ಕೆರೆಯಲ್ಲಿ ಈಜಲು ಹೋದ ಬಾಲಕರಿಬ್ಬರು ನೀರುಪಾಲು

| Published : May 21 2024, 12:35 AM IST

ಕೆರೆಯಲ್ಲಿ ಈಜಲು ಹೋದ ಬಾಲಕರಿಬ್ಬರು ನೀರುಪಾಲು
Share this Article
  • FB
  • TW
  • Linkdin
  • Email

ಸಾರಾಂಶ

ಈಜಲು ತೆರಳಿದ್ದ ಇಬ್ಬರು ಬಾಲಕರು ಕೆರೆಯಲ್ಲಿ ಮುಳುಗಿ ನೀರುಪಾಲಾದ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿ ಕೆರೆಯಲ್ಲಿ ಸೋಮವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಈಜಲು ತೆರಳಿದ್ದ ಇಬ್ಬರು ಬಾಲಕರು ಕೆರೆಯಲ್ಲಿ ಮುಳುಗಿ ನೀರುಪಾಲಾದ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿ ಕೆರೆಯಲ್ಲಿ ಸೋಮವಾರ ನಡೆದಿದೆ.

ನಂದಗಾಂವ ಗ್ರಾಮದ ಸಮರ್ಥ ಸದಾಶಿವ ಜುಲ್ಪಿ(೧೦), ಹೊಸೂರಿನ ಸಂಜಯ ಲಕ್ಷ್ಮಣ ತಳವಾರ (೧೩) ಮೃತ ಮಕ್ಕಳು. ಶಾಲೆಗೆ ರಜೆ ಇರುವುದರಿಂದ ಸೋಮವಾರ ಬೆಳಗ್ಗೆ ೬ ಬಾಲಕರು ಸೇರಿ ಕೆರೆಗೆ ಈಜಲು ತೆರಳಿದ್ದರು. ಈಜು ಬರುತ್ತಿದ್ದ ಐವರು ಬಾಲಕರು ಕೆರೆಯ ಮಧ್ಯ ಭಾಗದಲ್ಲಿ ಈಜಾಡುತ್ತಿದ್ದರೆ, ಈಜಲು ಬಾರದ ಸಮರ್ಥ ಕೆರೆಯ ದಡದಲ್ಲಿ ಕುಳಿತಿದ್ದ, ನಂತರ ನೀರಿಗೆ ಇಳಿದಿದ್ದಾನೆ. ಗುಂಡಿಯಲ್ಲಿ ಕಾಲಿಟ್ಟು ಮುಳುಗುತ್ತಿದ್ದಾಗ ಇದನ್ನು ನೋಡಿದ ಸಂಜಯ ತಳವಾರ ರಕ್ಷಣೆಗೆ ಧಾವಿಸಿ, ದಂಡೆ ಕಡೆಗೆ ಎಳೆದು ತರುವಾಗ ಗಾಬರಿಯಿಂದ ಮೇಲೇರಿ ಅಪ್ಪಿಕೊಂಡಿದ್ದಾನೆ. ನೋಡ ನೋಡುತ್ತಿದ್ದಂತೆಯೇ ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ.

ನಂತರ ದಡದತ್ತ ಬಂದ ನಾಲ್ವರು, ಸಮರ್ಥ ಹಾಗೂ ಸಂಜಯ ಇಬ್ಬರೂ ಕಂಡಿಲ್ಲ. ಸುತ್ತಮುತ್ತ ಕಣ್ಣಾಡಿಸಿದಾಗ ತಗ್ಗು ಪ್ರದೇಶದಲ್ಲಿ ಮುಳುಗಿದ್ದನ್ನು ಕಂಡ ಬಾಲಕರು ಶ್ರಮಪಟ್ಟು ಇಬ್ಬರನ್ನೂ ಹೊರತೆಗೆದಿದ್ದಾರೆ. ಆದರೆ, ಅಷ್ಟರೊಳಗೆ ಅವರಿಬ್ಬರೂ ಅಸುನೀಗಿದ್ದರು.

ಅಜ್ಜಿ ಮನೆಗೆ ಬಂದ ಬಾಲಕ ಮಸಣಕ್ಕೆ:

ಮಹಾಲಿಂಗಪುರ ಸಮೀಪದ ನಂದಗಾಂವ ಗ್ರಾಮದ ಸಮರ್ಥ ಜುಲ್ಪಿ ಶಾಲೆಗೆ ರಜೆ ಇದ್ದ ಕಾರಣ ಭಾನುವಾರವಷ್ಟೇ ಹೊಸೂರಿನಲ್ಲಿರುವ ತನ್ನ ಅಜ್ಜಿ ಮನೆಗೆ ಬಂದಿದ್ದ. ಬೆಳಗ್ಗೆ ಇತರ ಮಕ್ಕಳೊಂದಿಗೆ ಕೆರೆಗೆ ಹೋಗುತ್ತೇನೆಂದು ಹೇಳಿದಾಗ ಕುಟುಂಬದವರು ಹೋಗಬೇಡಿ ಎಂದು ತಾಕೀತು ಮಾಡಿದ್ದರು. ಆದರೂ ಕೇಳದ ಮಕ್ಕಳು ಕೆರೆಗೆ ಸ್ನಾನಕ್ಕೆ ತೆರಳಿದ್ದು, ಈಗ ಅಸುನೀಗಿದ್ದಾನೆ.

ಪೋಷಕರ ಆಕ್ರಂದನ: ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರು ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

ಘಟನಾ ಸ್ಥಳಕ್ಕೆ ಬನಹಟ್ಟಿ ಸಿಪಿಐ ಸಂಜೀವ ಬಳಗಾರ, ಪಿಎಎಸ್‌ಐ ಶಾಂತಾ ಹಳ್ಳಿ ಸೇರಿದಂತೆ ಪೊಲೀಸ್ ತಂಡ ಭೆಟ್ಟಿ ನೀಡಿ ಪರಿಶೀಲನೆ ನಡೆಸಿತು. ಬನಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿರಂತರ ಘಟನೆ: ಬನಹಟ್ಟಿ ಕೆರೆಯಲ್ಲಿ ಪ್ರತಿ ವರ್ಷ ಬೇಸಿಗೆ ಸಂದರ್ಭ ಮಕ್ಕಳು ಈಜಲು ತೆರಳುವುದು ಸಾಮಾನ್ಯವಾಗಿದೆ. ಇಲ್ಲಿನ ಕೆರೆಯಲ್ಲಿ ದೊಡ್ಡ ದೊಡ್ಡ ಕುಳಿಗಳಿದ್ದು, ಇದರ ಅರಿವಿಲ್ಲದೆ ಹೋಗುವ ಮಕ್ಕಳು ನೀರಲ್ಲಿ ಮುಳುಗಿ ನೀರುಪಾಲುವ ಘಟನೆಗಳು ಪ್ರತಿ ವರ್ಷ ನಡೆಯುತ್ತಲೇ ಇವೆ. ಕೆರೆಯಲ್ಲಿ ಈಜಲು ಇಳಿಯದಂತೆ ಬೇಲಿ ಹಾಕುವುದರೊಂದಿಗೆ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರುವಂತೆ ನಾಗರಿಕರು ಒತ್ತಾಯಿಸಿದ್ದಾರೆ.