ಸಾರಾಂಶ
ಹಳಿಯಾಳ: ಪಟ್ಟಣದ ತಾಲೂಕು ಆಸ್ಪತ್ರೆಯ ಆಯುಷ್ ವಿಭಾಗದ ವೈದ್ಯಾಧಿಕಾರಿಗಳ ಕೊಠಡಿಗೆ ನುಗ್ಗಿ ಗಲಾಟೆ ಮಾಡಿ ರೋಗಿಗಳ ತುರ್ತು ಚಿಕಿತ್ಸೆ ವೇಳೆ ಅಡ್ಡಿಪಡಿಸಿದ ಆರೋಪದ ಮೇಲೆ ಪತ್ರಕರ್ತರೆಂದು ಹೇಳಿಕೊಂಡ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆಸ್ಪತ್ರೆಯ ಶುಶ್ರೂಷಕರ ಅಧೀಕ್ಷಕಿ ತೇಜಸ್ವಿನಿ ಅಶೋಕ ಪಾಲೇಕರ ಅವರ ದೂರಿನ ಅನ್ವಯ ಗಣೇಶ ರಾಠೋಡ, ದಿವ್ಯಾ ಮಹಾಜನ ಎಂಬುವರನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.ದಿವ್ಯಾ ಮಹಾಜನ ಎಂಬವರು ಇತ್ತೀಚೆಗೆ ಆಸ್ಪತ್ರೆಯ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ಜಾತಿನಿಂದನೆ ಮಾಡಿದ್ದು, ಗಣೇಶ ರಾಠೋಡ ವಿಡಿಯೋವನ್ನು ಯುಟ್ಯೂಬ್‌ನಲ್ಲಿ ಹಾಕಿ ಪ್ರಸಾರ ಮಾಡುವ ಬೆದರಿಕೆ ಹಾಕಿದ್ದಾರೆ. ಅಲ್ಲದೇ ಮಾನಹಾನಿ ಜತೆ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಕುರಿತು ದೂರು ದಾಖಲಾಗಿದೆ.
ತಹಸೀಲ್ದಾರರಿಗೆ ಮನವಿ: ಪತ್ರಕರ್ತರೆಂದು ಹೇಳಿಕೊಂಡು ತಾಲೂಕು ಆಸ್ಪತ್ರೆಗೆ ನುಗ್ಗಿ ವೈದ್ಯರು ಮತ್ತು ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗಣೇಶ ರಾಠೋಡ ಹಾಗೂ ದಿವ್ಯಾ ಮಹಾಜನ ಎಂಬವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕ ಹಾಗೂ ತಾಲೂಕು ಆರೋಗ್ಯ ಇಲಾಖೆಯ ವೈದ್ಯರು ಮತ್ತು ಸಿಬ್ಬಂದಿ ರಾಜ್ಯ ಸರ್ಕಾರವನ್ನು ಆಗ್ರಹಿಸಿತ್ತು. ಈ ಕುರಿತಂತೆ ಬುಧವಾರ ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ ಅವರಿಗೆ ಮನವಿ ಸಲ್ಲಿಸಲಾಗಿತ್ತು.ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸತೀಶ ನಾಯಕ ಭಾವಿಕೇರಿ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯಕ ಮಾತನಾಡಿ, ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸುವ, ಅವರ ಮನೋಬಲಕ್ಕೆ ಧಕ್ಕೆ ತರುವ ಹಲವಾರು ಪ್ರಕರಣಗಳು ನಡೆದಿದ್ದು, ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ನೌಕರರ ಸಂಘದ ಪ್ರಮುಖರಾದ ಮಹಾಲಿಂಗೇಶ ಓಶೀಮಠ, ಲಕ್ಷ್ಮಣ ಗಡಕರ, ಪೂಣಂ ಕೊಠಾರಕರ, ರಾಮಕ್ಕ ಕೊರವಿ, ಶಶಿಧರ ಬುಳ್ಳಾ, ರವೀಂದ್ರಬಾಬು ವಿ.