ತುಮರಿ ಅಂಗನವಾಡಿ: ಸಮಸ್ಯೆಗಳ ಸರಮಾಲೆ

| Published : Jun 27 2024, 01:03 AM IST

ಸಾರಾಂಶ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕೆಲಸ ಇವರದ್ದು, ಆದರೆ, ಸರ್ಕಾರದ ಯಾವ ಕೆಲಸ ಕಾರ್ಯಗಳು ಬಂದರೂ ಅಂಗನವಾಡಿ ಕಾರ್ಯಕರ್ತರಿಗೆ ನಿಯೋಜನೆ ಮಾಡುವುದರಿಂದ ಇವರ ಬದುಕು ಹೈರಾಣಾಗಿದೆ.

ಪ್ರದೀಪ್ ಮಾವಿನಕೈ ಕನ್ನಡಪ್ರಭ ವಾರ್ತೆ ಬ್ಯಾಕೋಡು

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕೆಲಸ ಇವರದ್ದು, ಆದರೆ, ಸರ್ಕಾರದ ಯಾವ ಕೆಲಸ ಕಾರ್ಯಗಳು ಬಂದರೂ ಅಂಗನವಾಡಿ ಕಾರ್ಯಕರ್ತರಿಗೆ ನಿಯೋಜನೆ ಮಾಡುವುದರಿಂದ ಇವರ ಬದುಕು ಹೈರಾಣಾಗಿದೆ. ಚುನಾವಣೆ, ಜನಸಂಖ್ಯೆ ನೋಂದಣಿ, ಪಡಿತರ ಚೀಟಿ ಮೂಲ ಮಾಹಿತಿ, ಆರೋಗ್ಯ ಇಲಾಖೆ ಇನ್ನಿತರ ಕೆಲಸಗಳ ಅಂಗವಾಗಿ ಕಾರ್ಯಕರ್ತೆಯರಿಗೆ ಹೊರೆಯಾಗಿದ್ದು, ಇವರು ಚುನಾವಣಾ ಬಿಎಲ್‌ಒ ಆಗಿ ಸಹ ಈಗಲೂ ಅನೇಕ ಕಡೆಗಳಲ್ಲಿ ದುಡಿಯುತ್ತಿದ್ದಾರೆ.

ಕೋವಿಡ್‌ ಸಮಯದಲ್ಲಿ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದಾರೆ. ಪಲ್ಸ್‌ ಪೋಲಿಯೋ ಅಭಿಯಾನ, ರಾಷ್ಟ್ರೀಯ ಜಂತುಹುಳ ನಿವಾರಣಾ ಅಭಿಯಾನ, ಮಾತೃವಂದನಾ, ಭಾಗ್ಯಲಕ್ಷ್ಮಿ, ನಾನಾ ಬಗೆಯ ಸಮೀಕ್ಷೆಯಲ್ಲೂ ಅಂಗನವಾಡಿ ಕಾರ್ಯಕರ್ತೆಯರ ಪಾತ್ರವಿದೆ. 0-6 ವರ್ಷದ ಮಕ್ಕಳ ಗಣತಿ ಮಾಡುವ ಹೊಣೆ ಇವರದ್ದೆ. ಆದರೆ ಅಂಗನವಾಡಿಗಳನ್ನು ಬಲಪಡಿಸಲು, ಹಾಗೂ ವೇತನ ಸೇರಿದಂತೆ ಹಲವು ಬೇಡಿಕೆಗಳು ಮುಂದಿದ್ದರೂ ಸರ್ಕಾರ ಕಣ್ಣುಮುಚ್ಚಿ ಕುಳಿತಿದೆ.

5 ವರ್ಷಕ್ಕೂಂದು ಹೊಸ ಸರ್ಕಾರ ಬರುವುದು ಸಹಜ. ಆದರೆ, ಯಾವುದೇ ಸರ್ಕಾರ ಬಂದರೂ ಅಂಗನವಾಡಿಗಳನ್ನು ಬಲಪಡಿಸುವ ಮನಸಿಲ್ಲ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಸಮಸ್ಯೆಗಳ ನರಳಾಟದಲ್ಲಿಯೇ ಶಾಲಾ ಪೂರ್ವ ಶಿಕ್ಷಣವನ್ನು ಯಶಸ್ವಿಗೊಳಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಕೊಡುಗೆ ದೊಡ್ಡದಿದೆ.

ಸಮಯಕ್ಕೆ ಸರಿಯಾಗಿ ಬಾರದ ವೇತನ:

ಅಂಗನವಾಡಿ ಕಾರ್ಯಕರ್ತೆಯರ ವೇತನವೂ ಪ್ರತಿ ತಿಂಗಳ ಮೊದಲ ವಾರದಲ್ಲಿ ಖಾತೆಗೆ ಜಮಾವಣೆ ಅಗುತ್ತಿತ್ತು. ಆದರೆ 2024 ರ ಮಾರ್ಚ್, ಏಪ್ರಿಲ್, ಮೇ ತಿಂಗಳ ವೇತನವನ್ನು ಒಟ್ಟಿಗೆ ಜೂನ್ ತಿಂಗಳ ಹದಿಮೂರನೆಯ ತಾರೀಖಿನಂದು ಕಾರ್ಯಕರ್ತೆಯರ ಖಾತೆಗೆ ಜಮಾ ಮಾಡಲಾಗಿದೆ.ತಾಲೂಕು ಕೇಂದ್ರದಲ್ಲಿ ಮೀಟಿಂಗ್ ಇನ್ನಿತರ ಸರ್ಕಾರಿ ಕೆಲಸಗಳಿಗೆ ಹೋಗಿ ಬರುವ ಬಸ್ಸಿನ ಖರ್ಚನ್ನೂ ಕೂಡಾ ಸರಿಯಾದ ಸಮಯದಲ್ಲಿ ಕೊಡುವುದಿಲ್ಲ. ಕೊಟ್ಟರೂ ಖರ್ಚಿನ ಅರ್ಧ ಭಾಗ ಮಾತ್ರ ಎಂದು ಹೆಸರು ಹೇಳಲು ಇಚ್ಛಿಸದ ಕಾರ್ರ್ಯಕರ್ತೆಯರೊಬ್ಬರು ಅಳಲು ತೋಡಿಕೊಂಡಿದ್ದಾರೆ.

ಮೊಟ್ಟೆ ನಿರ್ವಹಣೆ ಸಂಕಷ್ಟ:

ಪ್ರತಿವಾರಕ್ಕೆ ಒಂದು ಮಗುವಿಗೆ ತಲಾ ಎರಡು ಮೊಟ್ಟೆ ನೀಡಲಾಗುತ್ತದೆ. ಸರಕಾರದಿಂದ ಒಂದು ಮೊಟ್ಟೆಗೆ ಆರು ರು. ನಿಗದಿ ಮಾಡಿದ್ದು ನಗದು ರೂಪದಲ್ಲಿ ನೀಡುತ್ತಿದ್ದು, ಇತ್ತಿಚಿನ ದಿನಗಳಲ್ಲಿ ಕರೂರು ಬಾರಂಗೀ ಪ್ರದೇಶದಲ್ಲಿ ಮೊಟ್ಟೆಗಳು ದುಬಾರಿಯಾಗಿದ್ದು 6 ರಿಂದ ರಿಂದ 9 ರೂ ತಲುಪಿದೆ. 6 ರು.ಗಿಂತ ಹೆಚ್ಚಾದಲ್ಲಿ ಕಾರ್ಯಕರ್ತೆಯರ ವೇತನಕ್ಕೆ ಕತ್ತರಿ ಬೀಳುವುದು ಪಕ್ಕ. ಅದರಲ್ಲೂ ಇಲಾಖೆ ಮುಂಚಿತವಾಗಿ ಹಣ ನೀಡುವುದಿಲ್ಲ. ಕಾರ್ಯಕರ್ತೆಯರ ಖರೀದಿ ಮಾಡಿ ನಂತರ ಮೊಟ್ಟೆ ನೀಡಿದ ಮಾಹಿತಿಯನ್ನು ಇಲಾಖೆಗೆ ಕಳುಹಿಸಿ 3- 4 ತಿಂಗಳ ನಂತರ ಹಣ ನೀಡುತ್ತಾರೆ. ಇದರಿಂದ ಕಾರ್ಯಕರ್ತೆಯರ ಕೈ ಯಿಂದ ಹಣ ಹೋಗುವುದಲ್ಲದೆ, ತಮ್ಮ ಹಣವನ್ನು ವಾಪಸ್ ಪಡೆಯಲು 3-4 ತಿಂಗಳು ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ತುಮರಿ ವಲಯದಲ್ಲಿ 33 ಅಂಗನವಾಡಿಗಳು ಸ್ವಂತ ಕಟ್ಟಡದಲ್ಲಿ ಇವೆ. 1 ಬಾಡಿಗೆ ಕಟ್ಟಡದಲ್ಲಿ, ಸಭಾ ಭವನ, ಶಾಲಾ ಕಟ್ಟಡ, ಸಂಘದ ಮನೆ ಇತ್ಯಾದಿ ಕಟ್ಟಡದಲ್ಲಿ 5 ಅಂಗನವಾಡಿ ಕಟ್ಟಡಗಳು ಇವೆ. ಕೆಲವು ಅಂಗನವಾಡಿ ಕೇಂದ್ರದಲ್ಲಿ ಕಾರ್ಯಕರ್ತೆಯರು ಕಾರಣಾಂತರಗಳಿಂದ ರಜೆ ಹೋದ ಸಂದರ್ಭದಲ್ಲಿ ಸಮೀಪದ ಅಂಗನವಾಡಿಯಿಂದ ಹೆಚ್ಚಿನ ಜವಾಬ್ದಾರಿ ನೀಡುವುದು ಸಾಮಾನ್ಯ. ನೆಟ್ವರ್ಕ್ ಇಲ್ಲದ ಈ ಭಾಗದಲ್ಲಿ ಒಂದು ಅಂಗನವಾಡಿಯ ಆನ್ಲೈನ್ ರಿಪೋರ್ಟ್ ಹಾಕುವುದೇ ಕಷ್ಟ ಅದರಲ್ಲಿ ಎರೆಡೆರಡು ಅಂಗನವಾಡಿಯ ಕೆಲಸ, ಹಾಗೂ ಬರುವ ವೇತನದಲ್ಲಿ ಮೊಟ್ಟೆ, ಇನ್ನಿತರ ನಿರ್ವಹಣೆ ಮಾಡುವುದು ಹೊರೆಯಾಗುತ್ತಿದೆ.

ತುಮರಿ ವಲಯದಲ್ಲಿ ನಾಲ್ಕೈದು ಅಂಗನವಾಡಿಗಳು ಹೊಸದಾಗಿ ನಿರ್ಮಾಣವಾಗಿದ್ದು ಮತ್ತು ಕೆಲವು ಸಣ್ಣ ಅಂಗನವಾಡಿಯಿಂದ ದೊಡ್ಡ ಅಂಗನವಾಡಿಯಾಗಿ ಮೇಲ್ದರ್ಜೆಗೆ ಏರಿಸಿ ಕೆಲವು ತಿಂಗಳು ಕಳೆದರೂ ಸಹಾಯಕರ ನೇಮಕಾತಿ ಪ್ರಕ್ರಿಯೆಗೆ ಇಲಾಖೆ ಮೀನಮೇಷ ಎಣಿಸುತ್ತಿದೆ. ಹೀಗೆ ಮಾರ್ಪಟ್ಟಿರುವ ಅಂಗನವಾಡಿಗಳಲ್ಲಿ ಮಕ್ಕಳ ಹಾಜರಾತಿ ಹೆಚ್ಚಿದ್ದು ಒಬ್ಬರೇ ಕೆಲಸ ನಿರ್ವಹಿಸುವುದು ಕಷ್ಟಕರವಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಕರೂರು ಬಾರಂಗಿ ಹೋಬಳಿಯ ಕೆಲವು ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಅಂಗನವಾಡಿ ಕೇಂದ್ರಗಳಿಗೆ ಕಳೆದ 3-4 ತಿಂಗಳಿಂದ ಸರಿಯಾಗಿ ಬಾಡಿಗೆ ನೀಡದೇ ಅಂಗನವಾಡಿ ಕೇಂದ್ರಗಳನ್ನು ಹಾಗೂ ಅಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತೆ, ಮತ್ತು ಸಹಾಯಕಿಯರನ್ನು ಚಿಂತೆಗೀಡು ಮಾಡಿದೆ.

ಬಜೆಟ್ ಇನ್ನಿತರ ಕಾರಣಗಳಿಂದ ವೇತನ ವಿಳಂಬವಾಗಿತ್ತು, ಈ ತಿಂಗಳು ಎಲ್ಲರಿಗೂ ವೇತನ ಪಾವತಿ ಆಗಿದೆ. ಮೊಟ್ಟೆ ಖರೀದಿಗೆ ಹೆಚ್ಚಿನ ಹಣ ನೀಡುವಂತೆ ಅಂಗವಾಗಿ ಕೇಂದ್ರದಗಳಿಂದ ಬೇಡಿಕೆ ಬರುತ್ತಿದ್ದು, ಈ ವಿಚಾರ ಸರ್ಕಾರದ ಮಟ್ಟದಲ್ಲಿ ತಿರ್ಮಾನ ಆಗಬೇಕಿದ್ದು. ಸರ್ಕಾರ ಮೊತ್ತ ಹೆಚ್ಚಿಸಿದರೆ ಅನುಕೂಲ ಆಗಲಿದೆ.

- ಬಂಗಾರಮ್ಮ, ಅಂಗನವಾಡಿ ಮೇಲ್ವಿಚಾರಕಿ, ಸಾಗರ