ತುಂಗಭದ್ರಾ ಜಲಾಶಯಕ್ಕೆ ವಯಸ್ಸಾಗಿದೆ: ಎಚ್.ಕೆ. ಪಾಟೀಲ

| Published : Aug 17 2024, 12:47 AM IST / Updated: Aug 17 2024, 12:48 AM IST

ಸಾರಾಂಶ

ತುಂಗಭದ್ರಾ ಜಲಾಶಯಕ್ಕೆ ವಯಸ್ಸಾಗಿದೆ. ಹೀಗಾಗಿ, ಇದು ವಯೋಸಹಜ ಸಮಸ್ಯೆಯಾಗಿದೆ. ಮುದುಕರಾದ ಮೇಲೆ ಮೆಲ್ಲಗೆ ಬಿದ್ದರೂ ದೊಡ್ಡ ಸಮಸ್ಯೆಯಾಗುವಂತೆ ಆಗಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ

ಕನ್ನಡಪ್ರಭ ವಾರ್ತೆ ಕೊಪ್ಪಳ

ತುಂಗಭದ್ರಾ ಜಲಾಶಯಕ್ಕೆ ವಯಸ್ಸಾಗಿದೆ. ಹೀಗಾಗಿ, ಇದು ವಯೋಸಹಜ ಸಮಸ್ಯೆಯಾಗಿದೆ. ಮುದುಕರಾದ ಮೇಲೆ ಮೆಲ್ಲಗೆ ಬಿದ್ದರೂ ದೊಡ್ಡ ಸಮಸ್ಯೆಯಾಗುವಂತೆ ಆಗಿದೆ. ಸರಿಪಡಿಸುವ ಯತ್ನ ನಡೆದಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಹೇಳಿದರು.

ತುಂಗಭದ್ರಾ ಜಲಾಶಯದ ಗೇಟ್‌ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಇದೊಂದು ದೊಡ್ಡ ದುರಂತವಾಗಿದೆ. ಸದ್ಯಕ್ಕೆ ದುರಸ್ತಿ ಕಾರ್ಯ ಮುಗಿಯಬೇಕಾಗಿದೆ. ಇದಾದ ನಂತರ ಜಲಾಶಯಗಳ ರಕ್ಷಣೆಗೆ ತಜ್ಞರ ತಂಡ ನೀಡುವ ವರದಿಯನ್ನಾಧರಿಸಿ ಕ್ರಮವಹಿಸುವ ಅಗತ್ಯವಿದೆ ಎಂದರು.

ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಮುರಿದಿರುವುದರಲ್ಲಿ ಬೋರ್ಡ್ ಸೇರಿದಂತೆ ಯಾರನ್ನಾದರೂ ದೋಷಿ ಮಾಡುವುದಿಲ್ಲ. ಆದರೆ, ಅದಕ್ಕೆ ಪರಿಹಾರ ಕಂಡುಕೊಳ್ಳುವ ದಿಸೆಯಲ್ಲಿ ಪ್ರಯತ್ನ ಆಗಬೇಕಾಗಿದೆ. ಕೊಪ್ಪಳ, ವಿಜಯನಗರ ಜಿಲ್ಲೆಯ ಸಚಿವರು ಸೇರಿದಂತೆ ಎಲ್ಲರೂ ಅಲ್ಲಿಯೇ ಇದ್ದು, ಸಮಸ್ಯೆ ಇತ್ಯರ್ಥಕ್ಕೆ ಶ್ರಮಿಸುತ್ತಿದ್ದಾರೆ ಎಂದರು.

ತುಂಗಭದ್ರಾ ಜಲಾಶಯದಿಂದ ಈಗ ಹೋಗುತ್ತಿರುವ ನೀರನ್ನು ಯಾರು ಸಹ ಬಳಕೆ ಮಾಡಿಕೊಳ್ಳುವುದಕ್ಕೆ ಬರುವುದಿಲ್ಲ, ಅದು ಸಮುದ್ರ ಸೇರುತ್ತದೆ. ಹೀಗಾಗಿ, ಆಗಿರುವ ದುರಂತದಿಂದ ರಾಜ್ಯ ಸೇರಿದಂತೆ ಆಂಧ್ರ, ತೆಲಂಗಾಣಕ್ಕೂ ನಷ್ಟವಾಗಿದೆ ಎಂದರು.

ಗ್ಯಾರಂಟಿ ಯೋಜನೆಯನ್ನು ಸ್ಥಗಿತ ಮಾಡುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಒಂದಷ್ಟು ಚರ್ಚೆ ನಡೆಯುತ್ತಿದ್ದು, ಇದಕ್ಕೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರೇ ಸ್ಪಷ್ಟಪಡಿಸಿದ್ದಾರೆ ಎಂದರು. ಆದರೆ, ರಾಜ್ಯದ ಒಂದು ಕೋಟಿ ಜನರನ್ನು ಬಡತನ ರೇಖೆಗಿಂತ ಮೇಲೆ ತಂದಿದೆ ಎಂದರು.

ಕೊಪ್ಪಳದಲ್ಲಿ ಜಿಲ್ಲಾ ನ್ಯಾಯಾಲಯ ಕಟ್ಟಡ ನಿರ್ಮಾಣದ ಅನುದಾನಕ್ಕಾಗಿ ವಕೀಲರ ಸಂಘದವರು ಕೋರ್ಟ್‌ ಮೊರೆ ಹೋಗುವ ಅಗತ್ಯ ಇಲ್ಲ, ನಮ್ಮ ಇಲಾಖೆಯಿಂದಲೇ ಕೊಡಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.