ಕೊಳ್ಳೇಗಾಲ ನಗರಸಭೆಯ ಕಾಂಗ್ರೆಸ್ ಸಭೇಲಿ ಇಬ್ಬರು ಬಿಜೆಪಿ ನಗರಸಭಾ ಸದಸ್ಯರು ಹಾಜರ್!

| Published : Sep 03 2024, 01:41 AM IST

ಕೊಳ್ಳೇಗಾಲ ನಗರಸಭೆಯ ಕಾಂಗ್ರೆಸ್ ಸಭೇಲಿ ಇಬ್ಬರು ಬಿಜೆಪಿ ನಗರಸಭಾ ಸದಸ್ಯರು ಹಾಜರ್!
Share this Article
  • FB
  • TW
  • Linkdin
  • Email

ಸಾರಾಂಶ

ಕೊಳ್ಳೇಗಾಲದ ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕ ಎ.ಆರ್.ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಬಿಜೆಪಿಯ ಇಬ್ಬರು ನಗರಸಭಾ ಸದಸ್ಯರು ಹಾಗೂ ನಗರಸಭಾ ಮಹಿಳಾ ಸದಸ್ಯರ ಪತಿಯೊಬ್ಬರು ಪಾಲ್ಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ನಗರಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕ ಎ.ಆರ್.ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಬಿಜೆಪಿಯ ಇಬ್ಬರು ನಗರಸಭಾ ಸದಸ್ಯರು ಹಾಗೂ ನಗರಸಭಾ ಮಹಿಳಾ ಸದಸ್ಯರ ಪತಿಯೊಬ್ಬರು ಪಾಲ್ಗೊಂಡಿರುವುದು ಈಗ ಪಕ್ಷಕ್ಕೆ ನುಂಗಲಾರದ ತುತ್ತಾಗಿದೆ.ಸೋಮವಾರ ಸಂಜೆ ಶಾಸಕ ಎ.ಆರ್.ಕೃಷ್ಣಮೂರ್ತಿ ಅಧ್ಯಕ್ಷತೆಯಲ್ಲಿ ಪ್ರವಾಸಿ ಮಂದಿರದಲ್ಲಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಬಿಜೆಪಿ ಸದಸ್ಯರಿಬ್ಬರು ಪಾಲ್ಗೊಂಡರು. ಅವರ ಜೊತೆ ಸದಸ್ಯರ ಪತಿಯೊಬ್ಬರು ಸಹ ಹಾಜರಿದ್ದರು. ಎನ್ನಲಾಗಿದ್ದು ಈ ವಿಚಾರ ಬಿಜೆಪಿ ವರಿಷ್ಠರ ಕಿವಿಗೂ ತಲುಪಿದೆ ಎಂದು ಹೇಳಲಾಗಿದೆ. ಇಬ್ಬರು ಪಕ್ಷೇತರರು ಗೈರು: ಶಾಸಕರ ಅಧ್ಯಕ್ಷತೆಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಪಕ್ಷೇತರರಾಗಿ ಆಯ್ಕೆಯಾಗಿ ಕಾಂಗ್ರೆಸ್ ಪಕ್ಷದೊಂದಿಗೆ ಗುರುತಿಸಿಕೊಂಡಿರುವ ಹಿರಿಯ ಸದಸ್ಯರಾದ ಎಪಿ ಶಂಕರ್, ಮನೋಹರ್ ಗೈರು ಹಾಜರಾಗಿದ್ದರು. ಅವರಿಗೆ ಅನ್ಯತುರ್ತು ಕಾರ್ಯದಿಂದಾಗಿ ಹಾಜರಾಗಿಲ್ಲ ಎಂದು ಹೇಳಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸಭೆ ನಿಗದಿಗೊಳಿಸಿದ್ದ ಹಿನ್ನೆಲೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದ ಬಿಎಸ್ಪಿಯಿಂದ ಆಯ್ಕೆಯಾಗಿರುವ ಜಯಂತ್, ಜಯಮೇರಿ ಗೈರಾಗಿದ್ದರು ಎಂದು ತಿಳಿದು ಬಂದಿದೆ. ಉಳಿದಂತೆ ಇನ್ನಿಬ್ಬರು ಪಕ್ಷೇತರ ಸದಸ್ಯರು ಪಾಲ್ಗೊಂಡಿದ್ದರು.