ಸಾರಾಂಶ
ಗದಗ: ಹುಯಿಲಗೋಳ ನಾರಾಯಣರ ಉದಯವಾಗಲಿ ಚೆಲುವ ಕನ್ನಡ ನಾಡು ಗೀತೆಯು ಕರ್ನಾಟಕ ಏಕೀಕರಣಕ್ಕೆ ಸ್ಪೂರ್ತಿ ಗೀತೆಯಾಗಿತ್ತು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ಐತಿಹಾಸಿಕ ವೀರನಾರಾಯಣ ದೇವಸ್ಥಾನದಲ್ಲಿ ಭಾನುವಾರ ರಾತ್ರಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಲಾಗಿದ್ದ ಕರ್ನಾಟಕ ಸಂಭ್ರಮ ಸಮಾರೋಪ ನಿಮಿತ್ತ ಸಂಗೀತ ಕಚೇರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಬೆಳಗಾವಿಯಲ್ಲಿ 1924 ಡಿ. 26 ರಂದು ಮಹಾತ್ಮ ಗಾಂಧೀಜಿಯವರು ಎಐಸಿಸಿ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಗಂಗೂಬಾಯಿ ಹಾನಗಲ್ ಉದಯವಾಗಲಿ ಚೆಲುವ ಕನ್ನಡ ನಾಡು ಗೀತೆ ಹಾಡಿದ್ದರು ಎಂಬುದು ನಮ್ಮೆಲ್ಲರಿಗೂ ಅಭಿಮಾನ, ಹೆಮ್ಮೆ ಸಂಕೇತವಾಗಿದೆ.
ಗದುಗಿನ ಇತಿಹಾಸದಲ್ಲಿ ಕರ್ನಾಟಕ ಸಂಭ್ರಮ 50 ಐತಿಹಾಸಿಕ ಮೈಲಿಗಲ್ಲು. ಕನ್ನಡ ಭಾಷೆಯನ್ನಾಡುವ ಕನ್ನಡಿಗರು ಒಂದೇ ರಾಜ್ಯದ ಆಳ್ವಿಕೆಯಲ್ಲಿ ಒಂದಾಗಬೇಕು ಎನ್ನುವ ಆಶಯದಂತೆ ನ 1, 1956 ರಂದು ಕರ್ನಾಟಕ ಏಕೀಕರಣವಾಯಿತು. ಗದುಗಿನ ಕಾಟನ್ ಸೇಲ್ ಸೊಸೈಟಿಯಲ್ಲಿ 27, 28 ಮತ್ತು 29ರ ಡಿ.1961 ರಲ್ಲಿ ಜರುಗಿದ 43ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಕೆ.ಜಿ. ಕುಂದಣಗಾರ ಮತ್ತು ಸ್ವಾಗತ ಸಮಿತಿಯ ