ಆವರಣದಲ್ಲಿ ಚಿತ್ರದುರ್ಗ ಹಾಟ್ ಲೈನ್‌ ಉಪ ವಿಭಾಗದ ಅಧಿಕಾರಿ, ಸಿಬ್ಬಂದಿ ಜಂಪ್‌ನಲ್ಲಿದ್ದ ಹಾಟ್ ಸ್ಪಾಟ್‌ ದೋಷವನ್ನು ಸರಿಪಡಿಸುತ್ತಿರುವುದು, ಇದೀಗ ಜನರನ್ನು ಕುತೂಹಲದಿಂದ ಕೆರಳಿಸುತ್ತಿದೆ. ಹೈಟೆನ್ಷನ್ ವಿದ್ಯುತ್ ಮಾರ್ಗದಲ್ಲಿ ಅತ್ಯಾಧುನಿಕ ವಾಹನ ಬಳಸಿ, ಕೆಪಿಟಿಸಿಎಲ್‌ ಅಧಿಕಾರಿಗಳು, ಇಂಜಿನಿಯರ್‌, ಸಿಬ್ಬಂದಿ ದೋಷ ನಿವಾರಿಸುವ ಕಾರ್ಯದಲ್ಲಿ ತೊಡಗಿದ್ದರು.

ನಿಗಮಕ್ಕೆ ಆಗುವ ವಿದ್ಯುತ್ ನಷ್ಟ, ಗ್ರಾಹಕರಿಗೆ ಉಂಟಾಗುವ ವಿದ್ಯುತ್ ಅಡಚಣೆ ತಪ್ಪಿಸಲು ಸಾಮಾನ್ಯವಾಗಿ ಹೈಟೆನ್ಷನ್ ವಿದ್ಯುತ್ ಮಾರ್ಗ ಆಫ್‌ ಮಾಡಿ, ದುರಸ್ಥಿ ಕೈಗೊಳ್ಳಬೇಕಿತ್ತು. ಅದು ಗಂಟೆಗಟ್ಟಲೇ, ದಿನಗಟ್ಟಲೇಯೂ ಆಗುತ್ತಿತ್ತು. ಇದರಿಂದಾಗಿ ಜಿಲ್ಲಾದ್ಯಂತ ಗಂಟೆಗಟ್ಟಲೇ ವಿದ್ಯುತ್ ಅಡಚಣೆಯಾಗುತ್ತಿತ್ತು ಆದರೆ, ಬ್ರೆಜಿಲ್‌ನಿಂದ ತರಿಸಿರುವ ಅತ್ಯಾಧುನಿಕ ಹೈಡ್ರಾಲಿಕ್ ವಾಹನವಂತೂ ಅನೇಕ ರಾಜ್ಯಗಳ ಇಂಧನ ಇಲಾಖೆಗಳಿಗೆ ವರವಾಗಿ ಪರಣಮಿಸಿದೆ. ಇಂಧನ ಇಲಾಖೆ ಆದಾಯಕ್ಕೂ ಹೊಡೆತ ಬೀಳದಂತೆ, ಅಡಚಣೆ ಇಲ್ಲದೇ ವಿದ್ಯುತ್ ಪೂರೈಸುತ್ತಲೇ ದೋಷ ಸರಿಪಡಿಸುವ ವಾಹನ ಈಗ ಇಂಧನ ಇಲಾಖೆ ಕಣ್ಮಣೆಯಾಗಿದೆ.

ಸುಮಾರು ₹16 ಕೋಟಿ ಮೌಲ್ಯದ ಇನ್ಸುಲೇಟೆಡ್‌ ಏರಿಯಲ್ ವರ್ಕ್ ಫ್ಲಾಟ್‌ ಫಾರಂ ವಾಹನದ ಜೊತೆಗೆ ಕೆಲವು ಟೂಲ್ಸ್‌ಗಳು ಬರುತ್ತವೆ. ಕರ್ನಾಟಕ, ಪಂಜಾಬ್‌, ಮಧ್ಯಪ್ರದೇಶ, ಉತ್ತರ ಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನದಲ್ಲಿ ಮಾತ್ರ ಇಂತಹ ವಾಹನ ಇವೆ. ರಾಜ್ಯದಲ್ಲಿ ಇಂತಹ 3 ವಾಹನಗಳಿವೆ. ವಿದ್ಯುತ್‌ ಪ್ರವಹಿಸುತ್ತಿದ್ದಾಗಲೇ ದೋಷ ಸರಿಪಡಿಸುವುದೂ ಸೇರಿ ನಾನಾ ಕಾರ್ಯಕ್ಕೆ ಯಂತ್ರ ಬಳಕೆಯಾಗುತ್ತದೆ. ನುರಿತ ಎಂಜಿನಿಯರ್‌ಗಳು, ಅನುಭವಿ ಮೆಕ್ಯಾನಿಕ್‌ಗಳು ಮಾತ್ರ ಇದನ್ನು ನಿರ್ವಹಣೆ ಮಾಡುತ್ತಾರೆ. ಪ್ರತಿ ವಾಹನಕ್ಕೆ 9 ಸಿಬ್ಬಂದಿ ಇರುತ್ತಾರೆ. ಒಮ್ಮೆಗೆ ಕ್ರೇನ್‌ನಲ್ಲಿ 3 ಜನ ಮೇಲೆ ಹೋಗಿ ದೋಷ ಸರಿಪಡಿಸುವ ಕೆಲಸ ಮಾಡಬಹುದು.