ಒಗ್ಗಟ್ಟಿನ ಸಂದೇಶ ರವಾನಿಸಿದ ಶಾಸಕ: ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಹಾಜರಿದ್ದ ಸದಸ್ಯರಿಗೆ ಎಲ್ಲರೂ ಒಗ್ಗಟ್ಟಿನಿಂದ ಇರಬೇಕು, ಯಾರು ಅಧ್ಯಕ್ಷರಾಗಬೇಕು ಎಂಬುದನ್ನ ಪಕ್ಷ ನೇಮಿಸಿರುವ ಸುದರ್ಶನ್ ಮತ್ತು ತಂಡದ ಸದಸ್ಯರು ತೀರ್ಮಾನ ಮಾಡುತ್ತಾರೆ. ಅದಕ್ಕೂ ಮುನ್ನ ಎಲ್ಲ ಸದಸ್ಯರ ಅಭಿಪ್ರಾಯವನ್ನು ಸಂಗ್ರಹಿಸಲಿದ್ದಾರೆ. ಹಾಗಾಗಿ ನಿಮ್ಮಲ್ಲಿ ಗೊಂದಲ ಸೃಷ್ಟಿ ಮಾಡಿಕೊಳ್ಳದೆ ಒಮ್ಮತದಿಂದ ಇದ್ದು ಒಗ್ಗಟ್ಟು ಪ್ರದರ್ಶಿಸಿ ಎಂದು ಸಂದೇಶ ರವಾನಿಸಿದರು ಎನ್ನಲಾಗಿದೆ.ವರಿಷ್ಠರು ತೀರ್ಮಾನಿಸಲಿದ್ದಾರಂತೆ!: ಈಗಾಗಲೇ ಯಾರು ಅಧ್ಯಕ್ಷರಾಗಬೇಕು ಎಂಬುದನ್ನು ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ವರಿಷ್ಠರು ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಅದೇ ರೀತಿಯಲ್ಲಿ ವರಿಷ್ಠರು ಅಧ್ಯಕ್ಷ ಆಕಾಂಕ್ಷಿ ಹೆಸರನ್ನು ಶಾಸಕ ಎ.ಆರ್. ಕೃಷ್ಣಮೂರ್ತಿ ಅವರನ್ನು ಕೇಳಿ, ಸಲಹೆ ಪಡೆದು ಘೋಷಿಸುವುದನ್ನು ತಳ್ಳಿ ಹಾಕುವಂತಿಲ್ಲ, ಮೊದಲೇ ಅಭ್ಯರ್ಥಿ ಹೆಸರು ಘೋಷಿಸಿದರೆ ಬಂಡಾಯ ಎಳಬಹುದು, ವಿವಾದ, ಗೊಂದಲವೂ ಉಂಟಾಗಬಹುದು ಎಂಬ ಕಾರಣಕ್ಕೆ ಈ ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ. ನಗರಸಭಾ ಸದಸ್ಯರಲ್ಲಿ ಬಹುಪಾಲು ಇವರನ್ನು ಮಾಡಿ, ಇವರನ್ನು ಮಾಡಬೇಡಿ ಎಂದು ಹೇಳಿ ನಿಷ್ಠುರ ಕಟ್ಟಿಕೊಳ್ಳುವ ಸಾಧ್ಯತೆ ಕಡಿಮೆ. ರೇಖಾ ರಮೇಶ್ ಮತ್ತು ಪುಷ್ಪಲತಾ ಶಾಂತರಾಜು ಅವರಿಬ್ಬರ ನಡುವೆ ಪೈಪೋಟಿ ಇದೆ. ಹಾಗಾಗಿಯೇ ಸದಸ್ಯರಿಗೆ ಈ ಬೆಳವಣಿಗೆ, ಒತ್ತಡ ತಂತ್ರಗಳು ನುಂಗಲಾರದ ತುತ್ತಾಗಿ ಪರಿಣಮಿಸಿದೆ ಎಂದು ಹೇಳಲಾಗಿದೆ. ಈ ಹಿನ್ನೆಲೆ ವರಿಷ್ಠರ ಆಯ್ಕೆ ಅಂತಿಮ ಎಂದು ನಗರಸಭಾ ಸದಸ್ಯರು ಒಪ್ಪಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಸದಸ್ಯರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಬಿಜೆಪಿ ವರಿಷ್ಠರು ವಿಫಲ:ಬಿಜೆಪಿಯಿಂದ 13ಮಂದಿ ಜಯಗಳಿಸಿದ್ದು ಎಲ್ಲ ಸದಸ್ಯರನ್ನು ಹಿಡಿದಿಟ್ಟುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಹಾಗಾಗಿಯೇ ಸೋಮವಾರ ಸಂಜೆ ನಡೆದ ಸಭೆಗೆ ಬಿಜೆಪಿಯ ಇಬ್ಬರು ಮತ್ತು ಸದಸ್ಯರ ಪತಿಯೊಬ್ಬರು ತೆರಳಿದ್ದರು ಎನ್ನಲಾಗಿದೆ. ಚುನಾವಣಾ ದಿನಾಂಕ ನಿಗದಿಯಾಗುತ್ತಿದ್ದಂತೆ ಸದಸ್ಯರನ್ನು ಹಿಡಿದಿಟ್ಟುಕೊಳ್ಳಬಹುದಿತ್ತು, ಅವರ ಇಚ್ಛೆಗೆ ಅನುಸಾರವಾಗಿ ಬಿಟ್ಟಿದ್ದೆ ಈ ಘಟನೆಗೆ ಕಾರಣ ಎಂದು ಬಿಜೆಪಿಯ ಉನ್ನತ ಮೂಲಗಳು ಖಚಿತಪಡಿಸಿವೆ.

