ಈಜಲು ಹೋಗಿ ಇಬ್ಬರು ಬಾಲಕರು ನೀರುಪಾಲು

| Published : May 22 2024, 12:51 AM IST

ಸಾರಾಂಶ

ವಿಜಯಪುರ ನಗರದ ಗಚ್ಚಿನಕಟ್ಟಿ ಕಾಲೋನಿಯ ಮನೆಯಿಂದ ಹೋದ ಮಕ್ಕಳು ಕಾಣೆಯಾಗಿ ಇಂಡಿ ರಸ್ತೆಯಲ್ಲಿರುವ ಯುಜಿಡಿ ತ್ಯಾಜ್ಯ ಸಂಸ್ಕರಣ ಘಟಕದ ಕಾಲುವೆಗೆ ಬಿದ್ದು ಮೂವರು ಮಕ್ಕಳು ಮೃತಪಟ್ಟ ಘಟನೆ ಮಾಸುವ ಮುನ್ನವೇ ಈಜಲು ಹೋಗಿ ಇಬ್ಬರು ಬಾಲಕರು ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂಡಿ ಪಟ್ಟಣದ ದೇಶಪಾಂಡೆ ತಾಂಡಾದಲ್ಲಿ ಮಂಗಳವಾರ ನಡೆದಿದೆ.

ಕನ್ನಡಪ್ರಭ ವಾರ್ತೆ ಇಂಡಿ

ವಿಜಯಪುರ ನಗರದ ಗಚ್ಚಿನಕಟ್ಟಿ ಕಾಲೋನಿಯ ಮನೆಯಿಂದ ಹೋದ ಮಕ್ಕಳು ಕಾಣೆಯಾಗಿ ಇಂಡಿ‌ ರಸ್ತೆಯಲ್ಲಿರುವ ಯುಜಿಡಿ ತ್ಯಾಜ್ಯ ಸಂಸ್ಕರಣ ಘಟಕದ ಕಾಲುವೆಗೆ ಬಿದ್ದು ಮೂವರು ಮಕ್ಕಳು ಮೃತಪಟ್ಟ ಘಟನೆ ಮಾಸುವ ಮುನ್ನವೇ ಈಜಲು ಹೋಗಿ ಇಬ್ಬರು ಬಾಲಕರು ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂಡಿ ಪಟ್ಟಣದ ದೇಶಪಾಂಡೆ ತಾಂಡಾದಲ್ಲಿ ಮಂಗಳವಾರ ನಡೆದಿದೆ.

ದೇಶಪಾಂಡೆ ತಾಂಡಾದ ಸುದೀಪ ಜಾಧವ (15) ಹಾಗೂ ಅಮೀತ ರಾಠೋಡ(12) ಮೃತ ಬಾಲಕರು. ಸುದೀಪ ವೀರಭಾರತಿ ವಿದ್ಯಾ ಕೇಂದ್ರದಲ್ಲಿ 9ನೇ ತರಗತಿ ಪಾಸಾಗಿ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 10ನೇ ತರಗತಿಯಲ್ಲಿ ಓದಬೇಕಿತ್ತು. ಅಮೀತ ಭಾಗ್ಯವಂತಿ ಶಾಲೆಯಲ್ಲಿ 8 ನೇ ತರಗತಿಯಲ್ಲಿ ಪಾಸಾಗಿದ್ದು, ಈ ವರ್ಷ 9ನೇ ತರಗತಿಯಲ್ಲಿ ಓದಬೇಕಿತ್ತು. ಮುಂದಿನ ಶೈಕ್ಷಣಿಕ ಪಾಠ ಕೇಳುವ ಮುಂಚೆಯೇ ಇಬ್ಬರು ಬಾಲಕರು ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಈಜು ಬರುತ್ತಿರಲಿಲ್ಲ:

ಶಾಲೆ ರಜೆ ಇರುವುದರಿಂದ ಮಂಗಳವಾರ ದೇಶಪಾಂಡೆ ಸಮೀಪದ 1 ಕಿಮೀ ಅಂತರದಲ್ಲಿರುವ ಸತೀಶ ಪಾಸೋಡೆ ಎಂಬುವವರ ಕೃಷಿ ಹೊಂಡಕ್ಕೆ ಈಜಲು ಹೋಗಿದ್ದರು. ಕೃಷಿ ಹೊಂಡದಲ್ಲಿ ಈಜಲು ಹೋದಾಗ ಈಜು ಬಾರದೇ ಹಾಗೂ ಮೇಲೆ ಬರಲು ಆಗದೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಇಂಡಿ ಶಹರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಇಂಡಿ ಶಹರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೂಕ್ತ ಪರಿಹಾರಕ್ಕೆ ಆಗ್ರಹ:

ಬಡ ಬಂಜಾರ ಕುಟುಂಬದ ಬಾಲಕರಿಬ್ಬರು ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದು, ಮೃತ ಬಾಲಕರ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಪುರಸಭೆ ಸದಸ್ಯ ಲಿಂಬಾಜಿ ರಾಠೋಡ ಸರ್ಕಾರ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.