ಸಾಮಾನ್ಯವಾಗಿ 220 ಕೆವಿ ಮಾರ್ಗದಲ್ಲಿ ಒಂದು ಇನ್ಸುಲೇಟರ್ ಬದಲಿಸಬೇಕೆಂದರೂ ಕನಿಷ್ಟ 4 ತಾಸು ಬೇಕು. 1 ಗಂಟೆಗೆ 6 ಲಕ್ಷ ಯೂನಿಟ್‌ ಪೂರೈಸುವ ಮಾರ್ಗ ಬಂದ್ ಆದರೆ, 4 ಗಂಟೆಗೆ 24 ಲಕ್ಷ ಯೂನಿಟ್‌ ಸ್ಥಗಿತಗೊಂಡು, ಕೆಪಿಟಿಸಿಎಲ್‌ಗೆ ಸುಮಾರು ₹80 ಲಕ್ಷ ನಷ್ಟವಾಗುತ್ತದೆ. ಆದರೆ, ಇಂತಹ ನಷ್ಟ ಸರಿದೂಗಿಸಲು, ಸಮರ್ಪಕ ವಿದ್ಯುತ್ ಪೂರೈಕೆ ಎರಡಕ್ಕೂ ವರದಂತೆ ಬಂದಿರುವುದೇ ಈ ವಾಹನ. ವಿದ್ಯುತ್ ಪೂರೈಕೆ ಇದ್ದಾಗಲೇ ಸಿಬ್ಬಂದಿ ಕಂಡಕ್ಟಿವ್‌ ಸೂಟ್ ಧರಿಸಿ, ದುರಸ್ತಿ ಕೈಗೊಳ್ಳುತ್ತಾರೆ. ಇದು ಕೆಪಿಟಿಸಿಎಲ್‌ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಲು ಸಹಕಾರಿಯಾಗಿದೆ.

ಬೆಂಗಳೂರು, ಚಿತ್ರದುರ್ಗ, ಹುಬ್ಬಳ್ಳಿ ಹೀಗೆ ರಾಜ್ಯದ ಮೂರು ಕಡೆ ಮಾತ್ರ ಇಂತಹ ಇನ್ಸುಲೇಟೆಡ್‌ ಏರಿಯಲ್ ವರ್ಕ್ ಫ್ಲಾಟ್ ಫಾರಂ ವಾಹನ ಇದ್ದು, ಚಿತ್ರದುರ್ಗ ಉಪ ವಿಭಾಗ ವ್ಯಾಪ್ತಿಯ ದಾವಣಗೆರೆ, ಚಿತ್ರದುರ್ಗ, ತುಮಕೂರು ಜಿಲ್ಲೆಗಳಲ್ಲಿ ವಾಹನ ಬಳಕೆಯಾಗುತ್ತಿದೆ. 66 ಕೆವಿ ಮಾರ್ಗದಿಂದ 400 ಕೆವಿ ವೋಲ್ಟೇಜ್‌ವರೆಗೆ ಅಡಚಣೆ ಇಲ್ಲದೇ ವಿದ್ಯುತ್ ಪೂರೈಕೆ, ದುರಸ್ಥಿ ಕಾರ್ಯ ಕೈಗೊಳ್ಳುವ ಯಂತ್ರ ಬಳಸಲ್ಪಡುತ್ತಿದೆ. ಸದ್ಯಕ್ಕೆ ವಾಹನ ದಾವಣಗೆರೆಯಲ್ಲಿ ಸೇವೆಗೆ ಬಳಕೆಯಾಗುತ್ತಿದೆ.

ಕೆಪಿಟಿಸಿಎಲ್‌ ಕಾರ್ಯ ನಿರ್ವಾಹಕ ಅಭಿಯಂತರ ನೂರ್ ಅಹಮ್ಮದ್ ಷರೀಫ್‌, ಎಇಇ ಎಲ್.ವಿ.ಶ್ರೀನಿವಾಸ, ಎಇ ಗೋವರ್ದನ, ಜೆಇ ಸಂಗಪ್ಪ, ಮೆರಿಟ್ ಗ್ರೇಡ್ ಮೆಕ್ಯಾನಿಕ್‌ ಆರೀಫ್‌ವುಲ್ಲಾ, ಮೆಕ್ಯಾನಿಕ್‌ 1 ಆದ ಯೋಗೇಶ, ಸಿಬ್ಬಂದಿ ಆನಂದರಾವ್‌, ರಾಘ‍ವೇಂದ್ರ, ರುದ್ರಮುನಿ, ತಿಪ್ಪೇಸ್ವಾಮಿ ದಾವಣಗೆರೆಯಲ್ಲಿ ಇಂತಹದ್ದೊಂದು ಅತ್ಯಾಧುನಿಕ ಯಂತ್ರದ ವಾಹನ ಸಮೇತ ಹೈಟೆನ್ಷನ್ ವಿದ್ಯುತ್ ಮಾರ್ಗ ದುರಸ್ತಿ ಕೈಗೊಂಡಿದ್ದಾರೆ.