ಟ್ರಸ್ಟಿಗಳೇ 2008 ರಿಂದ ಬಂದ ಹರಪೀಠದ ಪೈಸೆ ಪೈಸೆ ಲೆಕ್ಕ ಕೊಡಿ ಎಂದು ಆಗ್ರಹಿಸಿ ಮಂಗಳವಾರ ಹರಿಹರ ಪಂಚಮಸಾಲಿ‌ ಗುರುಪೀಠದ ಆವರಣದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ ಸಮಾಜದ 250ಕ್ಕೂ ಹೆಚ್ಚು ಜನತೆ ಪ್ರತಿಭಟನೆ ನಡೆಸಿದ್ದಾರೆ.

- ಪಂಚಮಸಾಲಿ ಪೀಠದ ಧರ್ಮದರ್ಶಿಗಳು, ಟ್ರಸ್ಟಿಗಳಿಂದ ಹಣ ದುರ್ಬಳಕೆ ಎಂದು ಆರೋಪಿಸಿ ಪ್ರತಿಭಟನೆ - ಶ್ವಾಸ ಪೀಠ ಅಥವಾ ಪಂಚಮಸಾಲಿ ಪೀಠ ಆಯ್ಕೆ ಮಾಡಿಕೊಳ್ಳಲು ಮಾ.24ರ ನೀಡಿದ್ದ ಗಡುವು ಹಿನ್ನೆಲೆ ಆಗಮಿಸಿದ್ದ ಜನತೆ

- - -

ಕನ್ನಡಪ್ರಭ ವಾರ್ತೆ ಹರಿಹರ

ಟ್ರಸ್ಟಿಗಳೇ 2008 ರಿಂದ ಬಂದ ಹರಪೀಠದ ಪೈಸೆ ಪೈಸೆ ಲೆಕ್ಕ ಕೊಡಿ ಎಂದು ಆಗ್ರಹಿಸಿ ಮಂಗಳವಾರ ಹರಿಹರ ಪಂಚಮಸಾಲಿ‌ ಗುರುಪೀಠದ ಆವರಣದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ ಸಮಾಜದ 250ಕ್ಕೂ ಹೆಚ್ಚು ಜನತೆ ಪ್ರತಿಭಟನೆ ನಡೆಸಿದರು.

ಹರಿಹರ ಪಂಚಮಸಾಲಿ ಪೀಠದ ವಚನಾನಂದ ಶ್ರೀ ಅವರ ನಡುವಳಿಕೆ ಹಾಗೂ ಶ್ವಾಸ ಪೀಠ ಅಥವಾ ಪಂಚಮಸಾಲಿ ಪೀಠ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಲು ಟ್ರಸ್ಟ್‌ನ ಕೆಲ ಸದಸ್ಯರು ಮಾ.24 ಅಂತಿಮ ಗಡುವು ನೀಡಿದ್ದಾರೆ ಎಂಬ ಮಾಹಿತಿ ಹಿನ್ನೆಲೆ ರಾಜ್ಯದ ನಾನಾ ಕಡೆಯಿಂದ ಸಮಾಜದ ಜನತೆ ಆಗಮಿಸಿದ್ದರು.

ಮಠದ ಹಣ 2008 ರಿಂದಲೂ ದುರ್ಬಳಕೆಯಾಗಿದೆ ಎಂದು ಆರೋಪಿಸಿ ಹೂವಿನ ಹಡಗಲಿ ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ ಅವರ ನೇತೃತ್ವದಲ್ಲಿ ಲೆಕ್ಕ ಕೊಡಿ ಲೆಕ್ಕ ಕೊಡಿ, ಧರ್ಮದರ್ಶಿಗಳೇ ಲೆಕ್ಕ ಕೊಡಿ ಎಂದು ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.

ಕಾರ್ಯಕ್ರಮಗಳ ಜಾರಿಗೊಳಿಸಿಲ್ಲ:

ಈ ಸಂದರ್ಭ ಪೀಠದ ಆಡಳಿತಾಧಿಕಾರಿ ಡಾ. ಎಚ್.ಪಿ. ರಾಜಕುಮಾರ ಮಾತನಾಡಿ, ಪ್ರತಿ 5 ವರ್ಷಕ್ಕೊಮ್ಮೆ ಪೀಠದ ಧರ್ಮದರ್ಶಿಗಳು ಹಾಗೂ ಟ್ರಸ್ಟಿಗಳು ಶೇ.25 ರಷ್ಟು ಬದಲಾಗಬೇಕು. ಆದರೆ, ಅವರೇ ಇದುವರೆಗೆ ಮುಂದುವರೆಯುತ್ತಿದ್ದಾರೆ. ಸಮಾಜದ ಬಡಮಕ್ಕಳಿಗೆ ವಿದ್ಯಾಭ್ಯಾಸ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಇದುವರೆಗೆ ಅನುಷ್ಠಾನಕ್ಕೆ ತಂದಿಲ್ಲ ಎಂದು ಆಪಾದಿಸಿದರು.