ಕುಗ್ಗಿದ ಬಿಜೆಪಿ ಸಂಖ್ಯಾಬಲ: ಕಾಂಗ್ರೆಸ್ ಸದಸ್ಯರೊಡನೆ ಇಬ್ಬರು ನಗರಸಭಾ ಸದಸ್ಯರು ತೆರಳಿರುವುದನ್ನು ಗಮನಿಸಿದರೆ 13 ಸಂಖ್ಯೆಗಿದ್ದ ಸಂಖ್ಯಾಬಲ ಕುಗ್ಗಿದಂತಾಗಿದೆ. ಈಗಾಗಲೇ ಅನೇಕಾನೇಕ ಕಾರಣಗಳಿಗಾಗಿ ಬಿಜೆಪಿ ಚಿಹ್ನೆಯಡಿ ಗೆಲುವು ಸಾಧಿಸಿದ್ದ ಜಿಪಿ ಶಿವಕುಮಾರ್, ಮಾನಸ ಪ್ರಭುಸ್ವಾಮಿ, ನಾಗೇಂದ್ರ, ಧರಣೀಶ್ ಸೇರಿದಂತೆ 4ಮಂದಿ ಪಕ್ಷದ ಸಭೆಗಳಿಂದ ದೂರ ಉಳಿದಿದ್ದು ಬಹುತೇಕ ಬಿಜೆಪಿ ಸದಸ್ಯರು ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ. ಹಾಗಾಗಿಯೇ ಇಂದು ನಾಗೇಂದ್ರ, ಧರಣೀಶ್ ಮಾತ್ರ ಪ್ರವಾಸ ತೆರಳಿದ್ದು ಇನ್ನಿಬ್ಬರು ಏಕೆ ತೆರಳಿಲ್ಲ ಎಂಬುದು ಚರ್ಚೆಯ ಕೇಂದ್ರ ಬಿಂದುವಾಗಿದೆ. ಸುಮೇರ ಬೇಂಗ ಪರವಾಗಿ ಪತ್ನಿ, ಮಾನಸ ಪರವಾಗಿ ಆಯ್ಕೆಯ ಪತಿ ಪ್ರಭುಸ್ವಾಮಿ ಪ್ರವಾಸದ ವೇಳೆ ಮೈಸೂರಿನಲ್ಲಿ ಸೇರಿಕೊಂಡರು ಎನ್ನಲಾಗಿದೆ.

