ಕನ್ನಡಪ್ರಭ ವಾರ್ತೆ ಮಂಗಳೂರು

ಮಂಗಳೂರು ವಿಶ್ವವಿದ್ಯಾಲಯದ ತುಳು ಎಂ.ಎ. ಸ್ನಾತಕೋತ್ತರ ಪದವಿಯನ್ನು ನಗರದ ಹಂಪನಕಟ್ಟೆ ವಿಶ್ವವಿದ್ಯಾಲಯ ಕಾಲೇಜಿನಲ್ಲೇ ಮುಂದುವರಿಸಬೇಕು ಎಂದು ಒತ್ತಾಯಿಸಿ ಮಂಗಳೂರು ವಿವಿ ತುಳು ಎಂಎ ಹಿರಿಯ ವಿದ್ಯಾರ್ಥಿಗಳ ಸಂಘ ‘ಪರಪು’ ವತಿಯಿಂದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರಿಗೆ ಮನವಿ ಸಲ್ಲಿಸಲಾಯಿತು.

ಮಂಗಳೂರು ವಿಶ್ವವಿದ್ಯಾಲಯವು 2018ರಲ್ಲಿ ತುಳು ಎಂಎ ಸ್ನಾತಕೋತ್ತರ ಅಧ್ಯಯನ ಕೇಂದ್ರವನ್ನು ಹಂಪನಕಟ್ಟೆಯ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಪ್ರಾರಂಭಿಸಿತ್ತು. ಇದುವರೆಗೆ ಸುಮಾರು 100 ವಿದ್ಯಾರ್ಥಿಗಳು ಇಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಆದರೆ, 2025-26ನೇ ಶೈಕ್ಷಣಿಕ ಸಾಲಿನ ಪ್ರವೇಶಾತಿ ಅಧಿಸೂಚನೆಯಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಈ ಕೋರ್ಸ್‌ನ್ನು ಮಂಗಳೂರು ವಿಶ್ವವಿದ್ಯಾಲಯ ಕೊಣಾಜೆ ಕ್ಯಾಂಪಸ್‌ಗೆ ಸ್ಥಳಾಂತರಿಸುವುದಾಗಿ ಸೂಚನೆ ನೀಡಲಾಗಿದೆ. ಈ ಪ್ರಸ್ತಾಪ ಬಂದಾಗಿನಿಂದ ಈ ಶೈಕ್ಷಣಿಕ ವರ್ಷದಲ್ಲಿ ಸೇರ್ಪಡೆ ಬಯಸಿದ್ದ ಅಭ್ಯರ್ಥಿಗಳು ಆತಂಕಗೊಂಡು ಪ್ರಥಮ ವರ್ಷದ ಸೇರ್ಪಡೆಗೆ ಹಿನ್ನಡೆಯಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.

ಸರ್ಕಾರದಲ್ಲಿ ತುಳುವನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಮಾಡಲು ಉತ್ಸುಕವಾಗಿರುವ ಈ ಸಂದರ್ಭದಲ್ಲಿ ತುಳು ಅಧ್ಯಯನ ಕೇಂದ್ರದ ರಕ್ಷಣೆ ಹಾಗೂ ಅದರ ಉಳಿವಿಗೆ ಮಧ್ಯಪ್ರವೇಶ ಮಾಡಿ, ಮಂಗಳೂರು ತುಳು ಎಂಎ ಅಧ್ಯಯನ ಕೇಂದ್ರವನ್ನು ವಿವಿ ಕಾಲೇಜಿನಲ್ಲಿ ಉಳಿಯುವಂತೆ ಮಾಡಿ ಉಭಯ ಜಿಲ್ಲೆಯಿಂದ ಬರುವ ತುಳು ಅಧ್ಯಯನ ಆಸಕ್ತರಿಗೆ ಅನುಕೂಲ ಮಾಡಿಕೊಡಲು ಸರ್ಕಾರದಿಂದ ಆದೇಶ ಹೊರಡಿಸಲು ಒತ್ತಾಯಿಸುವಂತೆ ಮನವಿ ಮಾಡಿದರು.

ಮನವಿ ಸ್ವೀಕರಿಸಿದ ಐವನ್ ಡಿಸೋಜ, ಈ ಬಗ್ಗೆ ವಿಧಾನ ಪರಿಷತ್ ಕಲಾಪದಲ್ಲಿ ಚರ್ಚಿಸುವುದಾಗಿ ಭರವಸೆ ನೀಡಿದರು.ನಿಯೋಗದಲ್ಲಿ ತುಳು ಎಂಎ ಹಿರಿಯ ವಿದ್ಯಾರ್ಥಿಗಳ ಸಂಘ ‘ಪರಪು’ ಉಪಾಧ್ಯಕ್ಷ ಹರೀಶ್ ಎ., ಸದಸ್ಯರಾದ ಶಿವರಾಮ ಶೆಟ್ಟಿ, ಗೀತಾ ಜೈನ್, ಭಾಗ್ಯಶ್ರೀ ಶೆಟ್ಟಿ ಇದ್ದರು.