ಉಸ್ತುವಾರಿ ಸಚಿವರೆದುರೇ ಶಾಸಕರಿಬ್ಬರ ಕಿತ್ತಾಟ

| Published : Oct 17 2023, 12:30 AM IST

ಉಸ್ತುವಾರಿ ಸಚಿವರೆದುರೇ ಶಾಸಕರಿಬ್ಬರ ಕಿತ್ತಾಟ
Share this Article
  • FB
  • TW
  • Linkdin
  • Email

ಸಾರಾಂಶ

ಜನತಾ ದರ್ಶನ ಕಾರ್ಯಕ್ರಮದಲ್ಲಿ ಶಾಸಕರಾದ ಕೆ.ಎಂ.ಶಿವಲಿಂಗೇಗೌಡ ಹಾಗೂ ಬೇಲೂರು ಶಾಸಕ ಹುಲ್ಲಹಳ್ಳಿ ಸುರೇಶ್ ಪರಸ್ಪರ ಕಚ್ಚಾಡಿದ ಘಟನೆ ನಡೆಯಿತು.
ಕನ್ನಡಪ್ರಭ ವಾರ್ತೆ ಅರಸೀಕೆರೆ ನಗರದಲ್ಲಿ ಸೋಮವಾರ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಶಾಸಕರಾದ ಕೆ.ಎಂ.ಶಿವಲಿಂಗೇಗೌಡ ಹಾಗೂ ಬೇಲೂರು ಶಾಸಕ ಹುಲ್ಲಹಳ್ಳಿ ಸುರೇಶ್ ಪರಸ್ಪರ ಕಚ್ಚಾಡಿದ ಘಟನೆ ನಡೆಯಿತು. ನಗರದ ಹೊರವಲಯದ ಮೈಸೂರು ರಸ್ತೆಯಲ್ಲಿರುವ ಗಾಂಧಿ ಸ್ಮಾರಕ ಇರುವ ಕಸ್ತೂರ ಬಾ ಟ್ರಸ್ಟ್ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರ ಗ್ರಾಮಕ್ಕೆ ಒಂದು ಮದ್ಯದಂಗಡಿ ನೀಡುವ ವಿಚಾರವಾಗಿ ಶಾಸಕರು ಕಿತ್ತಾಡಿಕೊಂಡರು. ಇಬ್ಬರು ಜನಪ್ರತಿನಿಧಿಗಳ ಕಿತ್ತಾಟ ಕಂಡು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರು ಕಕ್ಕಾಬಿಕ್ಕಿಯಾದರು. ಸರ್ಕಾರದ ಜನಪರ ಐದು ಯೋಜನೆಗಳು ಸ್ವಾಗತಾರ್ಹ ಆದರೆ, ಗ್ರಾಮಕ್ಕೊಂದು ಮದ್ಯದ ಅಂಗಡಿ ನೀಡಿ ಮನೆ ಮನೆಗೆ ಮದ್ಯ ನೀಡುವ ಮೂಲಕ ಹೆಣ್ಣು ಮಕ್ಕಳ ತಾಳಿ ಕೀಳಲು ಹೊರಟಿದೆ. ಕರುಗುಂದ ಗ್ರಾಮದಲ್ಲಿ ಮದ್ಯದಂಗಡಿ ತೆರೆದು ಹೆಣ್ಣುಮಕ್ಕಳ ತಾಳಿ ಕಿತ್ತುಕೊಳ್ಳುತ್ತಿದ್ದಾರೆ ಎಂದು ಸುರೇಶ್ ಭಾಷಣ ಮಾಡಿದರು. ಇದಕ್ಕೆ ಉತ್ತರ ನೀಡಲು ಮುಂದಾದ ಶಿವಲಿಂಗೇಗೌಡ, ಅದಕ್ಕೆ ಲೈಸೆನ್ಸ್ ನೀಡಿದವರು ಬಿಜೆಪಿ ಸರ್ಕಾರದವರು. ಜನ ಸೇರಿಸುವವನು ನಾನು, ನೀನು ೧೫ ಜನ ಕರೆತಂದು ಸಭೆ ಹಾಳು ಮಾಡಲು ಬಂದಿದ್ದೀಯಾ ಎಂದು ಕಿಡಿಕಾರಿದರು. ಇದಕ್ಕೆ ಸಿಟ್ಟಾದ ಸುರೇಶ್, ಜಾವಗಲ್ ಹೋಬಳಿ ಈ ತಾಲೂಕಿಗೆ ಸೇರುತ್ತೆ, ನನಗೂ ಹಕ್ಕಿದೆ ಎಂದು ಆಕ್ರೋಶ ಹೊರಹಾಕಿದರು. ಮದ್ಯದಂಗಡಿ ತೆರೆದಿರುವವನು ಶಿವಲಿಂಗೇಗೌಡರ ಸ್ನೇಹಿತ ಎಂದು ಶಾಸಕ ಸುರೇಶ್ ಮೈಕಲ್ಲಿ ಹೇಳಿದರು. ಇದರಿಂದ ಕೆರಳಿದ ಶಿವಲಿಂಗೇಗೌಡ, ಓವರ್ ಆಗಿ ಆಡಬೇಡ. ನಮ್ಮ ಸರ್ಕಾರ ಬಂದು ಐದು ತಿಂಗಳು ಆಯ್ತು, ಒಂದು ಮದ್ಯದಂಗಡಿಗೂ ಅನುಮತಿ ನೀಡಿಲ್ಲ. ಕಳೆದ ಸರ್ಕಾರದಲ್ಲೇ ಮದ್ಯದಂಗಡಿ ತೆರೆದಿದ್ದಾರೆ ಎಂದರು. ಈ ವೇಳೆ ಕಾರ್ಯಕರ್ತರು ಶಾಸಕ ಕೆ ಎಂ ಶಿವಲಿಂಗೇಗೌಡರ ಪರ ಜೈಕಾರ ಕೂಗಿದರು. ಮತ್ತೊಂದೆಡೆ ಶಾಸಕ ಸುರೇಶ್ ಪರವೂ ಜೈಕಾರ ಮೊಳಗಿತು. ಮಧ್ಯ ಪ್ರವೇಶಿಸಿದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಾಸಕರನ್ನು ಸಮಾಧಾನಪಡಿಸಿದರು. ಶಿವಲಿಂಗೇಗೌಡರು ಶಕ್ತಿವಂತರಿದ್ದಾರೆ, ನಾಲ್ಕು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಅವರ ಕ್ಷೇತ್ರದಲ್ಲಿ ನೂರು ಕೋಟಿ ಕೆಲಸ ನಡೆಯುತ್ತಿದೆ ಎಂದು ಭಾಷಣ ಮಾಡಿದರು. ಅರಸೀಕೆರೆ ತಾಲೂಕಿಗೆ ನನ್ನ ಬೇಲೂರು ವಿಧಾನಸಭಾ ಕ್ಷೇತ್ರದ ಜಾವಗಲ್ ಹೋಬಳಿ ಸೇರುತ್ತೆ. ಜಾವಗಲ್ ಹೋಬಳಿಯಲ್ಲಿ ೧ ಕೋಟಿ ರು. ಕೆಲಸವೂ ನಡೆಯುತ್ತಿಲ್ಲ ಎಂದು ದೂರಿದರು. ಯಾಕೆ ಸ್ವಾಮಿ ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ, ನನಗೆ ನೂರು ಕೋಟಿ ಬೇಡ ೫೦ ಕೋಟಿ ಕೊಡಿ ಸ್ವಾಮಿ ಎಂದು ಸುರೇಶ್ ಕೇಳಿದರು. ಇದರಿಂದ ಮತ್ತಷ್ಟು ಸಿಟ್ಟಾದ ಶಿವಲಿಂಗೇಗೌಡ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. ಇದೆಲ್ಲವೂ ಸಚಿವ ಕೆ.ಎನ್.ರಾಜಣ್ಣ ಎದುರೇ ನಡೆಯಿತು. *ಬಾಕ್ಸ್ ನ್ಯೂಸ್: ಟಾಕ್ ಫೈಟ್‌ಗೆ ಕಾರಣ ಏನು? ಮೊದಲು ಭಾಷಣ ಮಾಡಿದ ಶಿವಲಿಂಗೇಗೌಡ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕೊಬ್ಬರಿಗೆ ಬೆಂಬಲ ಬೆಲೆ ನೀಡುವಲ್ಲಿ ಕೇಂದ್ರ ವಿಫಲವಾಗಿದೆ ಎಂದು ಟೀಕಿಸಿದರು. ನಂತರ ಮಾತನಾಡಿದ ಸುರೇಶ್, ಶಿವಲಿಂಗೇಗೌಡರ ಎಲ್ಲಾ ಆರೋಪಗಳಿಗೆ ಟಾಂಗ್ ನೀಡಿದರು. ರಾಜ್ಯ ಸರ್ಕಾರವೂ ಕೊಬ್ಬರಿಗೆ ೫ ಸಾವಿರ ಬೆಂಬಲ ಹಣ ನೀಡಲಿ ಎಂದು ಆಗ್ರಹಿಸಿದರು. ಇದಕ್ಕೆ ಮತ್ತೆ ಉತ್ತರ ಕೊಡಲು ಶಿವಲಿಂಗೇಗೌಡ ಮುಂದಾದಾಗ, ಮತ್ತೊಂದು ಮೈಕ್ ಹಿಡಿದು ಸುರೇಶ್ ಮಾತನಾಡಲು ಮುಂದಾದರು. ಆಗ ಇಬ್ಬರೂ ಒಂದೊಂದು ಮೈಕ್ ಹಿಡಿದು ಮಾತಿಗೆ ಮಾತು ನೀಡಲು ಮುಂದಾದರು. ಶಿವಲಿಂಗೇಗೌಡರು ಒಬ್ರೇ ಅಲ್ಲ ಶಾಸಕ, ನಾನೂ ಈ ತಾಲೂಕಿನ ಶಾಸಕ, ಜಾವಗಲ್ ನನಗೂ ಬರುತ್ತೆ ಎಂದರು. ಇದಕ್ಕೆ ಏಕವಚನದಲ್ಲಿ ಕೆಎಂಶಿ ವಾಗ್ದಾಳಿ ನಡೆಸಿದರು. ನಿಮ್ಮ ಸರ್ಕಾರದ ಅವಧಿಯಲ್ಲೇ ಹೆಚ್ಚು ಮದ್ಯದಂಗಡಿಗೆ ಮಂಜೂರಾತಿ ಕೊಟ್ಟಿದ್ದು ಎಂದು ಶಾಸಕರಾದ ಕೆ ಎಂ ಶಿವಲಿಂಗೇಗೌಡ ತಿರುಗೇಟು ನೀಡಿದರು.