ಕಳೆದ ಎರಡೂವರೆ ವರ್ಷದಿಂದ ಲೆಕ್ಕ ಕೇಳುತ್ತಿದ್ದೇವೆ. ಇದೂವರೆಗೆ ನೀಡಿಲ್ಲ. ಈ ಬಗ್ಗೆ ಕೇಳಿದವರನ್ನು ಟ್ರಸ್ಟ್‌ನಿಂದಲೇ ತೆಗೆದು ಹಾಕಲಾಗುತ್ತಿದೆ. ಹಾಗಾಗಿ, ಮಠಕ್ಕೆ ಎಚ್.ಪಿ. ಬಾಬಣ್ಣ, ಪರಮೇಶ್ವರ ಗೌಡರ ನೇತೃತ್ವದಲ್ಲಿ 11 ಜನರನ್ನು ಒಳಗೊಂಡ ಹೊಸ ಟ್ರಸ್ಟ್‌ ರಚನೆಗೆ ಮುಂದಾಗಲಿದ್ದೇವೆ ಎಂದರು.

ವಿಶೇಷ ಆಹ್ವಾನಿತ ಗಡಿನಾಡು ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಅವರು ಮಾತನಾಡಿ, ರಾಜ್ಯದ ಬಳ್ಳಾರಿ, ಹೊಸಪೇಟೆ, ಹರಿಹರ, ದಾವಣಗೆರೆ, ಹಿರೇಕೆರೂರು, ಶಿಗ್ಗಾವಿಯಲ್ಲಿ ಶ್ರೀಪೀಠದ ಹೆಸರಿಗೆ ಆಸ್ತಿಗಳು ಇವೆ. ಕಳೆದ 10ರಂದು ನಡೆದ ಸಭೆಯಲ್ಲಿ ಭಾವಿ ಬೆಟ್ಟಪ್ಪನವರೇ ಟ್ರಸ್ಟಿಗಳಾದ ಉಮಾಪತಿ ಹಾಗೂ ಚಂದ್ರಶೇಖರ್‌ ಪೂಜಾರ್‌ ₹7 ಕೋಟಿ ನುಂಗಿದ್ದಾರೆ ಎಂದು ಹೇಳಿದ್ದರು. ಮಠದ ಸಭೆಯಲ್ಲಿ ನಡೆದ ಠರಾವು ಪ್ರತಿಗಳನ್ನು ಸಮಾಜದ ಜನತೆಯ ಮುಂದಿಡಿ ಎಂದರು.

ಸಾವಿನ ರಹಸ್ಯ ಬಯಲಾಗಲಿ:

ಪೀಠ ಸ್ಥಾಪನೆ ಆದಾಗಿನಿಂದ ಮೂವರೂ ಶ್ರೀಗಳನ್ನು ನೀವೇ ಆರಿಸಿ ತಂದಿದ್ದೀರಿ. ಲೆಕ್ಕ ಕೇಳಿದ ಕಾರಣ ಅವರನ್ನು ಪೀಠದಿಂದ ವಜಾ ಮಾಡಲು ಹೊರಡುತ್ತೀರಿ. ಹಿಂದಿನ ಲಿಂ. ಡಾ. ಮಹಂತ ಶಿವಾಚಾರ್ಯ ಶ್ರೀ ಅವರ ಅಂತಿಮ ದಿನಗಳಲ್ಲಿ ಅವರ ಜತೆ ಇದ್ದವರು ಯಾರು ಯಾರು ಊಟೋಪಚಾರಗಳನ್ನು ಕೊಡುತ್ತಿದ್ದರು ಎಂಬುದು ತನಿಖೆ ಆಗಿ ಅವರ ಸಾವಿನ ರಹಸ್ಯ ಬಯಲಾಗಬೇಕು ಎಂದರು.

