ತುಳಸಿಗೇರಿ ಗ್ರಾಮದ ಯುವತಿ ಓಡಿಸ್ಸಾದಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದ ಗಂಗಾ ದಂಡಿನ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಬಾಚಿಕೊಂಡು ನಾಡಿನ ಕೀರ್ತಿ ಹೆಚ್ಚಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕಲಾದಗಿ
ತುಳಸಿಗೇರಿ ಗ್ರಾಮದ ಯುವತಿ ಓಡಿಸ್ಸಾದಲ್ಲಿ ಈಚೆಗೆ ನಡೆದ ರಾಷ್ಟ್ರೀಯ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದ ಗಂಗಾ ದಂಡಿನ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಬಾಚಿಕೊಂಡು ನಾಡಿನ ಕೀರ್ತಿ ಹೆಚ್ಚಿಸಿದ್ದಾರೆ.ಬಡ ರೈತನ ಮಗಳಾದ ಗಂಗಾ ದಂಡಿನ ಚಿಕ್ಕ ವಯಸ್ಸಿನಲ್ಲೇ ಸೈಕಲ್ ತುಳಿಯುವ ಅಭ್ಯಾಸ ರೂಢಿಸಿಕೊಂಡವರು. ತಂದೆ ಪ್ರಲ್ಹಾದ್ ಹಾಗೂ ತಾಯಿ ಲಕ್ಷ್ಮೀ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರೂ ತಮ್ಮ ನಾಲ್ಕು ಹೆಣ್ಣು ಮಕ್ಕಳನ್ನು ವಿದ್ಯಾಭ್ಯಾಸ ಹಾಗೂ ಕ್ರೀಡಾಸಕ್ತಿಗೆ ಚ್ಯುತಿ ಬಾರದಂತೆ ನೋಡಿಕೊಂಡಿದ್ದಾರೆ. ಗಂಡು ಮಕ್ಕಳಿಲ್ಲ ಎಂಬ ಕೊರಗು ಇಟ್ಟುಕೊಳ್ಳದೇ ಹೆಣ್ಮಕ್ಕಳೇ ನಮ್ಮ ಬದುಕು ಎಂದು ಎಷ್ಟೇ ತೊಂದರೆ ಎದುರಾದರೂ ಯಾವುದಕ್ಕೂ ಕಡಿಮೆ ಆಗದಂತೆ ಬೆಳೆಸಿದ್ದಾರೆ. ನಾಲ್ಕೂ ಹೆಣ್ಮಕ್ಕಳು ಉತ್ತಮ ಶಿಕ್ಷಣ ಪಡೆದು ತಂದೆ-ತಾಯಿಗೆ ಹೆಮ್ಮೆ ತಂದಿದ್ದಾರೆ.
ಓರ್ವ ಮಗಳು ಎಇಇ, ಇನ್ನೊಬ್ಬಳು ಪೊಲೀಸ್ ಕಾನಸ್ಟೆಬಲ್, ಮೂರನೇಯವಳು ಸೈನಿಕನ ಪತ್ನಿಯಾಗಿದ್ದರೆ, ಕೊನೆಯವಳಾದ ಗಂಗಾ ಸೈಕ್ಲಿಂಗ್ ಪಟುವಾಗಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದಾರೆ.ರಾಷ್ಟ್ರಮಟ್ಟದಲ್ಲಿ ಬಾಗಲಕೋಟೆ ಜಿಲ್ಲೆ ಸೈಕ್ಲಿಂಗ್ ನಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ತುಳಸಿಗೇರಿ ಗ್ರಾಮದ ಯುವಕ, ಯುವತಿಯರು ಮಲ್ಲಕಂಬ ಹಾಗೂ ಸೈಕ್ಲಿಂಗ್ ಕ್ರೀಡೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ.
ಕೋಟೆನಾಡು ಬಾಗಲಕೋಟೆ ಜಿಲ್ಲೆಯ ತುಳಸಿಗೇರಿ ಗ್ರಾಮದ ಯುವತಿ ಸೈಕ್ಲಿಂಗ್ ನಲ್ಲಿ ಸಾಧನೆ ಮಾಡಿರುವುದು ಜಿಲ್ಲೆ ಹಾಗೂ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ.-ಸಿದ್ದು ಪೂಜಾರಿ ಬಾಗಲಕೋಟ ನಿವಾಸಿ