ಸಾರಾಂಶ
ದೈಹಿಕ ಮತ್ತು ಮಾನಸಿಕ ಮನೋಲ್ಲಾಸಕ್ಕೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಪ್ರೊ. ಎಂ. ಮುನಿರಾಜು ಹೇಳಿದರು.
ಬಳ್ಳಾರಿ:ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕ್ರೀಡಾ ವಿಭಾಗದ ವತಿಯಿಂದ ಆಯೋಜಿಸಿರುವ ಎರಡು ದಿನಗಳ ಅಂತರ್ ಮಹಾವಿದ್ಯಾಲಯ ಪುರುಷರ ಕಬಡ್ಡಿ ಪಂದ್ಯಾವಳಿಗಳಿಗೆ ವಿವಿ ಕುಲಪತಿ ಪ್ರೊ. ಎಂ. ಮುನಿರಾಜು ಮಂಗಳವಾರ ಚಾಲನೆ ನೀಡಿದರು.
ಇದೇ ವೇಳೆ ಮಾತನಾಡಿದ ಅವರು, ದೈಹಿಕ ಮತ್ತು ಮಾನಸಿಕ ಮನೋಲ್ಲಾಸಕ್ಕೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಆರೋಗ್ಯವೂ ವೃದ್ಧಿಸುತ್ತದೆ. ಕ್ರೀಡಾಪಟುಗಳಲ್ಲಿ ಸ್ಪರ್ಧಾ ಮನೋಭಾವ ಬೆಳೆಯುತ್ತದೆ ಎಂದು ಸಲಹೆ ನೀಡಿದರು.ಕುಲಸಚಿವ ಎಸ್.ಎನ್. ರುದ್ರೇಶ್ ಮಾತನಾಡಿ, ಕ್ರೀಡೆಗಳಿಂದ ಮಾನಸಿಕ ಒತ್ತಡ ನಿಭಾಯಿಸಬಹುದು. ಕ್ರೀಡೆ ಮತ್ತು ಸಂಸ್ಕೃತಿಯನ್ನು ಅನುಭವಿಸುವುದರ ಜೊತೆಗೆ ಆಸ್ವಾದಿಸಬೇಕು. ದೇಸಿ ಕಲೆಗಳಿಗೆ ಪ್ರೋತ್ಸಾಹಿಸುವುದು ನಮ್ಮೆಲ್ಲರ ಹೊಣೆ ಎಂದರು.ಕ್ರೀಡಾಂಗಣ ನಿರ್ಮಾಣ ಮತ್ತು ಕ್ರೀಡಾ ವಿಭಾಗಕ್ಕೆ ಪ್ರತ್ಯೇಕ ಕಟ್ಟಡಕ್ಕೆ ಈ ಬಾರಿಯ ಬಜೆಟ್‌ನಲ್ಲಿ ಹಣ ಮೀಸಲಿಡಲಾಗುವುದು ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಚಂದ್ರಶೇಖರಗೌಡ ಮಾತನಾಡಿ, ದೈಹಿಕ ಸದೃಢತೆ ಕಾಪಾಡಿಕೊಳ್ಳುವುದು ಪ್ರತಿ ಕ್ರೀಡಾಪಟುವಿನ ಮೊದಲ ಆದ್ಯತೆ ಆಗಬೇಕು. ಮುಂಬರುವ ಓಲಿಂಪಿಕ್ಸ್ ಕ್ರೀಡೆಗಳಲ್ಲಿ ಕಬಡ್ಡಿ ಮತ್ತು ಖೋ-ಖೋ ಕ್ರೀಡೆಗಳನ್ನು ಆರಂಭಿಸಲು ಸರ್ಕಾರಕ್ಕೆ ಮನವಿ ಪತ್ರ ನೀಡಲಾಗಿದೆ ಎಂದರು.ಕ್ರೀಡಾ ವಿಭಾಗದ ನಿರ್ದೇಶಕ ಡಾ. ಶಶಿಧರ್ ಕೆಲ್ಲೂರ್, ಸಹಾಯಕ ಪ್ರಾಧ್ಯಾಪಕ ಡಾ.ಸಂಪತ್ ಕುಮಾರ್ ಉಪಸ್ಥಿತರಿದ್ದರು.
ವಿಶ್ವವಿದ್ಯಾಲಯದ ಅಧೀನದ 15 ವಿವಿಧ ಮಹಾವಿದ್ಯಾಲಯಗಳ ದೈಹಿಕ ಶಿಕ್ಷಣ ಸಂಯೋಜಕರು, ಪ್ರಾಧ್ಯಾಪಕರು ಸೇರಿದಂತೆ 150ಕ್ಕೂ ಹೆಚ್ಚು ಸ್ಫರ್ಧಾಳುಗಳು ಹಾಜರಿದ್ದರು. ಇದೇ ಸಂದರ್ಭದಲ್ಲಿ ಕ್ರೀಡಾ ವಿಭಾಗದ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು, ವಿದ್ಯಾರ್ಥಿಗಳು ಇದ್ದರು.