ಹಣ ಕೊಟ್ಟವರಿಗೆ ರಶೀದಿಯೇ ನೀಡಿಲ್ಲ:

ರಾಣೆಬೆನ್ನೂರು ಮಾಜಿ ಶಾಸಕ ಅರುಣ್‌ಕುಮಾರ್‌ ಪೂಜಾರ್‌ ಮಾತನಾಡಿ, ಇದು ಲೆಕ್ಕ ಕೊಡದ ಟ್ರಸ್ಟಿಗಳ ವಿರುದ್ಧ ಪ್ರತಿಭಟನೆ ಅಂತ್ಯ ಅಲ್ಲ ಆರಂಭ. ಲೆಕ್ಕ ಕೊಡದಿದ್ದದ್ದು ಟ್ರಸ್ಟಿಗಳ ತಪ್ಪಲ್ಲ. ನಮ್ಮದೇ ತಪ್ಪು. ಅಂದೇ ಲೆಕ್ಕ ಕೇಳಬೇಕಿತ್ತು. ಹಣ ಪಡೆದವರು ಅಂದೇ ರಶೀದಿ ಕೊಡಬೇಕಿತ್ತು. ಆದರೆ ಅವರು ಕೊಡಲಿಲ್ಲ. ಅಂದು ಸೋಮಣ್ಣ, ಬಸಣ್ಣ, ಸುಧಾಕರ್‌, ಸಿದ್ದೇಶ್ವರ ₹10 ಲಕ್ಷ ನೀಡಿದ್ದರು. ಅವರಿಗೂ ರಶೀದಿ ನೀಡಿಲ್ಲ ಎಂದರು.

ಸೋಲಿಗೆ ಅವರೇ ಕಾರಣ:

ನನಗೆ ಇಂದು ಎಲ್ಲಿ ಕೊಟ್ಟಿದ್ದಿರಿ ಎನ್ನುತ್ತಾರೆ. ಅವರ ಹಾಗೂ ನನ್ನ ಮನೆ ದೇವರು ಕೊಟ್ರಯ್ಯ, ಇಲ್ಲಿಯೇ ತುಂಗಭದ್ರಾ ನದಿಯ ನೀರಿನ ಟ್ಯಾಂಕ್‌ ಇದೆ. ಬಂದಲ್ಲಿ ಇಬ್ಬರೂ ನೀರು ಹಾಕಿಕೊಂಡು ಕೊಟ್ರಯ್ಯನ ಬಳಿ ಹೋಗೋಣ. ಅಲ್ಲಿ ಕೊಟ್ಟಿಲ್ಲ ಎಂದು ಆಣೆ ಮಾಡಲಿ. ನಾನು ಕೊಟ್ಟಿದ್ದೇನೆ ಎಂದು ಆಣೆ ಮಾಡುತ್ತೇನೆ. ದೂರವೆನಿಸಿದರೆ, ಸಮೀಪ ಇರುವ ಶ್ರೀ ವೀರಭದ್ರೇಶ್ವರ ಗುಡಿಗೆ ಹೋಗೋಣ, ಅದೂ ಬೇಡವೆಂದರೆ ಇಲ್ಲೇ ಇರುವ ಲಿಂ. ಮಹಂತರ ಗದ್ದಿಗೆಯಲ್ಲಿ ಆಣೆ ಪ್ರಮಾಣ ಮಾಡಲಿ. ನನ್ನ ಚಾವಿಯನ್ನೇ ಅವರ ಕೈಯಲ್ಲಿ ನೀಡಿದ್ದೆ. ನನ್ನ ಸೋಲಿಗೆ ಅವರೇ ಕಾರಣ ಎಂದು ಟ್ರಸ್ಟಿ ಚಂದ್ರಶೇಖರ್‌ ಪೂಜಾರ್‌ ಹೆಸರು ಹೇಳದೆ ಕಿಡಿಕಾರಿದರು.

ಶ್ರೀ ಮಠದ ದಾಸೋಹ ಸಮಿತಿ ಅಧ್ಯಕ್ಷ ದಾವಣಗೆರೆಯ ನ್ಯಾಯವಾದಿ ಪ್ರಕಾಶ ಪಾಟೀಲ, ಹರಿಹರದ ಎಚ್.ಪಿ. ಬಾಬಣ್ಣ, ನಗರಸಭೆಯ ಮಾಜಿ ಸದಸ್ಯ ರಾಜಣ್ಣ ಮೂಟಗಿ, ಮುಖಂಡರಾದ ಸಿದ್ದು ಚಿಕ್ಕಬಿದರಿ, ರಾಜಣ್ಣ ಬುಡ್ದನಗೌಡರ, ಎನ್.ಡಿ ಪಾಟೀಲ, ದಾವಣಗೆರೆಯ ಜೆ.ಎಸ್. ಚನ್ನಬಸಪ್ಪ, ಬಿ.ಸಿ. ಹನುಮಗೌಡರ, ಡಾ.ವೀರಾಪೂರ್‌, ಶಂಕರಗೌಡ, ಹಾವೇರಿಯ ಡಾ. ಬಸವರಾಜ ವೀರಾಪುರ, ಸೋಮಣ್ಣ ಇತರರು ಭಾಗವಹಿಸಿದ್ದರು.