ಎಲ್, ಸತೀಶ್ ಮಾನೆ, ಡಾ. ಕೆ.ಎಂ. ನದಾಪ್, ಮಂಜುಳಾ ಗೋಡಿಕಟ್ಟಿ, ಫಕೀರಪ್ಪ ಕಮಡೊಳ್ಳಿ ಹಾಗೂ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ರಮೇಶ ಕದಂ, ಡಾ. ಗುರುಪ್ರಸಾದ ಆಚಾರಿ, ಡಾ. ಅರುಣ ಹಲಗತ್ತಿ, ಡಾ. ಸೋನಾ, ಡಾ. ಸ್ಟೇನ್ಲಿ ನಂದ್ಯಾಲ್, ಡಾ. ಶಶಿಕಲಾ, ಡಾ. ಅಮಿತ್, ಡಾ. ಪ್ರತಾಪ, ಡಾ. ರವಿಕಿರಣ ಹಾಗೂ ಸಿಬ್ಬಂದಿ ಇದ್ದರು.ಇಂದಿನಿಂದ ಮುಗಳಿಕೋಣೆ ಗೋಪಾಲಕೃಷ್ಣ ದೇವರ ವರ್ಧಂತಿ
ಭಟ್ಕಳ: ಪಟ್ಟಣದ ಮುಗಳಿಕೋಣೆ ಶ್ರೀ ಗೋಪಾಲಕೃಷ್ಣ ದೇವರ ಪ್ರತಿಷ್ಠಾ ವರ್ಧಂತಿ ಉತ್ಸವ ಫೆ. ೬ ಮತ್ತು ೭ರಂದು ನಡೆಯಲಿದೆ ಎಂದು ಟ್ರಸ್ಟಿನ ಅಧ್ಯಕ್ಷ ನಾರಾಯಣ ಎಂ. ಶೆಟ್ಟಿ ತಿಳಿಸಿದ್ದಾರೆ.ಪ್ರತಿಷ್ಠಾ ವರ್ಧಂತ್ಯುತ್ಸವದ ಅಂಗವಾಗಿ ಫೆ. ೬ರಂದು ಬೆಳಗ್ಗೆ ಗಣೇಶ ಪೂಜಾ, ಪುಣ್ಯಾಹ, ನಾಂದಿ, ಕೌತುಕ ಪೂಜಾ, ಋತ್ವಿಕ್ ವರ್ಣನೆ, ಅಷ್ಟಮೂರ್ತಿ ಪ್ರಾರ್ಥನೆ, ಧ್ವಜಶುದ್ಧಿ, ಧ್ವಜಾರೋಹಣ, ಗಣಹೋಮ, ಮಹಾಪೂಜೆ, ಸಂಜೆ ರಾಕ್ಷೋಘ್ನ ಹೋಮ, ವಾಸ್ತು ಹೋಮ, ಕುಂಡ ಮಂಟಪ ಸಂಸ್ಕಾರ, ಭೇರಿ ತಾಡನ, ಬಲಿ, ಪಲ್ಲಕ್ಕಿ ಉತ್ಸವ ಇತ್ಯಾದಿ ನಡೆಯಲಿದೆ. ಫೆ. ೭ರಂದು ಬೆಳಗ್ಗೆ ಸಾಮೂಹಿಕ ಉಪನಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬೆಳಗ್ಗೆ ೮ ಗಂಟೆಯಿಂದ ಅಗ್ರೋದಕ, ಗಣೇಶ ಪೂಜಾ, ಪುಣ್ಯಾಹ, ಗೃಹ ಮೃತ್ಯುಂಜಯ, ಸ್ಥಾನಶುದ್ಧಿ, ಬಿಂಬಿಶುದ್ಧಿ, ಅಧಿವಾಸ, ಪಂಚಬ್ರಹ್ಮಶಕ್ತಿ, ತತ್ವಕಲಾ ಪ್ರಾಣ ಪ್ರತಿಷ್ಠೆ, ಪ್ರಾಯಶ್ಚಿತ್ತ ಶಾಂತಿ, ಪುರುಷಸೂಕ್ತ, ಶ್ರೀಸೂಕ್ತ ಹವನ, ಪೂರ್ಣಾಹುತಿ, ಕಲಾಭಿಷೇಕ, ಮಹಾಪೂಜೆ, ಬಲಿ, ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ. ಸಂಜೆ ರಂಗಪೂಜೆ, ಬಲಿ, ಅಷ್ಟಾವಧಾನ ಸೇವೆ, ಮಹಾಪೂಜೆ, ತೀರ್ಥ ಪ್ರಸಾದ ವಿತರಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.