ಸಾರಾಂಶ
ಜಿ. ಸೋಮಶೇಖರ
ಕೊಟ್ಟೂರು: ಜನರಿಂದ ಚುನಾಯಿತಗೊಂಡರೂ ಅಧಿಕಾರ ಚಲಾಯಿಸದೇ ಇರಬೇಕಾದ ನೋವನ್ನು ವ್ಯಕ್ತಪಡಿಸುತ್ತಿದ್ದ ಕೊಟ್ಟೂರು ಪಟ್ಟಣ ಪಂಚಾಯಿತಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಉಳಿದ 12 ತಿಂಗಳ ಅವಧಿಗೆ ಅಂತೂ-ಇಂತೂ ಚುನಾವಣೆ ನಡೆಸಲು ಸರ್ಕಾರ ಮೀಸಲು ನಿಗದಿಗೊಳಿಸಿ ಆದೇಶ ಹೊರಡಿಸಿದೆ.ಅಧ್ಯಕ್ಷ ಸ್ಥಾನ ಪರಿಶಿಷ್ಠ ಜಾತಿ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ. ಒಟ್ಟು 20 ಚುನಾಯಿತ ಸದಸ್ಯರ ಸ್ಥಾನ ಬಲ ಹೊಂದಿರುವ ಪಟ್ಟಣ ಪಂಚಾಯಿತಿ ಆಡಳಿತದಲ್ಲಿ ಇಬ್ಬರು ಪರಿಶಿಷ್ಠ ಜಾತಿ ಮಹಿಳೆಯರಿದ್ದು, ಒಬ್ಬರು ಕಾಂಗ್ರೆಸ್ ಸದಸ್ಯೆಯಾಗಿದ್ದರೆ ಮತ್ತೊಬ್ಬರು ಪಕ್ಷೇತರ ಅಭ್ಯರ್ಥಿಯಾಗಿದ್ದಾರೆ. ಈ ಇಬ್ಬರು ಅಭ್ಯರ್ಥಿಗಳು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿ ಉಳಿದ ಸದಸ್ಯರ ಬೆಂಬಲ ಪಡೆಯಲು ತೀವ್ರಬಗೆಯ ಪೈಪೋಟಿ ಸಾಗಿಸಿದ್ದಾರೆ.
ಪೈಪೋಟಿಎರಡನೇ ಅವಧಿಯ 30 ತಿಂಗಳ ಪೈಕಿ ಈಗಾಗಲೇ 17 ತಿಂಗಳು ಪೂರ್ಣಗೊಂಡಿದ್ದು, ಕಾಂಗ್ರೆಸ್‌ನ 5ನೇ ವಾರ್ಡಿನ ಸದಸ್ಯೆ ಕೆ.ಹನುಮವ್ವ ಮತ್ತು 20ನೇ ವಾರ್ಡಿನ ಬಿ. ರೇಖಾ ಪರಿಶಿಷ್ಠ ಜಾತಿ ಮಹಿಳೆಯರಾಗಿದ್ದಾರೆ. ಕಾಂಗ್ರೆಸ್ಸಿನ ಸದಸ್ಯರ ಸಂಖ್ಯೆ 10 ಇದ್ದು 8 ಸದಸ್ಯ ಸ್ಥಾನ ಹೊಂದಿರುವ ಬಿಜೆಪಿಯಲ್ಲಿ ಪರಿಶಿಷ್ಟ ಜಾತಿಯ ಮಹಿಳಾ ಸದಸ್ಯೆ ಇಲ್ಲದಿರುವುದಿಂದಾಗಿ ಸಹಜವಾಗಿ ಕಾಂಗ್ರೆಸ್ ಮತ್ತು ಪಕ್ಷೇತರ ಸದಸ್ಯರ ನಡುವೆ ಜಿದ್ದಾಜಿದ್ದಿ ಕಂಡುಬರುತ್ತಿದೆ. ಬಿಜೆಪಿ ಸದಸ್ಯರು ಈ ಪೈಕಿ ಯಾರನ್ನು ಬೆಂಬಲಿಸುತ್ತಾರೆ ಎಂಬುದು ಕುತೂಹಲಕರ ವಿಷಯವಾಗಿದೆ.
ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿನ ಸದಸ್ಯರು ತಮ್ಮನ್ನು ಈ ಸ್ಥಾನಕ್ಕೆ ಬೆಂಬಲಿಸುವಂತೆ ಪ್ರಭಾವಿ ಮುಖಂಡರನ್ನು ಸಂಪರ್ಕಿಸುತ್ತಿದ್ದಾರೆ. ಅಧಿಕಾರದ ಯೋಗ ಯಾರಿಗೆ ಒಲಿದು ಬರಲಿದೆಯೋ ಎಂದು ಪಟ್ಟಣದ ಜನತೆ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.ಹಿನ್ನೆಲೆ
ಈ ಹಿಂದೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 10, ಬಿಜೆಪಿ 8 ಮತ್ತು ಪಕ್ಷೇತ್ರರರು 2 ಸದಸ್ಯರಾಗಿ ಚುನಾಯಿತ ಗೊಂಡಿದ್ದರು. 30 ತಿಂಗಳ ಅವಧಿಯ ಮೀಸಲಾತಿಯಲ್ಲಿ ಅಧ್ಯಕ್ಷ ಸ್ಥಾನ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಎ) ಮೀಸಲಿತ್ತು. ಸೆಪ್ಟೆಂಬರ್ 2020ರಿಂದ 2023ರ ವರೆಗೆ ಇವರ ಅಧಿಕಾರಾವಧಿ ಇತ್ತು. ಎರಡನೇ ಅವಧಿಗೆ ಮೀಸಲು ಪ್ರಕಟವಾದಾಗ ಕೆಲವರು ಹೈಕೋಟ್‌ರ್ನಲ್ಲಿ ತಕರಾರು ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್ ನೀಡಿರುವ ಆದೇಶದ ಅನುಸಾರ ಸರ್ಕಾರ ಮೀಸಲು ಪ್ರಕಟಿಸಿದೆ.;Resize=(128,128))
;Resize=(128,128))