ಪೌರಾಣಿಕತೆ, ಇತಿಹಾಸ, ಭಕ್ತಿ ಹಾಗೂ ಸಾಮಾಜಿಕ ಸೌಹಾರ್ದವನ್ನು ಕಲಾತ್ಮಕವಾಗಿ ಬೆಸೆದುಕೊಂಡಿರುವ ಸ್ಟೇಷನ್‌ ರಸ್ತೆಯ ಶ್ರೀ ಗಣೇಶೋತ್ಸವ ಮಂಡಳಿ ಟ್ರಸ್ಟ್‌ ಈ ಬಾರಿ 50ನೇ ವರ್ಷದ ಸಂಭ್ರಮದಲ್ಲಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ: ಪೌರಾಣಿಕತೆ, ಇತಿಹಾಸ, ಭಕ್ತಿ ಹಾಗೂ ಸಾಮಾಜಿಕ ಸೌಹಾರ್ದವನ್ನು ಕಲಾತ್ಮಕವಾಗಿ ಬೆಸೆದುಕೊಂಡಿರುವ ಸ್ಟೇಷನ್‌ ರಸ್ತೆಯ ಶ್ರೀ ಗಣೇಶೋತ್ಸವ ಮಂಡಳಿ ಟ್ರಸ್ಟ್‌ ಈ ಬಾರಿ 50ನೇ ವರ್ಷದ ಸಂಭ್ರಮದಲ್ಲಿದೆ. 1977ರಲ್ಲಿ ರಿಕ್ಷಾ ಚಾಲಕರಿಂದ ಸಣ್ಣ ಪ್ರಮಾಣದಲ್ಲಿ ಆರಂಭವಾದ ಉತ್ಸವ, ಐದು ದಶಕಗಳಲ್ಲಿ ವೈಭವದ ಗಣೇಶೋತ್ಸವವಾಗಿ ಬೆಳೆದಿದೆ. ಈ ಬಾರಿ ತುಳಜಾಪುರದ ತುಳಜಾಭವಾನಿಯನ್ನು ಕೇಂದ್ರವಾಗಿಟ್ಟುಕೊಂಡು ಭವ್ಯ ಚಲಿಸುವ ರೂಪಕ ಸಿದ್ಧಪಡಿಸಲಾಗಿದೆ.

ಸ್ಕಂದ ಪುರಾಣದ ಕಥಾನಕ ಆಧರಿಸಿ, ತಪೋನಿರತ ಅನುಭೂತಿಗೆ ಸಂಕಷ್ಟ ಎದುರಾದಾಗ ಪಾರ್ವತಿದೇವಿ ಪ್ರತ್ಯಕ್ಷಳಾಗಿ ರಕ್ಷಿಸುವ ಪ್ರಸಂಗವನ್ನು ರೂಪಕದಲ್ಲಿ ಕಟ್ಟಿಕೊಡಲಾಗಿದೆ. ಭಕ್ತರ ರಕ್ಷಣೆಗೆ ಅನುಭೂತಿಯ ಪ್ರಾರ್ಥನೆಯಂತೆ ದೇವಿ ತುಳಜಾಭವಾನಿಯಾಗಿ ತುಳಜಾಪುರದಲ್ಲಿ ನೆಲೆಸಿದಳು ಎಂಬ ಐತಿಹ್ಯವನ್ನು ಪ್ರದರ್ಶಿಸಲಾಗಿದೆ.

ಇದರೊಂದಿಗೆ ಛತ್ರಪತಿ ಶಿವಾಜಿ ಮಹಾರಾಜರ ಕುಲದೇವತೆಯಾದ ತುಳಜಾಭವಾನಿ, ಹಿಂದೂ ಸ್ವರಾಜ್ಯ ಸ್ಥಾಪನೆಗಾಗಿ ಹೋರಾಡುತ್ತಿದ್ದ ಶಿವಾಜಿಗೆ ಭವಾನಿ ಖಡ್ಗ ನೀಡಿದ ಪ್ರಸಂಗವೂ ರೂಪಕದ ಪ್ರಮುಖ ಆಕರ್ಷಣೆಯಾಗಿದೆ.

