ಇಲ್ಲಿನ ಲೋಕಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆಗೆ ಸಂಬಂಧಿಸಿದಂತೆ  ಎರಡು ನಾಮಪತ್ರಗಳು ಸಲ್ಲಿಕೆಯಾಗಿವೆ. ಭಾರತೀಯ ಜನತಾ ಪಾರ್ಟಿಯಿಂದ ರಾಜಾ ಅಮರೇಶ್ವರ ನಾಯಕ ಹಾಗೂ  ಕಾಂಗ್ರೆಸ್‌ ಪಕ್ಷದಿಂದ ಕೆ.ದೇವಣ್ಣ ನಾಯಕ  ಉಮೇದುವಾರಿಕೆ ಸಲ್ಲಿಸಿದರು

ರಾಯಚೂರು : ಇಲ್ಲಿನ ಲೋಕಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆಗೆ ಸಂಬಂಧಿಸಿದಂತೆ ಸೋಮವಾರ ಎರಡು ನಾಮಪತ್ರಗಳು ಸಲ್ಲಿಕೆಯಾಗಿವೆ. ಭಾರತೀಯ ಜನತಾ ಪಾರ್ಟಿಯಿಂದ ರಾಜಾ ಅಮರೇಶ್ವರ ನಾಯಕ ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದಿಂದ ಕೆ.ದೇವಣ್ಣ ನಾಯಕ ಅವರು ತಮ್ಮ ಉಮೇದುವಾರಿಕೆಗಳನ್ನು ಸಲ್ಲಿಸಿದರು.

ಸ್ಥಳೀಯ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಅಭ್ಯರ್ಥಿಗಳು ಡಿಸಿ ಹಾಗೂ ಚುನಾವಣಾಧಿಕಾರಿ ಎಲ್‌.ಚಂದ್ರಶೇಖರ ನಾಯಕಗೆ ನಾಮಪತ್ರಗಳನ್ನು ಸಲ್ಲಿಸಿದರು. ಹಾಲಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಅವರು ಬಿ ಫಾರಂ ಸಮೇತ ನಾಮಪತ್ರ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಅಮರೇಶ್ವರ ನಾಯಕ ಅವರು, ಸೋಮವಾರ ಮನೆ ದೇವರು ಗುರುಗುಂಟಾ ಅಮರೇಶ್ವರರ ವಾರವಾಗಿದೆ. ಹೀಗಾಗಿ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದೇನೆ. ಏ.18ರಂದು ಪಕ್ಷದ ಕಾರ್ಯಕರ್ತರು, ರಾಯಚೂರು ಯಾದಗಿರಿ ಜಿಲ್ಲೆಯ ಮುಖಂಡರು ಜತೆಗೆ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಾಗುವುದು. ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಅನೇಕ ನಾಯಕರನ್ನು ಭೇಟಿ ಮಾತನಾಡಿದ್ದು, ಮೊದಲ ಹಂತದ ಚುನಾವಣೆಯಲ್ಲಿ ಬ್ಯುಸಿಯಾಗಿದ್ದೇವೆ. ಖಂಡಿತ ಈ ಭಾಗಕ್ಕೆ ಬಂದು ಪ್ರಚಾರ ಮಾಡುವುದಾಗಿ ತಿಳಿಸಿದ್ದಾರೆ.

ಕೇಂದ್ರ ಸಚಿವ ನಾರಾಯಣ ಸ್ವಾಮಿ, ಕೆಆರ್‌ಪಿಪಿ ಪಕ್ಷದ ಗಾಲಿ ಜನಾರ್ದನ ರೆಡ್ಡಿ ನಾಮಪತ್ರ ಸಲ್ಲಿಕೆ ವೇಳೆ ಬರುವುದಾಗಿ ತಿಳಿಸಿದ್ದಾರೆ. ಏ.18ರಂದು ಬಿಜೆಪಿ, ಜೆಡಿಎಸ್‌ ನಾಯಕರು ಸೇರಿಕೊಂಡು ಬೃಹತ್ ರ್‍ಯಾಲಿ ಮೂಲಕ ನಾಮಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸೂಚಕ ಹಲ್ಲಪ್ಪ, ವಕೀಲ ರಾಘವೇಂದ್ರ ಚೂಡಾಮಣಿ, ಪುತ್ರ ರಾಜಾ ನಹುಷಾ ವರ್ಷ, ಸುಧೀರ್ ರಂಜನ್ ಕಸ್ಬೆ ಜತೆಗಿದ್ದರು.

ಬಿ ಫಾರಂ ಇಲ್ಲದೇ ನಾಮಪತ್ರ:

ಕಾಂಗ್ರೆಸ್‌ನಿಂದ ಅಧಿಕೃತವಾಗಿ ನಿವೃತ್ತ ಐಎಎಸ್‌ ಅಧಿಕಾರಿ ಜಿ.ಕುಮಾರ ನಾಯಕ ಅವರು ಅಭ್ಯರ್ಥಿ ಎಂದು ಘೋಷಣೆಯಾಗಿದ್ದರು ಸಹ ಪಕ್ಷದ ಮುಖಂಡ ಕೆ.ದೇವಣ್ಣ ನಾಯಕ ತಮ್ಮ ಉಮೇದುವಾರಿಕೆ ಸಲ್ಲಿಸಿದರು. ಪಕ್ಷದ ಬಿ ಫಾರಂ ಇಲ್ಲದೆಯೇ ನಾಮಪತ್ರ ಸಲ್ಲಿಸಿ ಗಮನ ಸೆಳೆದಿದ್ದು, ನಾಮಪತ್ರದ ಜೊತೆಗೆ ಅಫಿಡವಿಟ್‌ ಸಲ್ಲಿಸಿಲ್ಲ. ಈ ವೇಳೆ ಸಹಾಯಕ ಚುನಾವಣಾಧಿಕಾರಿ ಅಶೋಕ ದುಡಗುಂಟಿ, ಉಮೇದುದಾರರ ಸೂಚಕರು ಉಪಸ್ಥಿತರಿದ್ದರು.

ರಾಯಚೂರು ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಇಲ್ಲಿವರೆಗು ಒಟ್ಟು ಮೂರು ನಾಮಪತ್ರಗಳು ಮಾತ್ರ ಸಲ್ಲಿಕೆಯಾಗಿದ್ದು, ಏ.19 ರವರೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಜರುಗಲಿದೆ.