ತುಮಕೂರು: ಸಾಂಸ್ಕೃತಿಕ ನಾಯಕ ಬಸವಣ್ಣ ಭಾವಚಿತ್ರ ಅನಾವರಣ

| Published : Feb 18 2024, 01:31 AM IST

ತುಮಕೂರು: ಸಾಂಸ್ಕೃತಿಕ ನಾಯಕ ಬಸವಣ್ಣ ಭಾವಚಿತ್ರ ಅನಾವರಣ
Share this Article
  • FB
  • TW
  • Linkdin
  • Email

ಸಾರಾಂಶ

ಜಗದ್ಗುರು ಬಸವಣ್ಣ ಅವರು ಲಿಂಗ, ಜಾತಿ, ವರ್ಗ ಬೇಧವಿಲ್ಲದೆ ಸಮ ಸಮಾಜ ಕಟ್ಟಬೇಕೆಂದು ಪ್ರಾಮಾಣಿಕವಾಗಿ ಪ್ರಯತ್ನಪಟ್ಟವರು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಜಗದ್ಗುರು ಬಸವಣ್ಣ ಅವರು ಲಿಂಗ, ಜಾತಿ, ವರ್ಗ ಬೇಧವಿಲ್ಲದೆ ಸಮ ಸಮಾಜ ಕಟ್ಟಬೇಕೆಂದು ಪ್ರಾಮಾಣಿಕವಾಗಿ ಪ್ರಯತ್ನಪಟ್ಟವರು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಹೇಳಿದರು.

ಜಿಲ್ಲಾಡಳಿತ ವತಿಯಿಂದ ಜಿಲ್ಲಾಧಿಕಾರಿ ನ್ಯಾಯಾಲಯ ಸಭಾಂಗಣದಲ್ಲಿ ಏರ್ಪಡಿಸಿದ್ದ ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣ ಅವರ ಭಾವಚಿತ್ರ ಅನಾವರಣ ಕಾರ್ಯಕ್ರಮದಲ್ಲಿ ಬಸವಣ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡುತ್ತಾ, ಜಗದ್ಗುರು ಬಸವಣ್ಣ ಅವರ ತತ್ವಗಳು ಇಂದಿಗೂ ಕೂಡ ಜೀವಂತವಾಗಿವೆ. 12ನೇ ಶತಮಾನದಲ್ಲಿಯೇ ರೂಪಿಸಿದ ಸಾಮಾಜಿಕ ನ್ಯಾಯ, ಸಮಾನತೆ, ತತ್ವಗಳನ್ನು ಭಾರತ ಸಂವಿಧಾನದಲ್ಲಿ ಕಾಣಬಹುದಾಗಿದೆ ಎಂದು ತಿಳಿಸಿದರು.

ಮಾನವ ತನ್ನ ಕೈಲಾದಷ್ಟು ಒಬ್ಬರಿಗೆ ಸಹಾಯ ಮಾಡಿದರೆ ಅದೇ ಸ್ವರ್ಗ, ಬೇರೆಯವರನ್ನು ನೋಯಿಸಿದರೆ ಅದೇ ನರಕವೆಂದು ಬಸವಣ್ಣ ಅವರು ತಿಳಿಸಿದ್ದು, ಇದನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ನಮ್ಮ ಮಾತಿನಿಂದ ಯಾರಿಗೂ ನೋವಾಗದಂತೆ ನಡೆದುಕೊಳ್ಳಬೇಕು ಎಂದು ಹೇಳಿದರು.

ಇಂದು ಸರ್ಕಾರದ ವತಿಯಿಂದ ಸಾಂಸ್ಕೃತಿಕ ನಾಯಕ ಬಸವಣ್ಣ ಎಂದು ಘೋಷಣೆ ಮಾಡಲಾಗಿದೆ. ಪ್ರತಿಯೊಂದು ಸರ್ಕಾರಿ ಕಚೇರಿಗಳಲ್ಲಿ ಇಂದು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಸರ್ಕಾರಿ ಸೇವೆಯಲ್ಲಿರುವ ನಾವೆಲ್ಲರೂ ಸೇರಿ ಒಂದು ಒಳ್ಳೆಯ ಸ್ವರ್ಗದಂತಹ ನಾಡನ್ನು ಕಟ್ಟಬೇಕು ಎಂದರು.

