ತ್ಯಾಗವೀರ ಲಿಂಗರಾಜರ ಬದುಕು ಇಂದಿಗೂ ಅಮರ: ಡಾ.ಜಿ.ಜಿ. ಹಿರೇಮಠ

| Published : Jan 11 2025, 12:45 AM IST

ಸಾರಾಂಶ

ಸಮಾಜದ ಕಲ್ಯಾಣಕ್ಕೆ ಶಿಕ್ಷಣವೇ ಮೂಲವೆಂದು ತಿಳಿದ ಲಿಂಗರಾಜರು ತಮ್ಮ ಎಲ್ಲ ಸಂಪತ್ತನ್ನು ಶಿಕ್ಷಣಕ್ಕೆ ಮೀಸಲಾಗಿಟ್ಟಿದ್ದು, ಭಾರತದ ಚರಿತ್ರೆಯಲ್ಲಿಯೇ ಅಪರೂಪ. ಸಮಾಜದ ಸುಖವೇ ತನ್ನ ಸುಖವೆಂದು ಎಲ್ಲವನ್ನೂ ಧಾರೆ ಎರೆದ ಲಿಂಗರಾಜರು ಇಂದಿಗೂ ಅಮರರೆನಿಸಿದ್ದಾರೆ ಎಂದು ಪ್ರಾಧ್ಯಾಪಕ ಡಾ.ಜಿ.ಜಿ. ಹಿರೇಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಸಮಾಜದ ಕಲ್ಯಾಣಕ್ಕೆ ಶಿಕ್ಷಣವೇ ಮೂಲವೆಂದು ತಿಳಿದ ಲಿಂಗರಾಜರು ತಮ್ಮ ಎಲ್ಲ ಸಂಪತ್ತನ್ನು ಶಿಕ್ಷಣಕ್ಕೆ ಮೀಸಲಾಗಿಟ್ಟಿದ್ದು, ಭಾರತದ ಚರಿತ್ರೆಯಲ್ಲಿಯೇ ಅಪರೂಪ. ಸಮಾಜದ ಸುಖವೇ ತನ್ನ ಸುಖವೆಂದು ಎಲ್ಲವನ್ನೂ ಧಾರೆ ಎರೆದ ಲಿಂಗರಾಜರು ಇಂದಿಗೂ ಅಮರರೆನಿಸಿದ್ದಾರೆ ಎಂದು ಪ್ರಾಧ್ಯಾಪಕ ಡಾ.ಜಿ.ಜಿ. ಹಿರೇಮಠ ಹೇಳಿದರು.

ಲಿಂಗರಾಜ ಕಾಲೇಜಿನಲ್ಲಿ ಬೆಳಗಾವಿಯ ಕೆಎಲ್‌ಇ ಅಂಗಸಂಸ್ಥೆಯ ಆಶ್ರಯದಲ್ಲಿ ಶುಕ್ರವಾರ ಜರುಗಿದ ಸಿರಸಂಗಿ ಲಿಂಗರಾಜರ 164ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ವಾಮಿ ವಿವೇಕಾನಂದರು ಹಾಗೂ ಲಿಂಗರಾಜರು ಅಲ್ಪಾವಧಿಯಲ್ಲಿ ನಮ್ಮನ್ನಗಲಿದರೂ ಲೋಕದಲ್ಲಿ ಅಮರವಾಗಿ ಉಳಿಯುವಂತೆ ಕಾರ್ಯ ಮಾಡಿದರು. ಲಿಂಗರಾಜರು ಸಮಾಜದ ಉದಾತ್ತ ಉದ್ದೇಶಕ್ಕಾಗಿ ಮಹಾದಾನ ನೀಡಿ ಔದಾರ್ಯ ಮೆರೆದಿದ್ದಾರೆ. ಅವರ ಬದುಕು ಸುಖದ ಸುಪ್ಪತ್ತಿಗೆ ಆಗಿರಲಿಲ್ಲ. ಕೌಟುಂಬಿಕವಾಗಿ ಬವಣೆಗಳಿಂದ ನೊಂದುಕೊಂಡರು. ನೂರೆಂಟು ಕಷ್ಟ ಎದುರಿಸಿದರು. ಜೀವನದ ಕೊನೆಗೆ ತಮ್ಮ ಸಮಸ್ತ ಚಿರಾಸ್ಥಿಯನ್ನು ಸಮಾಜದ ಮಕ್ಕಳ ಕಲ್ಯಾಣಕ್ಕಾಗಿ ಸಮರ್ಪಿಸಿದರು. ಕೃಷಿ, ನೀರಾವರಿ ಮೊದಲ್ಗೊಂಡು ಹಲವಾರು ಮೌಲಿಕ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡರು. ಅಂತಹ ಪ್ರಾಥಃಸ್ಮರಣೀಯರು ಇಂದಿನ ಯುವ ಪೀಳಿಗೆಗೆ ಅನುಕರಣೀಯರು ಎಂದರು.

