ಟರ್ಕಿ, ಅಜರ್‌ಬೈಜಾನ್‌ ಜೊತೆ ಬಟ್ಟೆ ವ್ಯವಹಾರ ಪೂರ್ಣ ಬಂದ್‌

| N/A | Published : May 18 2025, 01:18 AM IST / Updated: May 18 2025, 08:09 AM IST

branded women cloths

ಸಾರಾಂಶ

 ಟರ್ಕಿ, ಅಜರ್‌ಬೈಜಾನ್‌ ದೇಶಗಳು ಉಗ್ರ ಪೋಷಕ ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ಎರಡೂ ದೇಶಗಳ ಜತೆಗೆ ಬಟ್ಟೆ ಆಮದು-ರಫ್ತು ವಹಿವಾಟು ನಿಲ್ಲಿಸಲು ಬೆಂಗಳೂರು ಸಗಟು ಬಟ್ಟೆ ವ್ಯಾಪಾರಿಗಳ ಸಂಘ  ನಿರ್ಧರಿಸಿದೆ.

 ಬೆಂಗಳೂರು :  ಆಪರೇಷನ್ ಸಿಂದೂರ ಕಾರ್ಯಾಚರಣೆ ವೇಳೆ ಟರ್ಕಿ, ಅಜರ್‌ಬೈಜಾನ್‌ ದೇಶಗಳು ಉಗ್ರ ಪೋಷಕ ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಈ ಎರಡೂ ದೇಶಗಳ ಜತೆಗೆ ಬಟ್ಟೆ ಆಮದು-ರಫ್ತು ವಹಿವಾಟು ನಿಲ್ಲಿಸಲು ಬೆಂಗಳೂರು ಸಗಟು ಬಟ್ಟೆ ವ್ಯಾಪಾರಿಗಳ ಸಂಘ (ಬಿಡಬ್ಲೂಸಿಎಂಎ) ನಿರ್ಧರಿಸಿದೆ.

ಬೆಂಗಳೂರಿನಾದ್ಯಂತ ಸುಮಾರು 3,000 ಸಗಟು ಅಂಗಡಿಗಳ ಸಂಘವಿದೆ. ಈ ಸಂಘಗಳ ಮೂಲಕ ಟರ್ಕಿ ಮತ್ತು ಅಜರ್ ಬೈಜಾನ್ ದೇಶಗಳೊಂದಿಗೆ ವಾರ್ಷಿಕ ಕೋಟ್ಯಂತರ ರುಪಾಯಿ ಮೌಲ್ಯದ ವ್ಯಾಪಾರ ನಡೆಯುತ್ತಿದೆ. ಈ ದೇಶಗಳ ಜತೆಗಿನ ಬಟ್ಟೆ ಆಮದು ಹಾಗೂ ರಫ್ತು ನಿಲ್ಲಿಸಲು ನಾವು ನಿರ್ಧಾರ ಕೈಗೊಂಡಿದ್ದೇವೆ. ಜತೆಗೆ ಮಧ್ಯವರ್ತಿಗಳು ಅಥವಾ ಮೂರನೇ ವ್ಯಕ್ತಿ, ದೇಶಗಳ ಮೂಲಕ ಪರೋಕ್ಷ ವ್ಯಾಪಾರವನ್ನೂ ತಡೆಯಲು ನಮ್ಮೆಲ್ಲಾ ಸದಸ್ಯರು ಒಪ್ಪಿಕೊಂಡಿದ್ದಾರೆ. ಈ ನಿರ್ಣಯ ಮುಂದಿನ ಸೂಚನೆಯವರೆಗೂ ಜಾರಿಯಲ್ಲಿರುತ್ತದೆ ಎಂದು ಸಂಘ ತಿಳಿಸಿದೆ.

ಈ ಬಗ್ಗೆ ಮಾತನಾಡಿದ ಸಂಘದ ಅಧ್ಯಕ್ಷ ಪ್ರಕಾಶ್ ಪಿರ್ಗಲ್, ರಾಷ್ಟ್ರೀಯ ಭಾವನೆ ಮತ್ತು ವ್ಯಾಪಾರಿ ಸಮುದಾಯದ ಹಿತಾಸಕ್ತಿಯ ಬದ್ಧತೆಗೆ ಅನುಗುಣವಾಗಿ ಸಮಾಲೋಚಿಸಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜವಳಿ ವ್ಯಾಪಾರ ವಲಯದಲ್ಲಿ ಜವಾಬ್ದಾರಿಯುತ ಪಾಲುದಾರರಾಗಿ, ಅಗತ್ಯವಿದ್ದಾಗ ತಾತ್ವಿಕ ನಿಲುವು ತೆಗೆದುಕೊಳ್ಳುವುದು ಅತ್ಯಗತ್ಯ ಎಂದು ಸಂಘಟನೆ ನಿರ್ಧರಿಸಿದೆ.

ನಮ್ಮಿಂದ ಪುರುಷರ ಸೂಟಿಂಗ್‌-ಷರ್ಟಿಂಗ್‌ ಬಟ್ಟೆ ವಹಿವಾಟು ಹೆಚ್ಚಾಗಿ ನಡೆಯುತ್ತಿತ್ತು. ಅಲ್ಲಿಗೆ ಬಟ್ಟೆ ಕಳುಹಿಸದೇ ಇರುವುದರಿಂದ ನಮ್ಮ ಬಟ್ಟೆ ವ್ಯಾಪಾರಿಗಳಿಗೆ ಯಾವುದೇ ನಷ್ಟ ಆಗುವುದಿಲ್ಲ. ಬದಲಾಗಿ ಆ ದೇಶದ ವ್ಯಾಪಾರಸ್ಥರಿಗೆ ತೊಂದರೆ ಆಗುತ್ತದೆ. ನಾವು ಪಕ್ಕದ ದೇಶಗಳಿಂದ ತರಿಸಿಕೊಳ್ಳಬಹುದು ಎಂದು ಪ್ರಕಾಶ್‌ ತಿಳಿಸಿದರು.

Read more Articles on