- - -

(ಬಾಕ್ಸ್‌-1) * ನನ್ನ ಹೆಸರಲ್ಲಿ ಇಂಚು ಭೂಮಿಯೂ ಇಲ್ಲ, ಹಣ ಮಾಡಲು ಬಂದಿಲ್ಲ: ವಚನಾನಂದ ಶ್ರೀ ಮಠದ ಸಭಾ ಭವನದಲ್ಲಿ ಭಕ್ತರನ್ನು ಉದ್ದೇಶಿಸಿ ಪಂಚಮಸಾಲಿ ಪೀಠದ ವಚನಾನಂದ ಶ್ರೀ ಮಾತನಾಡಿ, ಪೀಠವು ಸಮಾಜದ ಬಡಜನರ ಬೆವರಿನ ಪ್ರತೀಕ. ಪೀಠವನ್ನು ನಾನು ಹುಡುಕಿಕೊಂಡು ಬಂದಿಲ್ಲ. ಪೀಠವೇ ನನ್ನನ್ನು ಹುಡುಕಿಕೊಂಡು ಬಂದಿದೆ. ನಾನು ಸನ್ಯಾಸತ್ವ ಸ್ವೀಕರಿಸಿ ಬರುವ ಗುರುಪೂರ್ಣಿಮೆಗೆ 25 ವರ್ಷವಾಗುತ್ತವೆ. ಇದುವರೆಗೆ ನನ್ನ ಪೂರ್ವಜನ್ಮದ ತಂದೆ ಅಂತಿಮ ಗಳಿಗೆಯಲ್ಲಿದ್ದಾಗ ಹೋಗಿದ್ದೆ. ಹೋದಾಗ ಅವರು ತೀರಿಕೊಂಡಿದ್ದ ಕಾರಣ ಆಸ್ಪತ್ರೆಯಲ್ಲಿಯೇ ಹಾರ ಹಾಕಿ ಬಂದಿದ್ದೆ. ಮತ್ತೆ ಅಲ್ಲಿ ಪಾದ ಇಟ್ಟಿಲ್ಲ ಎಂದರು.

ನನ್ನ ಹೆಸರಲ್ಲಿ ಒಂದು ಇಂಚೂ ಭೂಮಿ ಇಲ್ಲ. ಹಣ ಮಾಡಲು ಇಲ್ಲಿಗೆ ಬಂದಿಲ್ಲ. ಇಲ್ಲಿನ ಹಣದ ಜವಾಬ್ದಾರಿಗಳು ಟ್ರಸ್ಟಿಗಳೇ ನೋಡಿಕೊಳ್ಳುತ್ತಾರೆ. ಪೀಠಾಧ್ಯಕ್ಷನಾದ ಮೇಲೆ ಇಲ್ಲಿಯವರೆಗೆ ಒಂದೇ ಬಂದು ರು. ಸಹ ನಾನು ಸ್ವೀಕರಿಸಿಲ್ಲ. ಉಳಿದಂತೆ ಬೆಂಗಳೂರಿನಲ್ಲಿ ಇರುವ ಶ್ವಾಸ ಪೀಠಕ್ಕೆ ಇಲ್ಲಿಂದಲೇ ಹಣ ಹೋಗುತ್ತದೆ ಎಂದು ಕೆಲವರು ಆಡಿದ್ದಾರೆ. 2018ರಿಂದ ಇಲ್ಲಿಯವರೆಗಿನ ನನ್ನ ಬ್ಯಾಂಕ್‌ ಖಾತೆಯ ವಿವರ ನೀಡುತ್ತೇನೆ. ಬೆಂಗಳೂರು ಮೂಲಕ ಎಲ್ಲಿಗಾದರೂ ಹೋಗಬೇಕಾದಾಗ ಮಾತ್ರ ಅಲ್ಲಿನ ಆಶ್ರಮದಲ್ಲಿ ತಂಗುತ್ತೆನೆ. ಆ ಆಶ್ರಮ ಬಾಡಿಗೆ ಕಟ್ಟಡದಲ್ಲಿ ಇದೆ. ಇದುವರೆಗೆ ನನ್ನ ಕಚ್ಚೆ, ಕೈ, ಬಾಯಿ ಶುದ್ಧವಾಗಿದೆ ಎಂದರು.

