ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಕ್ಷಯರೋಗಕ್ಕೆ ನಿಗದಿತ ಉಚಿತ ಚಿಕಿತ್ಸೆ ಲಭ್ಯವಿದ್ದು, ವೈದ್ಯರ ಸಲಹೆಯಂತೆ 6 ರಿಂದ 8 ತಿಂಗಳು ಸರಿಯಾದ ಚಿಕಿತ್ಸೆ ಪಡೆದಲ್ಲಿ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎಂದು ಚಿತ್ರದುರ್ಗ ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ ಗಿರೀಶ್ ತಿಳಿಸಿದರು.

ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯ ಜಾನ್ ಮೈನ್ಸ್ ಆಫ್ ಆರ್.ಪ್ರವೀಣ್ ಚಂದ್ರ ವಲಯದಲ್ಲಿ ಆರೋಗ್ಯ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಉಚಿತ ಕ್ಷಯರೋಗ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಕಾರ್ಮಿಕರು ಹಾಗೂ ಸಿಬ್ಬಂದಿಗೆ ಜಾಗೃತಿ ಮೂಡಿಸಿ ಮಾತನಾಡಿದರು.

ಸಿರಿಗೆರೆಯ ಹೆರಿಗೆ ಮತ್ತು ಸ್ತ್ರೀರೋಗ ತಜ್ಞರಾದ ಡಾ.ಎಸ್.ಪವಿತ್ರ ಮಾತನಾಡಿ, ಪೋಷಕಾಂಶಯುಕ್ತ ಆಹಾರ ಸೇವನೆ ಮಾಡುವ ಮೂಲಕ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ರೋಗ ಬಂದ ಮೇಲೆ ಕಷ್ಟಪಡುವುದಕ್ಕಿಂತ, ಅದು ಬಾರದಂತೆ ಮುನ್ನೆಚ್ಚರಿಕೆ ವಹಿಸುವುದು ಬಹು ಮುಖ್ಯ. ನಮ್ಮ ಆರೋಗ್ಯ ನಮ್ಮ ಕೈಯಲ್ಲೇ ಇದೆ. ಈ ಹಿಂದೆ ಕ್ಷಯರೋಗಿಗಳಿಗೆ ಪೌಷ್ಟಿಕಾಂಶದ ಆಹಾರ ಕಿಟ್‍ಗಳನ್ನು ಒದಗಿಸಿದ ಮಾದರಿಯಲ್ಲೇ, ಮುಂದಿನ ದಿನಗಳಲ್ಲೂ ತಾಲೂಕಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಪೌಷ್ಟಿಕಾಂಶದ ಕಿಟ್‍ಗಳನ್ನು ಒದಗಿಸಲಾಗುವುದೆಂದರು.

ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ ಮಾತನಾಡಿ, ಜನರು ತಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಜಂಕ್ ಫುಡ್, ತಂಪು ಪಾನೀಯಗಳು ಮತ್ತು ಸಂಸ್ಕರಿಸಿದ ಆಹಾರ ಸೇವನೆಗೆ ಕಡಿವಾಣ ಹಾಕಬೇಕು. ಪೌಷ್ಟಿಕಾಂಶಯುಕ್ತ ಆಹಾರ ಪದಾರ್ಥಗಳನ್ನು ಸೇವಿಸುವ ಮೂಲಕ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಂಡು ಉತ್ತಮ ಆರೋಗ್ಯ ಹೊಂದಬೇಕು ಎಂದರು.


ಶಿಬಿರದಲ್ಲಿ ಕ್ಷಯರೋಗದ ಲಕ್ಷಣಗಳಿದ್ದ 62 ಜನರಿಗೆ ಎಕ್ಸ್-ರೇ ಮಾಡಲಾಗಿದ್ದು, ಅದರಲ್ಲಿ ಅಸಹಜತೆ ಕಂಡುಬಂದ 7 ಜನರನ್ನು ಕಫ ಪರೀಕ್ಷೆ ಹಾಗೂ ಹೆಚ್ಚಿನ ತಪಾಸಣೆಗೆ ಸಿದ್ಧತೆ ಮಾಡಿಕೊಳ್ಳಲಾಯಿತು. ಜಾನ್ ಮೈನಿಂಗ್ ವ್ಯವಸ್ಥಾಪಕ ಅಜಿತ್ ಕುಮಾರ್ ಮಾಳಿ, ಉಪ ವ್ಯವಸ್ಥಾಪಕ ಸಿಸುಭಾಷ್, ಸಹಾಯಕ ವ್ಯವಸ್ಥಾಪಕ ಬಿ.ವಿ. ದರ್ಶನ್, ಪ್ರಯೋಗಶಾಲಾ ಮೇಲ್ವಿಚಾರಕ ಮಾರುತಿ, ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಮಹೇಂದ್ರ, ಎಚ್.ಐ.ಓ. ಏಕಾಂತ್ ಕುಮಾರ್, ಸೈಯದ್ ಇಸ್ಮಾಯಿಲ್, ಹಾಲನಾಯ್ಕ, ಎಸಿಎಫ್ ಸಂಯೋಜಕ ಹರೀಶ್, ಸಿ.ಎಚ್.ಓ.ಗಳಾದ ಶಿವಕುಮಾರ್ ಮತ್ತು ಪುನೀತ್, ಎಕ್ಸರೇ ತಂತ್ರಜ್ಞೆ ಸೌಮ್ಯ ಇದ್ದರು.