ಕ್ಷಯರೋಗಿಗಳಿಗೆ ಬೇಕಿದೆ ಸಹಾಯಹಸ್ತ

| Published : Mar 29 2025, 12:34 AM IST

ಸಾರಾಂಶ

ಈಗಾಗಲೇ ಜಿಲ್ಲೆಯಲ್ಲಿ ಹಲವಾರು ಜನರು ಸ್ವಯಂಪ್ರೇರಣೆಯಿಂದ ಮುಂದೇ ಬಂದು ಕ್ಷಯರೋಗಿಗಳನ್ನು ದತ್ತು ಪಡೆದು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಹೀಗಾಗಿ ದತ್ತು ಪಡೆದುಕೊಳ್ಳುವವರು ಸಂಖ್ಯೆ ಹೆಚ್ಚಾಗುವುದು ಅವಶ್ಯವಾಗಿದೆ.

ಬಸವರಾಜ ಸರೂರ

ರಾಣಿಬೆನ್ನೂರು: ಮಾರಣಾಂತಿಕ ಕಾಯಿಲೆಯಾದ ಕ್ಷಯರೋಗದ ಬಗ್ಗೆ ಅರಿತುಕೊಂಡು ರೋಗದ ಹತೋಟಿಗೆ ಸರ್ಕಾರದ ಜತೆಗೆ ಸಾರ್ವಜನಿಕರು ಕೈಜೋಡಿಸುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಿಕ್ಷಯ ಮಿತ್ರ ಎಂಬ ಯೋಜನೆ ಜಾರಿಗೆ ತಂದಿದೆ. ಪ್ರಧಾನಮಂತ್ರಿಗಳ ಕ್ಷಯರೋಗ ಭಾರತ ಅಭಿಯಾನ, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮದಡಿ ಕೇಂದ್ರ ಸರ್ಕಾರ ಕ್ಷಯರೋಗಿಗಳ ಹೊಸ ಅನ್ವೇಷಣೆಯೊಂದಿಗೆ ಪರೀಕ್ಷಾ ವಿಧಾನಗಳನ್ನು ಅಳವಡಿಸಲಾಗಿದೆ. ಇದರ ಜತೆಗೆ ವಿಶ್ವದರ್ಜೆ ಗುಣಮಟ್ಟದ ಔಷಧಿಗಳನ್ನು ರೋಗಿಗಳಿಗೆ ಉಚಿತವಾಗಿ ನೇರ ನಿಗಾವಣೆ(ಡಾಟ್ಸ್) ಮೂಲಕ ಚಿಕಿತ್ಸೆ ನೀಡಲಾಗುತ್ತದೆ.

ಈ ಮೊದಲು ಕ್ಷಯರೋಗಿಗಳಿಗೆ ಆಹಾರ ಧಾನ್ಯ ಪಡೆಯಲು ₹500 ಮಾಸಿಕ ನೀಡಲಾಗುತ್ತಿತ್ತು. ಆದರೆ 2024ರ ನವೆಂಬರ್‌ದಿಂದ ಪ್ರತಿ ತಿಂಗಳು ₹1000 ನೇರವಾಗಿ ಚಿಕಿತ್ಸೆ ಮುಗಿಯುವ ತನಕ ಕ್ಷಯರೋಗಿಗಳ ಖಾತೆಗೆ ಜಮಾ ಮಾಡಲಾಗುತ್ತದೆ.