1977ರಲ್ಲಿ ಹಿಂದೂ-ಮುಸ್ಲಿಂ ರಿಕ್ಷಾ ಚಾಲಕರು ಸೇರಿ ಆರಂಭಿಸಿದ ಉತ್ಸವ 1986ರ ಬಳಿಕ ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ಮಂಡಳಿಯ ಅಧ್ಯಕ್ಷರಾಗಿ ಜಿ.ಆರ್. ಕಂಪ್ಲಿ ಅವರು 42 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅವರ ಸಾರಥ್ಯದಲ್ಲಿ ಪೌರಾಣಿಕ, ಐತಿಹಾಸಿಕ ದೃಶ್ಯಾವಳಿಗಳನ್ನು ಪ್ರದರ್ಶಿಸಿದ್ದಾರೆ. 1986ರಲ್ಲಿ ಮೊದಲ ಬಾರಿಗೆ ವೈಕುಂಠ, 1987ರಲ್ಲಿ ಕೈಲಾಸ, 1988ರಲ್ಲಿ ಮಹಾಭಾರತ, 1989ರಲ್ಲಿ ರಾಮಾಯಣ ಸೇರಿದಂತೆ ಕಳೆದ ವರ್ಷ ಶ್ರೀ ಮೈಲಾರ ಲಿಂಗೇಶ್ವರ ಈ ಬಾರಿ ತುಳಜಾಪುರದ ಶ್ರೀ ತುಳಜಾಭವಾನಿ ರೂಪಕ ಪ್ರದರ್ಶಿಸಲಾಗುತ್ತಿದೆ. ಜಿ.ಆರ್‌. ಕಂಪ್ಲಿ ಅವರು ನಿಧನರಾದ ಬಳಿಕ ಕಳೆದ 5 ವರ್ಷಗಳಿಂದ ಶ್ರೀನಿವಾಸ ಬೋಚಗೇರಿ ಅಧ್ಯಕ್ಷತೆಯಲ್ಲಿ ಟ್ರಸ್ಟ್‌ ಮುಂದುವರಿಯುತ್ತಿದೆ.

ಡಿಜೆ, ಪಟಾಕಿ, ಗುಲಾಲ್‌ಗೆ ಅವಕಾಶ ನೀಡದೆ ಭಕ್ತಿ ಹಾಗೂ ಶಿಸ್ತಿಗೆ ಆದ್ಯತೆ ನೀಡಲಾಗಿದೆ. ಸೆ.14ರಿಂದ ಆರಂಭವಾಗಿರುವ ಉತ್ಸವ 12 ದಿನಗಳ ಕಾಲ ನಡೆಯಲಿದ್ದು, ಸೆ. 25ರಂದು ಗಣಹೋಮ, ಅನ್ನಸಂತರ್ಪಣೆ ಹಾಗೂ ಮಹಾಪೂಜೆ ಆಯೋಜಿಸಲಾಗಿದೆ.ಗಣೇಶೋತ್ಸವದಲ್ಲಿ ಪ್ರತಿವರ್ಷವೂ ಪೌರಾಣಿಕ, ಐತಿಹಾಸಿಕ ದೃಶ್ಯಾವಳಿಗಳನ್ನು ಪ್ರಸ್ತುತಪಡಿಸಲಾಗುತ್ತಿದೆ. ಇದಕ್ಕೆಲ್ಲ ಜಿ.ಆರ್‌. ಕಂಪ್ಲಿ ಅವರೇ ಪ್ರೇರಣೆ. ಕಾರ್ಯಕ್ರಮದ ಯಶಸ್ಸಿಗೆ ಮಂಡಳಿಯ ಎಲ್ಲ ಸದಸ್ಯರು ಹಗಲಿರುಳು ಶ್ರಮಿಸುತ್ತಿದ್ದಾರೆ ಎನ್ನುತ್ತಾರೆ ಶ್ರೀ ಗಣೇಶೋತ್ಸವ ಮಂಡಳಿ ಟ್ರಸ್ಟ್‌ ಅಧ್ಯಕ್ಷ ಶ್ರೀನಿವಾಸ ಬೋಚಗೇರಿ.