ಪಂಚಮಸಾಲಿ ಸಮಾಜವೇ ನನ್ನ ಶ್ವಾಸ, ನನ್ನ ಶಕ್ತಿ ಹಾಗೂ ಸಾಮರ್ಥ್ಯವನ್ನು ಸಮಾಜಕ್ಕೆ ಅರ್ಪಿಸಿದ್ದೇನೆ. ಸಮಾಜದ ಸಂಸ್ಕೃತಿ, ಪರಂಪರೆ ಉಳಿಸಲು ಬೆಳಸಲು ಇನ್ನು ಮುಂದೆ ಸಮಾಜದ ಅತಿ ಬಡವನ ಮನೆಗೂ ಹೊಗುತ್ತೇನೆ ಎಂದರು.

- - -

(ಬಾಕ್ಸ್‌-2) * ತಯಾರಾಗದ ದಾಸೋಹ: ಹೊರಗಿನಿಂದಲೇ ತಿಂಡಿ, ಊಟ ವ್ಯವಸ್ಥೆ

- 20 ವರ್ಷಗಳ ನಂತರ ಮಠಕ್ಕೆ ಆಗಮಿಸಿದ ಜೆಡಿಎಸ್‌ ಕಾರ್ಯಕರ್ತರು

ಹರ ಪೀಠದ ಲಾಂಛನದ ಕೆಳಗೆ ಲೆಕ್ಕ ಕೊಡಿ ಚಳವಳಿ ಎಂದು ಮುದ್ರಿಸಿದ ಟೋಪಿಗಳು, ಕಪ್ಪುಬಟ್ಟೆಯಲ್ಲಿ ಹರ ಲಾಂಛನದ ಲೆಕ್ಕಕೊಡಿ ಬಾವುಟ ಹಾರಾಡಿದವು. ಪೀಠದ ದಾಸೋಹ ಮಂದಿರ ಪ್ರಾರಂಭ ಆದಾಗಲಿಂದಲೂ ನಿರಂತರ ದಾಸೋಹ ನಡೆಯುತ್ತಿತ್ತು. ಆದರೆ, ಮಂಗಳವಾರ ದಾಸೋಹ ತಯಾರಾಗಲಿಲ್ಲ. ಬಂದ ಜನತೆಗೆ ಹೊರಗಿನಿಂದ ತಿಂಡಿ ಹಾಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.

ಪೀಠ ಆರಂಭವಾದ 2008ರ ನಂತರ ಟ್ರಸ್ಟ್‌ ಸದಸ್ಯರು ಹಾಗೂ ಮಾಜಿ ಶಾಸಕ ಶಿವಶಂಕರ್ ಅವರ ಒಳ ಜಗಳದಿಂದ ಇದುವರೆಗೆ ಪೀಠದ ಯಾವುದೇ ಕಾರ್ಯಕ್ರಮಗಳಲ್ಲಿ ಜೆಡಿಎಸ್ ಪಕ್ಷದ ಪದಾಧಿಕಾರಿಗಳು ಅಭಿಮಾನಿಗಳ ಮಠದಲ್ಲಿ ಕಾಣಿಸಿಕೊಂಡಿದ್ದಿಲ್ಲ. ಸುಮಾರು 20 ವರ್ಷಗಳ ನಂತರ ಜೆಡಿಎಸ್‌ ಕಾರ್ಯಕರ್ತರು ಮಠಕ್ಕೆ ಬಂದಿದ್ದು ವಿಶೇಷವಾಗಿತ್ತು.

- - - -24ಎಚ್‌ಆರ್‌ಆರ್‌03: ಹರಿಹರದ ಶಿವಮೊಗ್ಗ ರಸ್ತೆಯ ಹೊರವಲಯದ ವೀರಶೈವ ಲಿಂಗಾಯತ ಪಂಚಮಸಾಲಿ ಮಠದಲ್ಲಿ ಮಂಗಳವಾರ ಲೆಕ್ಕ ಕೊಡಿ ಚಳವಳಿ ನಡೆಯಿತು. ಸಮಾಜದ ವಿವಿಧ ಮುಖಂಡರು ಮಾತನಾಡಿದರು. -24ಎಚ್‌ಆರ್‌ಆರ್‌03ಎ: ವಚನಾನಂದ ಶ್ರೀ. ಪಂಚಮಸಾಲಿ ಪೀಠ.