ತುಮಕೂರು: ನೀರಿನ ಸಮಸ್ಯೆಗೆ ಸ್ಪಂದಿಸಿದ ಜಿಲ್ಲಾಡಳಿತ

| Published : Feb 10 2024, 01:50 AM IST

ಸಾರಾಂಶ

ತುಮಕೂರು ತಾಲೂಕಿನ ಊರ್ಡಿಗೆರೆ ಹೋಬಳಿ ಸೀತಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿ ಹಿರೇದೊಡ್ಡವಾಡಿ ಬಳಿಯಿರುವ ಬೋವಿ ಕಾಲೋನಿ ಗ್ರಾಮಸ್ಥರ ನೀರಿನ ಬವಣೆಯನ್ನು ನೀಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಕ್ರಮ ಕೈಗೊಂಡಿರುವುದು ಗ್ರಾಮದ ಜನರ ಮೊಗದಲ್ಲಿ ಮಂದಹಾಸ ಮೂಡಿದೆ.

ಕನ್ನಡಪ್ರಭ ವಾರ್ತೆ ತುಮಕೂರು

ತಾಲೂಕಿನ ಊರ್ಡಿಗೆರೆ ಹೋಬಳಿ ಸೀತಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿ ಹಿರೇದೊಡ್ಡವಾಡಿ ಬಳಿಯಿರುವ ಬೋವಿ ಕಾಲೋನಿ ಗ್ರಾಮಸ್ಥರ ನೀರಿನ ಬವಣೆಯನ್ನು ನೀಗಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಕ್ರಮ ಕೈಗೊಂಡಿರುವುದು ಗ್ರಾಮದ ಜನರ ಮೊಗದಲ್ಲಿ ಮಂದಹಾಸ ಮೂಡಿದೆ.

ಕಳೆದ ಭಾನುವಾರ ಜಿಲ್ಲಾಧಿಕಾರಿ ಬೋವಿ ಕಾಲೋನಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಜನರು ತಮ್ಮ ಗ್ರಾಮದ ನೀರಿನ ಸಮಸ್ಯೆಯ ಬಗ್ಗೆ ಅಳಲನ್ನು ತೋಡಿಕೊಂಡಿದ್ದರು. ಬೋವಿ ಕಾಲೋನಿಯಲ್ಲಿ ಪಂಚಾಯಿತಿ ವತಿಯಿಂದ ಹೊಸದಾಗಿ 1080 ಅಡಿ ಕೊಳವೆಬಾವಿ ಕೊರೆದರೂ ನೀರು ಸಿಕ್ಕಿರಲಿಲ್ಲವಾದ್ದರಿಂದ ಕಾಲೋನಿಗೆ ನೀರಿನ ಶಾಶ್ವತ ಪರಿಹಾರ ಒದಗಿಸಲು ಜಿಲ್ಲಾಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಧುಮತಿ ಅವರಿಗೆ ಸೂಚನೆ ನೀಡಿದ್ದರು.

ಪಿಡಿಒ ಬೋವಿ ಕಾಲೋನಿ ಎತ್ತರದ ಪ್ರದೇಶವಾಗಿರುವುದರಿಂದ ಕೊಳವೆಬಾವಿಯನ್ನು ಎಷ್ಟು ಆಳಕ್ಕೆ ಕೊರೆದರೂ ನೀರು ಸಿಗುವುದಿಲ್ಲ. ಪಕ್ಕದ ಬೋವಿ ಪಾಳ್ಯದಲ್ಲಿ ಹೊಸದಾಗಿ ಕೊಳವೆಬಾವಿಯನ್ನು ಕೊರೆಯಲಾಗಿದ್ದು, ಸದರಿ ಕೊಳವೆಬಾವಿಗೆ ವಿದ್ಯುತ್ ಪರಿವರ್ತಕ ಹಾಗೂ ನೀರಿನ ಕೊಳವೆ ಮಾರ್ಗ ಅಳವಡಿಸಿದಲ್ಲಿ ಬೋವಿ ಕಾಲೋನಿಗೆ ನೀರಿನ ಸೌಲಭ್ಯ ಕಲ್ಪಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು.

ಗ್ರಾಮದಲ್ಲಿರುವ ಸುಮಾರು 12 ಕುಟುಂಬಗಳ ನೀರಿನ ಸಮಸ್ಯೆಯನ್ನು ಅರಿತ ಜಿಲ್ಲಾಧಿಕಾರಿಗಳು ಇನ್ನೊಂದು ವಾರದೊಳಗಾಗಿ ವಿದ್ಯುತ್ ಪರಿವರ್ತಕ ಹಾಗೂ ಪಂಚಾಯತಿಯ ೧೫ನೇ ಹಣಕಾಸು ಯೋಜನೆಯಡಿ ನೀರಿನ ಕೊಳವೆ ಮಾರ್ಗವನ್ನು ಅಳವಡಿಸಲು ಸೂಕ್ತ ಕ್ರಮ ಕೈಗೊಂಡು ವರದಿ ನೀಡಬೇಕೆಂದು ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರಶಾಂತ್ ಕೂಡ್ಲಿಗಿ ಹಾಗೂ ಪಿಡಿಒ ಅವರಿಗೆ ಸೂಚನೆ ನೀಡಿದ್ದರು.

ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಬೆಸ್ಕಾಂನಿಂದ ಗುರುವಾರ 25ಕೆವಿ ಪರಿವರ್ತಕವನ್ನು ಕೊಳವೆಬಾವಿಗೆ ಅಳವಡಿಸುವ ಮೂಲಕ ಗ್ರಾಮದ ಜನರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದು ಬೆಸ್ಕಾಂ ಎಂಜಿನಿಯರ್‌ ತಿಳಿಸಿದ್ದಾರೆ. ಗ್ರಾಮ ಪಂಚಾಯತಿ ವತಿಯಿಂದ ಬೋವಿ ಪಾಳ್ಯದಿಂದ ಬೋವಿ ಕಾಲೋನಿಗೆ ನೀರಿನ ಸರಬರಾಜಿಗಾಗಿ ೭೦೦ ಮೀ. ಕೊಳವೆ ಮಾರ್ಗ ಅಳವಡಿಕೆಗಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಪಿಡಿಒ ಮಧುಮತಿ ತಿಳಿಸಿದ್ದಾರೆ.

ಗ್ರಾಮದ ಸಂಕಷ್ಟವನ್ನು ಅರಿತು ಬೋವಿ ಕಾಲೋನಿ ಗ್ರಾಮಕ್ಕೆ ನೀರಿನ ಸೌಲಭ್ಯ ದೊರಕಿಸುವಲ್ಲಿ ಕಾರ್ಯೋನ್ಮುಖರಾದ ಎಲ್ಲ ಅಧಿಕಾರಿ, ಸಿಬ್ಬಂದಿಯನ್ನು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅಭಿನಂದಿಸಿದ್ದಾರೆ.