ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಜೀವನಾಡಿಯಾಗಿರುವ ಜಲಾಶಯದಲ್ಲಿ ಹೂಳಿನ ಪ್ರಮಾಣ ಹೆಚ್ಚುತ್ತಲೇ ಇದೆ.
ಬಳ್ಳಾರಿ: ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹವಾಗಿರುವ ಹೂಳು ತೆಗೆಯಲು ಒತ್ತಾಯಿಸಿ ಈ ತಿಂಗಳ ಕೊನೆಯಲ್ಲಿ ತುಂಗಭದ್ರಾ ಹೂಳಿನ ಜಾತ್ರೆ ಹಮ್ಮಿಕೊಳ್ಳಲಾಗಿದೆ. ನೂರಕ್ಕೂ ಹೆಚ್ಚು ಟ್ರ್ಯಾಕ್ಟರ್, ರೈತರು ಚಳವಳಿಯಲ್ಲಿ ಭಾಗವಹಿಸಲಿದ್ದಾರೆ ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಜೀವನಾಡಿಯಾಗಿರುವ ಜಲಾಶಯದಲ್ಲಿ ಹೂಳಿನ ಪ್ರಮಾಣ ಹೆಚ್ಚುತ್ತಲೇ ಇದೆ. ನೀರಿನ ಸಂಗ್ರಹ ಸಾಮರ್ಥ್ಯ ಕುಸಿತಗೊಳ್ಳುತ್ತಿದೆ. ಜಲಾಶಯವನ್ನೇ ಆಶ್ರಯಿಸಿರುವ ಮೂರು ರಾಜ್ಯಗಳ ರೈತರು ಆತಂಕಗೊಂಡಿದ್ದಾರೆ. ಜಲಾಶಯದ ನೀರನ್ನು ಕಾರ್ಖಾನೆಗಳು ಸಹ ಬಳಕೆ ಮಾಡುತ್ತಿರುವುದರಿಂದ ಮುಂದಿನ ದಿನಗಳಲ್ಲಿ ರೈತರ ಕೃಷಿ ಚಟುವಟಿಕೆಗಳಿಗೆ ನೀರು ದಕ್ಕುವುದು ಕಷ್ಟವಾಗಲಿದೆ. ಕರ್ನಾಟಕ ಸೇರಿದಂತೆ ಮೂರು ರಾಜ್ಯಗಳು ಚರ್ಚಿಸಿ ಹೂಳು ತೆಗೆಯುವ ನಿರ್ಧಾರ ಕೈಗೊಳ್ಳಬೇಕು. ಪರ್ಯಾಯ ಜಲಾಶಯ ಮಾಡುವುದರ ಜೊತೆಗೆ ಹೂಳು ತೆಗೆಯುವ ಕಾಳಜಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.2017ರಲ್ಲಿ ಸಂಘದಿಂದ ಹೂಳು ತೆಗೆಯುವ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿತ್ತು. ನಂತರದಲ್ಲಿ ರಾಜ್ಯ ಸರ್ಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಲಾಯಿತು. ಆದರೆ, 8 ವರ್ಷಗಳಾದರೂ ಈವರೆಗೆ ಜಲಾಶಯದ ಹೂಳು ತೆಗೆಯುವ ಕುರಿತು ಯಾವುದೇ ನಿಲುವು ತೆಗೆದುಕೊಳ್ಳದೇ ರೈತ ವಿರೋಧಿಯಾಗಿ ವರ್ತಿಸುತ್ತಿದೆ ಎಂದರು.
ಇತ್ತೀಚೆಗೆ ಅಖಂಡ ಬಳ್ಳಾರಿ ಜಿಲ್ಲೆಗೆ ಆಗಮಿಸಿದ್ದ ಡಿಸಿಎಂ ಡಿ.ಕೆ. ಶಿವಕುಮಾರ್ ಗಮನಕ್ಕೆ ತಂದಾಗ, "ಹೂಳು ತೆಗೆಯಲು ಯಾವುದೇ ಅಭ್ಯಂತರವಿಲ್ಲ " ಎಂದು ಹೇಳಿದ್ದಾರೆ. ಹೀಗಿರುವಾಗ ಪೊಲೀಸರ ಮಧ್ಯಪ್ರವೇಶ ಏಕೆ? ಎಂದು ಪ್ರಶ್ನಿಸಿದರು.ಗಣಿಗಾರಿಕೆಯಿಂದಾಗಿ ಜಲಾಶಯದಲ್ಲಿ ಹೂಳು ತುಂಬಿಕೊಂಡಿದೆ. ವಿವಿಧ ಕೈಗಾರಿಕೆಗಳು ಜಲಾಶಯದಿಂದ ಅಪಾರ ಪ್ರಮಾಣದ ನೀರು ಪಡೆಯುತ್ತಿವೆ. ಜಿಲ್ಲಾ ಖನಿಜ ನಿಧಿ ಬಳಸಿಕೊಂಡು ಹೂಳು ತೆಗೆಯುವ ಕಾರ್ಯಕ್ಕೆ ಮುಂದಾಗಬೇಕು. ಹೂಳು ತೆಗೆಯುವ ಜತೆಗೆ ಸಮಾನಾಂತರ ಜಲಾಶಯ ನಿರ್ಮಾಣಕ್ಕೂ ಮುಂದಾಗಬೇಕು ಎಂದು ಒತ್ತಾಯಿಸಿದರು.
ನೀರಾವರಿ ಇಲಾಖೆಯ ನಿವೃತ್ತ ಮುಖ್ಯ ಎಂಜಿನಿಯರ್ ವಿ.ಪಿ. ಉದ್ದಿಹಾಳು ಮಾತನಾಡಿ, ಕಳೆದ ವರ್ಷ ತುಂಗಭದ್ರಾ ಜಲಾಶಯದ ಕ್ರಸ್ಟ್‌ಗೇಟ್ ಕಿತ್ತು ಹೋದವು. ಐದಾರು ವರ್ಷಗಳ ಹಿಂದೆಯೇ ಕ್ರಸ್ಟ್‌ಗೇಟ್ ಬದಲಾಯಿಸಬೇಕಿತ್ತು. ಆದರೆ, ನಿರ್ಲಕ್ಷ್ಯ ವಹಿಸಿದ್ದರಿಂದ ಗೇಟ್ ಕಿತ್ತು ಹೋದವು. ಇದರಿಂದಾಗಿ ಮೂರು ರಾಜ್ಯಗಳ ರೈತರು ಎರಡನೇ ಬೆಳೆ ಕಳೆದುಕೊಂಡರು. ಕ್ರಸ್ಟ್‌ಗೇಟ್ ಅಳವಡಿಕೆಗೂ ತುಂಗಭದ್ರಾ ರೈತ ಸಂಘದಿಂದ ಹೋರಾಟ ನಡೆಸಲಾಯಿತು. ಸಂಘವು ರೈತರ ಧ್ವನಿಯಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.ಶ್ರೀಧರಗೌಡ ಜಾಲಿಹಾಳು, ಗೋವಿಂದಪ್ಪ ಕೊಂಚಿಗೇರಿ, ವೀರಭಧ್ರ ನಾಯಕ, ಗಾದಿಲಿಂಗನಗೌಡ ಸುದ್ದಿಗೋಷ್ಠಿಯಲ್ಲಿದ್ದರು.