ಈ ಸಂದರ್ಭದಲ್ಲಿ ರಂಗ ಕಲಾವಿದ ಲಕ್ಷ್ಮಣ್ ದಾಸ್ ಬಸವಣ್ಣ ಅವರ ವಚನ ಹಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿವಿಧ ಪದಾಧಿಕಾರಿಗಳು ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.ಬಸವಣ್ಣ ವಿಚಾರಧಾರೆಗಳು ಇಂದಿಗೂ ಪ್ರಸ್ತುತ

ತುಮಕೂರು: ವಿಶ್ವಗುರು ಬಸವಣ್ಣನವರ ವಿಚಾರಧಾರೆಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ತುಮಕೂರು ಜಿಲ್ಲಾ ಪಂಚಾಯಿತಿ ಸಿಇಒ ಪ್ರಭು ಜಿ. ಅಭಿಪ್ರಾಯಪಟ್ಟರು.

ತುಮಕೂರು ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರವನ್ನು ಅನಾವರಣಗೊಳಿಸಿ ಮಾತನಾಡಿದ ಅವರು, ಬಸವಣ್ಣ ಅವರು ನುಡಿದಂತೆ ನಡೆದ ವ್ಯಕ್ತಿ. ಇವರು ಅನುಭವ ಮಂಟಪದ ಮೂಲಕ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಿದ ಮಹಾನ್‌ ನಾಯಕ. ವಚನಗಳ ಮೂಲಕ ಮನೆ ಮನೆಗಳ ಮೂಲಕ ಇಡೀ ವಿಶ್ವಕ್ಕೇ ಸಂದೇಶ ಸಾರಿದಂತಹ ಮಹಾನ್‌ ವ್ಯಕ್ತಿ ಬಸವಣ್ಣ ಎಂದು ಬಣ್ಣಿಸಿದರು.

ಬಸವಣ್ಣ ಅವರ ಕಾಯಕವೇ ಕೈಲಾಸ ಎಂಬ ತತ್ವದಡಿಯಲ್ಲಿ ಸರ್ಕಾರಿ ಕೆಲಸಗಳು ನಡೆಯುತ್ತಿವೆ. ಹಾಗಾಗಿ ನಾವೆಲ್ಲಾ ಮಾಡುವಂತಹ ಕೆಲಸದಲ್ಲಿ ಆಸಕ್ತಿ, ಶ್ರದ್ದೆ ಇರಬೇಕು ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದ ಅವರು, ಬಸವಣ್ಣನವರ ಸಂದೇಶ, ಚಿಂತನೆ, ಉದ್ದೇಶಗಳನ್ನು ನಾವೆಲ್ಲಾ ಅರಿಯಬೇಕು ಎಂದರು.

ವಿಶ್ವಗುರು ಬಸವಣ್ಣನವರನ್ನು ಸರ್ಕಾರ ಸಾಂಸ್ಕೃತಿಕ ರಾಯಭಾರಿಯಾಗಿ ಘೋಷಿಸಿದ ಪರಿಣಾಮ ಇಂದು ಬಸವಣ್ಣನವರ ಭಾವಚಿತ್ರವನ್ನು ಅನಾವರಣಗೊಳಿಸಿರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್‌ ಉಪಕಾರ್ಯದರ್ಶಿ (ಅಭಿವೃದ್ಧಿ) ನರಸಿಂಹಮೂರ್ತಿ, ಉಪಕಾರ್ಯದರ್ಶಿ (ಆಡಳಿತ) ಹಾಲಸಿದ್ದಪ್ಪ ಪೂಜೇರಿ, ಮುಖ್ಯ ಲೆಕ್ಕಾಧಿಕಾರಿ ನರಸಿಂಹ ಮೂರ್ತಿ ಸೇರಿದಂತೆ ಜಿಲ್ಲಾ ಪಂಚಾಯತ್‌ನ ವಿವಿಧ ಶಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು.