ಸಾರಾಂಶ
ವಿಧಾನಸಭೆ : ರಾಜ್ಯ ಸರ್ಕಾರ ಹೇಳಿರುವಂತೆ 25 ಕಿ.ಮೀ. ಸುರಂಗ ರಸ್ತೆಯನ್ನು 17,700 ಕೋಟಿ ರು. ವೆಚ್ಚದಲ್ಲಿ 3 ವರ್ಷದಲ್ಲಿ ಪೂರ್ಣಗೊಳಿಸಲು ಸಾಧ್ಯವಿಲ್ಲ. ಈ ಬಗ್ಗೆ ನಾನು ಸರ್ಕಾರಕ್ಕೆ ಸವಾಲು ಹಾಕುತ್ತೇನೆ. ಸಮಯ ಹಾಗೂ ವೆಚ್ಚ ದುಪ್ಪಟ್ಟಾಗುತ್ತದೆ ಎಂದು ಬಿಜೆಪಿ ಸದಸ್ಯ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಹೇಳಿದ್ದಾರೆ.
ಇದೇ ವೇಳೆ ಟನಲ್ ರಸ್ತೆಗಾಗಿ ಸರ್ಕಾರ ಎಲ್ಲಾ ಆಸ್ತಿಗಳನ್ನು ಅಡಮಾನ ಇಟ್ಟುಕೊಂಡು 8,000 ಕೋಟಿ ರು. ಸಾಲ ಮಾಡಲು ಹೊರಟಿದೆ ಎಂದು ಆರೋಪಿಸಿದ್ದಾರೆ.
ವಿಧಾನಸಭೆಯಲ್ಲಿ ಅಭಿವೃದ್ಧಿ ಕುರಿತು ಅಲ್ಪಾವಧಿ ಚರ್ಚೆ ವೇಳೆ ಮಾತನಾಡಿ, ಬೆಂಗಳೂರನ್ನು ಸರ್ಕಾರ ಹಾಳು ಮಾಡುತ್ತಿದೆ. ರಸ್ತೆಗುಂಡಿ, ಹಾಳಾದ ಪಾದಚಾರಿ ಮಾರ್ಗ, ಸಂಚಾರದಟ್ಟಣೆ, ಎ-ಖಾತಾ ಬಿ-ಖಾತಾ ಹೆಸರಿನಲ್ಲಿ ಜನರ ವಂಚನೆ ಮಾಡುತ್ತಿದೆ. ಪೂರ್ವಸಿದ್ಧತೆ ಇಲ್ಲದೆ ಟನಲ್ ರಸ್ತೆಯಂತಹ ಯೋಜನೆ ಘೋಷಿಸಿ ಆಶಾಗೋಪುರ ಕಟ್ಟುತ್ತಿದೆ ಎಂದು ಕಿಡಿಕಾರಿದರು.
ಸರ್ಕಾರವು 17,700 ಕೋಟಿ ರು. ವೆಚ್ಚದಲ್ಲಿ 25 ಕಿ.ಮೀ. ಸುರಂಗ ರಸ್ತೆ ಮಾಡುವುದಾಗಿ ಹೇಳಿದ್ದೀರಿ. 2-3 ವರ್ಷದಲ್ಲಿ ಮಾಡುವುದಾಗಿ ಹೇಳಿದ್ದೀರಿ. ಇದಕ್ಕಾಗಿ ಎಂಟು ಟಿಬಿಎಂ (ಟನಲ್ ಬೋರಿಂಗ್ ಮೆಷಿನ್) ಬೇಕು. ಒಂದು ಟಿಬಿಎಂ ಯಂತ್ರಕ್ಕೆ ನೀವು ಆರ್ಡರ್ ನೀಡಿದ ಬಳಿಕ ಅದು ಸಿದ್ಧವಾಗಿ ಬರಲು 18 ತಿಂಗಳು ಬೇಕು. ನನ್ನ ಪ್ರಕಾರ 7-8 ವರ್ಷದಿಂದ ಕಡಿಮೆ ಅವಧಿಯಲ್ಲಿ ಈ ಸುರಂಗ ರಸ್ತೆ ಮಾಡಲು ಆಗಲ್ಲ. ಈ ಅವಧಿಯಲ್ಲಿ ಯೋಜನೆ ವೆಚ್ಚ ಹೆಚ್ಚಾದರೆ ಯಾರು ಹೊಣೆ? ಯಾವುದೇ ಪೂರ್ವಸಿದ್ಧತೆ ಇಲ್ಲದೆ ಯೋಜನೆ ಮಾಡಲು ಹೊರಟಿದ್ದಾರೆ. ಇದೊಂದು ರೀತಿ ಮಕ್ಕಳ ಆಟದಂತಾಗಿದೆ ಎಂದು ಟೀಕಿಸಿದರು.
ಟನಲ್ ರಸ್ತೆಯಲ್ಲಿ ಕಸ ತುಂಬಬಹುದು: ಅಶೋಕ್
ಇದೇ ವಿಷಯವಾಗಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ಎತ್ತಿನಹೊಳೆ ಯೋಜನೆಗೆ ಒಂದು ಲಕ್ಷ ಕೋಟಿ ರೂ. ಖರ್ಚು ಮಾಡಿದರೂ ಮುಗಿದಿಲ್ಲ. ಇದೇ ರೀತಿ ಸುರಂಗ ರಸ್ತೆ ಯೋಜನೆಯನ್ನು 17,000 ಕೋಟಿ ರು. ವೆಚ್ಚ ಎಂದು ಹೇಳಿದ್ದರೂ ಅಷ್ಟಕ್ಕೆ ಮುಗಿಯುವುದಿಲ್ಲ. ಈ ರಸ್ತೆಗೆ ಟೋಲ್ ವಿಧಿಸಿದರೆ ಯಾರೂ ಸಂಚಾರ ಮಾಡುವುದಿಲ್ಲ. ಆಗ ಸುರಂಗದಲ್ಲೇ ಕಸ ತುಂಬಬಹುದು. ನಾನು ಅಭಿವೃದ್ಧಿಯ ವಿರೋಧಿಯಲ್ಲ. ಆದರೆ ಸುರಂಗಕ್ಕಾಗಿ ಹಣ ಹಾಳು ಮಾಡಿದರೆ ನಗರದ ಅಭಿವೃದ್ಧಿ ಅಸಾಧ್ಯ ಎಂದು ಹೇಳಿದರು.