ಎಸ್. ನಾರಾಯಣ ಮುನಿರಾಬಾದ್
ತುಂಗಭದ್ರಾ ಜಲಾಶಯದ 33 ಗೇಟ್‌ಗಳ ಲೋಕಾರ್ಪಣೆ ಕಾರ್ಯಕ್ರಮ ಗುರುವಾರ ಟಿಬಿ ಡ್ಯಾಂ ಹಾಗೂ ಸಾರ್ವಜನಿಕ ಸಮಾರಂಭ ಮುನಿರಾಬಾದಿನ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದ್ದು, ಕಾರ್ಯಕ್ರಮದ ನಿಮಿತ್ತ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.ಕಾರ್ಯಕ್ರಮದ ನಿಮಿತ್ತ ತುಂಗಭದ್ರಾ ಜಲಾಶಯವನ್ನು ಮದುವಣಗಿತ್ತಿಯಂತೆ ಅಲಂಕರಿಸಲಾಗಿದೆ. ಜಲಾಶಯ ತಳಿರು ತೋರಣ ಹಾಗೂ ವಿದ್ಯುತ್ ದೀಪಾಲಂಕಾರದಿಂದ ರಾರಾಜಿಸುತ್ತಿದೆ.
ತುಂಗಭದ್ರಾ ಜಲಾಶಯದ ಇತಿಹಾಸದಲ್ಲಿಯೇ ಗೇಟ್ ಲೋಕಾರ್ಪಣೆ ಕಾರ್ಯಕ್ರಮ ಎರಡನೇ ಅತಿ ದೊಡ್ಡ ಬೃಹತ್ ಕಾರ್ಯಕ್ರಮವಾಗಿದೆ. 1953ರಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ತುಂಗಭದ್ರಾ ಜಲಾಶಯವನ್ನು ಲೋಕಾರ್ಪಣೆ ಮಾಡಲು ಆಗಮಿಸಿದ್ದು ಮೊದಲ ಬೃಹತ್ ಕಾರ್ಯಕ್ರಮವಾಗಿತ್ತುತುಂಗಭದ್ರಾ ಜಲಾಶಯದ ಮೇಲೆ ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣದ ಮುಖ್ಯ ಮಂತ್ರಿಗಳು ತುಂಗಭದ್ರಾ ಮಾತೆಗೆ ಪೂಜೆ ಸಲ್ಲಿಸುವರು. ನಂತರ ನೂತನವಾಗಿ ನಿರ್ಮಿಸಿದ 33 ಗೇಟುಗಳನ್ನು ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಲೋಕಾರ್ಪಣೆ ಮಾಡುವರು. ನಂತರ ಮೂರು ರಾಜ್ಯದ ಮುಖ್ಯಮಂತ್ರಿಗಳು ರಸ್ತೆ ಮಾರ್ಗವಾಗಿ ಮುನಿರಾಬಾದಿಗೆ ಆಗಮಿಸಿ ಇಲ್ಲಿನ ಸರ್ಕಾರಿ ಹೈಸ್ಕೂಲ್ ಮೈದಾನದಲ್ಲಿ ನಡೆಯಲ್ಲಿರುವ ಸಾರ್ವಜನಿಕ ಸಭೆಯಲ್ಲಿ ರೈತರು ಹಾಗೂ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಗುರುವಾರ ಬೆಳಗ್ಗೆ ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಕೇಂದ್ರ ಜಲ ಶಕ್ತಿ ಸಚಿವ ಸಿ.ಆರ್.ಪಾಟೀಲ್ ವಿಶೇಷ ವಿಮಾನದ ಮೂಲಕ ಬಳ್ಳಾರಿ ಜಿಲ್ಲೆಯ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ನಾಲ್ಕು ಪ್ರತ್ಯೇಕ ಹೆಲಿಕಾಪ್ಟರ್ ಮೂಲಕ ಗಣ್ಯರು ಮುನಿರಾಬಾದ್ ಸಮೀಪವಿರುವ ಭಾರತೀಯ ರಿಸರ್ವ್ ಬೆಟಾಲಿಯನ್ ಆವರಣದಲ್ಲಿ ನಿರ್ಮಿಸಿರುವ ಹೆಲಿಪ್ಯಾಡಿಗೆ ಬಂದು ಅಲ್ಲಿಂದ ರಸ್ತೆಯ ಮೂಲಕ ತುಂಗಭದ್ರಾ ಜಲಾಶಯಕ್ಕೆ ತೆರಳಿ ಪೂಜೆ ಸಲ್ಲಿಸುವರು. ನಂತರ ಅಲ್ಲಿಂದ ರಸ್ತೆ ಮೂಲಕ ಮುನಿರಾಬಾದಿಗೆ ಆಗಮಿಸಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಭಾರಿ ಪೊಲೀಸ್ ಬಂದೋಬಸ್ತ್ :
ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರು ಮುನಿರಾಬಾದಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಮುನಿರಾಬಾದ್‌ನಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮುನಿರಾಬಾದ್ ಆರಕ್ಷರ ಭದ್ರಕೋಟೆಯಾಗಿ ಪರಿಣಮಿಸಿದೆ.