ಗೂಗಲ್‌ ಟ್ರಾನ್ಸ್‌ಲೇಟ್‌ನಲ್ಲಿ ತುಳುವಿಗೆ ಸ್ಥಾನ!

| Published : Jun 29 2024, 12:31 AM IST

ಸಾರಾಂಶ

ಮುಖ್ಯವಾಗಿ, ಇನ್ಮುಂದೆ ತುಳುವೇತರರೂ ತುಳು ಭಾಷೆ ಕಲಿಯಲು ಇದು ಪ್ರೇರಣೆ ನೀಡಲಿದೆ. ಯಾರ ಸಹಾಯವೂ ಇಲ್ಲದೆ ತುಳುವಿನ ಪದ ಬಳಕೆಯನ್ನು ಇದರಲ್ಲಿ ಅರ್ಥ ಮಾಡಿಕೊಳ್ಳಬಹುದು.

ಕನ್ನಡಪ್ರಭ ವಾರ್ತೆ ಮಂಗಳೂರು

ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸುವುದು ಮತ್ತು ಅಧಿಕೃತ ಭಾಷೆ ಸ್ಥಾನಮಾನ ಬೇಡಿಕೆಯನ್ನು ನಮ್ಮ ಸರ್ಕಾರಗಳಿಗೆ ಈಡೇರಿಸಲು ಇನ್ನೂ ಸಾಧ್ಯವಾಗಿಲ್ಲ. ಆದರೆ ಜಗತ್ತಿನ ದೈತ್ಯ ಸಂಸ್ಥೆ ಗೂಗಲ್‌ ತುಳುವಿಗೆ ಸ್ಥಾನ ನೀಡಿದೆ. ಇದೇ ಮೊದಲ ಬಾರಿಗೆ ಗೂಗಲ್‌ ಟ್ರಾನ್ಸ್‌ಲೇಟ್‌ನಲ್ಲಿ ತುಳು ಭಾಷೆ ಸೇರ್ಪಡೆಗೊಂಡಿದೆ.

ಮುಖ್ಯವಾಗಿ, ಇನ್ಮುಂದೆ ತುಳುವೇತರರೂ ತುಳು ಭಾಷೆ ಕಲಿಯಲು ಇದು ಪ್ರೇರಣೆ ನೀಡಲಿದೆ. ಯಾರ ಸಹಾಯವೂ ಇಲ್ಲದೆ ತುಳುವಿನ ಪದ ಬಳಕೆಯನ್ನು ಇದರಲ್ಲಿ ಅರ್ಥ ಮಾಡಿಕೊಳ್ಳಬಹುದು.

ಜಗತ್ತಿನ ಒಟ್ಟು 110 ಭಾಷೆಗಳನ್ನು ಗೂಗಲ್‌ ಟ್ರಾನ್ಸ್‌ಲೇಟ್‌ಗೆ ಸೇರಿಸಿರುವುದಾಗಿ ಗೂಗಲ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅದರಲ್ಲಿ ತುಳು ಭಾಷೆಯೂ ಒಳಗೊಂಡಿದೆ.

ತುಳುವೇತರರಿಗೂ ಪ್ರಯೋಜನ:

ಗೂಗಲ್‌ ಟ್ರಾನ್ಸ್‌ಲೇಟ್‌ನಲ್ಲಿ ತುಳು ಭಾಷೆ ಸೇರ್ಪಡೆಗೊಂಡಿರುವುದು ತುಳು ಭಾಷೆಗೆ ಜಾಗತಿಕವಾಗಿ ಸಂದ ಗೌರವವಾಗಿದೆ. ತುಳುವರು ಸಂಭ್ರಮಪಡುವಂಥ ವಿಚಾರ ಇದು. ಗೂಗಲ್‌ ಟ್ರಾನ್ಸ್‌ಲೇಟ್‌ನಲ್ಲಿ ಕೆಲವು ಸಂದರ್ಭದಲ್ಲಿ ಶಬ್ದಗಳು ತಪ್ಪಾಗಿ ಉಲ್ಲೇಖವಾಗುವುದು ಸಾಮಾನ್ಯ ವಿಚಾರ. ಇಂತಹ ಸಂದರ್ಭಗಳಲ್ಲಿ ಅಲ್ಲೇ ಇರುವ ಫೀಡ್‌ ಬ್ಯಾಕ್‌ ಕಾಲಂನಲ್ಲಿ ಸರಿಯಾದ ಶಬ್ದವನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿದರೆ ಗೂಗಲ್‌ ಅದನ್ನು ಮುಂದಕ್ಕೆ ಸರಿ ಮಾಡಿಕೊಳ್ಳುತ್ತದೆ. ಈ ಅಂಶವನ್ನು ತುಳುವರು ಸಮರ್ಪಕವಾಗಿ ಬಳಸಿಕೊಂಡರೆ ತುಳುವರಿಗೆ ಹಾಗೂ ತುಳುವೇತರರಿಗೂ ಪ್ರಯೋಜನವಾಗಲಿದೆ ಎಂದು ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್‌ ಗಟ್ಟಿ ಕಾಪಿಕಾಡ್‌ ಹೇಳಿದ್ದಾರೆ.