ಅತಿಥಿ ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಯತ್ನ: ಶಾಸಕ ನೇಮರಾಜನಾಯ್ಕ

| Published : Feb 01 2024, 02:00 AM IST

ಸಾರಾಂಶ

ಸರ್ಕಾರ ಅತಿಥಿ ಶಿಕ್ಷಕರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಇವರಿಗೆ ನೀಡುವ ವೇತನ ಬಹಳ ಕಡಿಮೆ ಇದ್ದು, ಕೂಡಲೇ ಹೆಚ್ಚಿಸಬೇಕು ಎಂದು ಶಾಸಕ ನೇಮರಾಜನಾಯ್ಕ ಆಗ್ರಹಿಸಿದರು.

ಹಗರಿಬೊಮ್ಮನಹಳ್ಳಿ: ಮುಂದಿನ ಅಧಿವೇಶನದಲ್ಲಿ ಅತಿಥಿ ಶಿಕ್ಷಕರ ಸಮಸ್ಯೆಗಳ ಕುರಿತು ದ್ವನಿ ಎತ್ತುತ್ತೇನೆ ಎಂದು ಶಾಸಕ ಕೆ. ನೇಮರಾಜನಾಯ್ಕ ತಿಳಿಸಿದರು.

ಪಟ್ಟಣದ ಚಿಂತ್ರಪಳ್ಳಿಯ ಅಂಬೇಡ್ಕರ್ ಭವನದಲ್ಲಿ ನಡೆದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಅತಿಥಿ ಶಿಕ್ಷಕರ ಜಿಲ್ಲಾಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿ, ಸರ್ಕಾರ ಅತಿಥಿ ಶಿಕ್ಷಕರನ್ನು ಗೌರವಯುತವಾಗಿ ನಡೆಸಿಕೊಳ್ಳಬೇಕು. ಇವರಿಗೆ ನೀಡುವ ವೇತನ ಬಹಳ ಕಡಿಮೆ ಇದ್ದು, ಕೂಡಲೇ ಹೆಚ್ಚಿಸಬೇಕು ಎಂದರು.

ನಂದಿಪುರದ ಮಹೇಶ್ವರ ಸ್ವಾಮೀಜಿ ಮಾತನಾಡಿ, ದೇಶದ ಬೆಳವಣಿಗೆಯಲ್ಲಿ ಶಿಕ್ಷಕರ ಕೊಡುಗೆ ಅಪಾರವಾಗಿದ್ದು, ಅತಿಥಿ ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕಾಗಿ ಧಾರ್ಮಿಕ ಪರಿಷತ್ತು ಸದಾ ನಿಮ್ಮೊಂದಿಗೆ ಇರುತ್ತದೆ ಎಂದರು.

ಅತಿಥಿ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ಕರಡಿಗುಡ್ಡ ಮಾತನಾಡಿ, ಪ್ರತಿವರ್ಷವೂ ಹೊಸದಾಗಿ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳುವ ಪದ್ಧತಿ ಕೈಬಿಡಬೇಕು. ಅತಿಥಿ ಶಿಕ್ಷಕರನ್ನು ಹೊಸ ನೇಮಕಾತಿ ಕಾರಣ ನೀಡಿ ಬಿಡುಗಡೆಗೊಳಿಸದೆ ಮುಂದಿನ ಶೈಕ್ಷಣಿಕ ಸಾಲಿನವರೆಗೆ ಮುಂದುವರಿಸಬೇಕು. ಆಯಾ ಶಾಲೆಗಳಲ್ಲಿ ಸೇವಾ ಅನುಭವದ ದೃಢೀಕರಣ ಪತ್ರ ನೀಡಿ ಸೇವಾ ಭದ್ರತೆ ಒದಗಿಸಬೇಕು ಎಂದರು.

ಅತಿಥಿ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಹನುಮಂತಪ್ಪ ಮಾತನಾಡಿ, ಅತಿಥಿ ಶಿಕ್ಷಕ ಎಂಬ ಪದವನ್ನು ಕೈಬಿಟ್ಟು ಗೌರವ ಶಿಕ್ಷಕ ಎಂದು ನಮೂದಿಸಬೇಕು. ಅತಿಥಿ ಶಿಕ್ಷಕರಿಗೆ ಮಾಸಿಕ ಕನಿಷ್ಠ ವೇತನ ಹೆಚ್ಚಿಸಬೇಕು. ಅತಿಥಿ ಶಿಕ್ಷಕರನ್ನು ಕಾಯಂ ಮಾಡಬೇಕು. ನೇಮಕಾತಿಯಲ್ಲಿ ಶೇ. ೫ ಕೃಪಾಂಕ ಮೀಸಲಾತಿ ನಿಯಮ ಜಾರಿಗೊಳಿಸಬೇಕು ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಹ್ಯಾಟಿ ಲೋಕಪ್ಪ, ನೌಕರರ ಸಂಘದ ಅಧ್ಯಕ್ಷ ಎಂಪಿಎಂ ಮಂಜುನಾಥ, ದಾದೀಬಿ, ಮುಖಂಡರಾದ ಬ್ಯಾಟಿ ನಾಗರಾಜ, ಕನ್ನಿಹಳ್ಳಿ ಚಂದ್ರಶೇಖರ, ಅತಿಥಿ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಲಿಂಗೇಶ, ಜಿಲ್ಲಾ ಸಂಚಾಲಕ ದುರುಗೇಶ, ತಾಲೂಕಾಧ್ಯಕ್ಷ ಸತೀಶ್ ಕೊಳ್ಳಿ, ಸಂಘದ ರವಿಕುಮಾರ ಸಕ್ರಹಳ್ಳಿ, ವಿಜಯನಗರ ಜಿಲ್ಲೆಯ ಅತಿಥಿ ಶಿಕ್ಷಕ ಸಂಘದ ಎಲ್ಲ ತಾಲೂಕು ಅಧ್ಯಕ್ಷರು, ಸಂಘದ ಪದಾಧಿಕಾರಿಗಳು ಇದ್ದರು.