ಈ ನಿಕ್ಷಯಮಿತ್ರ ಯೋಜನೆಯನ್ನು ಆರಂಭಿಸಿ ಸಮಾಜದಲ್ಲಿನ ಗಣ್ಯವ್ಯಕ್ತಿಗಳು, ಬಹು ಕೈಗಾರಿಕೆಗಳು, ವಿವಿಧ ಕಂಪನಿಗಳು, ರಾಜಕೀಯ ವ್ಯಕ್ತಿಗಳು, ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಸಾರ್ವಜನಿಕರು ಸ್ವಇಚ್ಛೆಯಿಂದ ಕ್ಷಯರೋಗಿಗಳ ಆತ್ಮವಿಶ್ವಾಸ ಹೆಚ್ಚಿಸಲು ದತ್ತು ಪಡೆಯುವ ಮೂಲಕ ರೋಗಿಗಳ ಅನುಕೂಲವಾಗುವ ನಿಟ್ಟಿನಲ್ಲಿ ಪೌಷ್ಟಿಕ ಆಹಾರದ ಕಿಟ್, ಪ್ರೋಟಿನ್ ಪೌಡರ್ ಕಿಟ್ ನೀಡುವ ಜತೆಗೆ ಉದ್ಯೋಗ ಅವಕಾಶವನ್ನು ಒದಗಿಸುವ ಮೂಲಕ ದೇಶವನ್ನು ಕ್ಷಯರೋಗದಿಂದ ಮುಕ್ತವಾಗಿಸುವುದು ಯೋಜನೆಯ ಮೂಲ ಉದ್ದೇಶವಾಗಿದೆ.ಸಾರ್ವಜನಿಕರ ಪಾತ್ರ: ನಿಕ್ಷಯ ಮಿತ್ರ ಯೋಜನೆಯಡಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಕ್ಷಯರೋಗಿಗಳನ್ನು ದತ್ತು ಪಡೆದುಕೊಂಡು ತಮ್ಮ ಜನ್ಮದಿನದ ಕಾರ್ಯಕ್ರಮ, ಸ್ಟಾರ್ ನಟರ ಪುಣ್ಯಸ್ಮರಣೆ ಸೇರಿದಂತೆ ಅನೇಕ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಣೆ ಮಾಡುವ ಸಮಯದಲ್ಲಿ ಕ್ಷಯರೋಗಿಗಳಿಗೆ ಅಗತ್ಯವಿರುವ ಪೌಷ್ಟಿಕ ಆಹಾರದ ಕಿಟ್ ಅಥವಾ ಪ್ರೋಟಿನ್ ಪೌಡರ್ ವಿತರಿಸುವುದು ಸೇರಿದಂತೆ ರೋಗಿಗಳಿಗೆ ಅನುಕೂಲವಾಗುವಂತಹ ಇನ್ನತರೆ ಯಾವುದೇ ಸೌಲಭ್ಯಗಳನ್ನು ಒದಗಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳುವುದು ಮುಖ್ಯವಾಗಿದೆ.

ಈಗಾಗಲೇ ಜಿಲ್ಲೆಯಲ್ಲಿ ಹಲವಾರು ಜನರು ಸ್ವಯಂಪ್ರೇರಣೆಯಿಂದ ಮುಂದೇ ಬಂದು ಕ್ಷಯರೋಗಿಗಳನ್ನು ದತ್ತು ಪಡೆದು ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಹೀಗಾಗಿ ದತ್ತು ಪಡೆದುಕೊಳ್ಳುವವರು ಸಂಖ್ಯೆ ಹೆಚ್ಚಾಗುವುದು ಅವಶ್ಯವಾಗಿದೆ.

ಪೌಷ್ಟಿಕ ಆಹಾರದ ಕಿಟ್: ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮೂಲಕ ಸದೃಢ ಆರೋಗ್ಯ ಹೊಂದಬೇಕು. ಸಾರ್ವಜನಿಕರು, ಸಂಘ- ಸಂಸ್ಥೆಗಳು ಸ್ವಯಂಪ್ರೇರಿತರಾಗಿ ಮುಂದೆ ಬಂದು ಈ ನಿಕ್ಷಯಮಿತ್ರ ಎಂಬ ಯೋಜನೆಯಡಿ ಕ್ಷಯರೋಗಿ ಫಲಾನುಭವಿಗಳಿಗೆ ಸಹಾಯಹಸ್ತವನ್ನು ನೀಡಬೇಕು. ನಾನು ಸಹ ನನ್ನ ಜನ್ಮದಿನದ ಅಂಗವಾಗಿ ಕ್ಷಯರೋಗಿಗಳಿಗೆ ಪೌಷ್ಟಿಕ ಆಹಾರದ ಕಿಟ್ ವಿತರಿಸುವ ಕೆಲಸ ಮಾಡಿದ್ದೇನೆ ಎಂದು ಜಿಪಂ ಮಾಜಿ ಸದಸ್ಯ ಸಂತೋಷಕುಮಾರ ಪಾಟೀಲ ತಿಳಿಸಿದರು.ನಿಕ್ಷಯ ಮಿತ್ರ: ಕ್ಷಯರೋಗವನ್ನು ನಿರ್ವಹಣೆ ಮಾಡುವಲ್ಲಿ ಆರೋಗ್ಯ ಇಲಾಖೆ ಅಷ್ಟೆ ಅಲ್ಲ. ಇನ್ನಿತರ ಎಲ್ಲಾ ಇಲಾಖೆಗಳು ಹಾಗೂ ಸಾರ್ವಜನಿಕರು ಸಹಕಾರ ಅತ್ಯಗತ್ಯವಾಗಿದೆ. ಹಾಗಾಗಿ ನಿಕ್ಷಯ ಮಿತ್ರ ಎಂಬ ಯೋಜನೆಯನ್ನು ಯಶಸ್ವಿಗೊಳಿಸಲು ಸಾರ್ವಜನಿಕರ ಪಾತ್ರ ಮಹತ್ವವಾಗಿದೆ ಎಂದು ನಗರ ಕ್ಷಯರೋಗ ಆರೋಗ್ಯ ಸಂದರ್ಶಕರಾದ ಗಿರೀಶ ಮುರನಾಳ ತಿಳಿಸಿದರು.