ಸಾನ್ನಿಧ್ಯ ವಹಿಸಿದ್ದ ಬೆಳಗಾವಿ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಮಾತನಾಡಿ, ಲಿಂಗರಾಜರಂತಹ ಪುಣ್ಯಾತ್ಮರನ್ನು ಸ್ಮರಿಸುವುದು ನಿಜಮುಕ್ತಿ ಇದ್ದಂತೆ. ಲಿಂಗರಾಜರು ತಮ್ಮ ಜನಮುಖಿಯಾದ ಸೇವೆಗಳಿಂದ ಅಮರತ್ವ ಪಡೆದರು. ಸಮಸ್ತ ನಾಡಿಗೆ ಅವರು ನೀಡಿದ ಕೊಡುಗೆ ಅನನ್ಯ, ಅನುಪಮ. ಅವರಂತಹ ದಾನಿಗಳು ಯುಗಯುಗ ಕಳೆದರೂ ಬರುವುದು ದುರ್ಲಭ. ಲಿಂಗರಾಜರು ದಾನ ಅಷ್ಟೇ ಅಲ್ಲದೆ ಬದುಕಿನುದ್ದಕ್ಕೂ ಅನೇಕ ಜನೋಪಯೋಗಿ ಕಾರ್ಯ ಮಾಡಿದರು. ಲಿಂಗರಾಜರ ತ್ಯಾಗದಲ್ಲಿ ಒಂದು ವೈಶಿಷ್ಟ್ಯವುಂಟು, ಅವರು ಸ್ವಾರ್ಥ ಮರೆತು ತಮ್ಮ ಇಡೀ ಆಸ್ತಿಯನ್ನು ಸಮಾಜದ ಶಿಕ್ಷಣಕ್ಕಾಗಿ ಧಾರೆಯೆರೆದರು. ಅಂತಹ ಮಹಾತ್ಮರನ್ನು ಇಂದಿನ ಯುವಪೀಳಿಗೆ ತಿಳಿದುಕೊಳ್ಳುವುದು ಅಗತ್ಯವಿದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಇ ಅಧ್ಯಕ್ಷ, ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಜನತೆಯ ಹಿತಕ್ಕಾಗಿ ಬದುಕಿದ ಮಹಾಚೇತನ ಸಿರಸಂಗಿ ಲಿಂಗರಾಜರು. ಸಮಾಜದ ಪ್ರತಿಯೊಬ್ಬರೂ ಸುಶಿಕ್ಷಿತರಾಗಬೇಕು, ಮುಂದೆ ಬರಬೇಕು, ಬದುಕಿನ ಕಷ್ಟಗಳನ್ನು ತೊಡೆದುಹಾಕಬೇಕೆಂಬ ಸಂಕಲ್ಪದೊಂದಿಗೆ ಶಿಕ್ಷಣ ರಂಗಕ್ಕೆ ಆರ್ಥಿಕ ಮತ್ತು ಜ್ಞಾನದ ಶಕ್ತಿ ತುಂಬಿದರು ಎಂದು ಹೇಳಿದರು.ಪ್ರಾಚಾರ್ಯ ಡಾ.ಎಚ್.ಎಸ್. ಮೇಲಿನಮನಿ ಮಾತನಾಡಿದರು. ಮಾಹೇಶ್ವರ ಅಂಧ ಮಕ್ಕಳ ಶಾಲೆ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಡಾ.ಬಸವರಾಜ ಜಗಜಂಪಿ, ಕೆಎಲ್‌ಇ ಆಜೀವ ಸದಸ್ಯರಾದ ಡಾ.ಪ್ರಕಾಶ ಕಡಕೋಳ, ಮಹಾದೇವ ಬಳಿಗಾರ, ಡಾ.ಸತೀಶ ಪಾಟೀಲ, ಪ್ರೊ.ಶೀತಲ್ ನಂಜಪ್ಪನವರ, ರಾಜೇಶ್ವರಿ ಸಂಬರಗಿಮಠ, ಮಹಾಂತಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಕೆಎಲ್‌ಇ ಉಪಾಧ್ಯಕ್ಷ ಬಸವರಾಜ ತಟವಟಿ ಸ್ವಾಗತಿಸಿದರು. ಡಾ.ಎಚ್.ಎಂ. ಚೆನ್ನಪ್ಪಗೋಳ ವಂದಿಸಿದರು. ಡಾ.ಮಹೇಶ ಗುರನಗೌಡರ ಹಾಗೂ ಪ್ರೊ.ಸಿದ್ಧನಗೌಡ ಪಾಟೀಲ ನಿರೂಪಿಸಿದರು.

ರಕ್ತದಾನ ಶಿಬಿರ: ಜಯಂತಿ ಉತ್ಸವದ ನಿಮಿತ್ತ ಡಾ.ಪ್ರಭಾಕರ ಕೋರೆ ರಕ್ತ ಭಂಡಾರ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. 60 ಯುನಿಟ್ ರಕ್ತವನ್ನು ದಾನಿಗಳಿಂದ ಸಂಗ್ರಹಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಪ್ರಾಥಮಿಕ, ಮಾಧ್ಯಮಿಕ, ಪದವಿಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳಿಗೆ ಪಾರಿತೋಷಕ ವಿತರಿಸಲಾಯಿತು.