ಕಾಂಗ್ರೆಸ್ ಸದಸ್ಯರ ಪ್ರವಾಸದಲ್ಲಿ

ಇಬ್ಬರು ಬಿಜೆಪಿ, 4 ಪಕ್ಷೇತರ ಸದಸ್ಯರು ಕೊಳ್ಳೇಗಾಲ ನಗರಸಭೆ ಅಧ್ಯಕ್ಷ ಗಾದಿಗಾಗಿ ಕಾಂಗ್ರೆಸ್ ಸದಸ್ಯರು ಕೈಗೊಂಡಿರುವ ಪ್ರವಾಸದಲ್ಲಿ 4 ಮಂದಿ ಪಕ್ಷೇತರರು, ಇಬ್ಬರು ಬಿಜೆಪಿ ಸದಸ್ಯರು ತೆರಳಿರುವ ಘಟನೆ ಜರುಗಿದೆ. ಸೋಮವಾರ ಮಧ್ಯಾಹ್ನ ಕಾಂಗ್ರೆಸ್ ಪಕ್ಷ ಚಿಹ್ನೆಯಡಿ ಆಯ್ಕೆಯಾದ ಜಿಎಂ ಸುರೇಶ್, ರೇಖಾ ರಮೇಶ್, ಸುಶೀಲ ಶಾಂತರಾಜು, ಪುಷ್ಪಲತಾ ಶಾಂತರಾಜು, ಭಾಗ್ಯಮ್ಮ, ಮಾಜಿ ಉಪಾಧ್ಯಕ್ಷ ಅಕ್ಮಲ್ ಪಾಶಾ ಸೇರಿದಂತೆ 10ಮಂದಿ ತೆರಳಿದ್ದಾರೆ. ಕಾಂಗ್ರೆಸ್‌ನ ಸುಮ ಸುಬ್ಬಣ್ಣ ಮತ್ತು ಮುಡಿಗುಂಡ ಮಹದೇವಮ್ಮ ಅವರು ಪ್ರವಾಸಕ್ಕೆ ತೆರಳಿಲ್ಲ, ಅದೇ ರೀತಿಯಲ್ಲಿ ಪಕ್ಷೇತರರರಾಗಿ ಆಯ್ಕೆಯಾದ ಮನೋಹರ್, ಎಪಿ ಶಂಕರ್, ಕವಿತಾ ರಾಜೇಶ್, ಶಂಕರ ನಾರಾಯಣ ಗುಪ್ತ ಪ್ರವಾಸದಲ್ಲಿ ಜೊತೆಗಿದ್ದಾರೆ. ಉಳಿದಂತೆ ಬಿಜೆಪಿ ಚಿಹ್ನೆಯಡಿ ಆಯ್ಕೆಯಾದ ನಾಗೇಂದ್ರ (ನಾಗ), ಧರಣೀಶ್ ಇಬ್ಬರು ಬಿಜೆಪಿ ಚಿಹ್ನೆಯಡಿ ಆಯ್ಕೆಯಾಗಿದ್ದು ಅವರು ಕಾಂಗ್ರೆಸ್ ಸದಸ್ಯರ ಪ್ರವಾಸದಲ್ಲಿ ಜೊತೆಗಿದ್ದಾರೆ. ಪ್ರವಾಸಕ್ಕೆ ತೆರಳಿದ ಸದಸ್ಯರಿಗೆ ಬ್ಲಾಕ್ ಅಧ್ಯಕ್ಷ ಆಲಹಳ್ಳಿ ತೋಟೇಶ್, ಕಾರ್ಯದರ್ಶಿ ಬಸ್ತಿಪುರ ರವಿ ಶುಭಕೋರಿದರು.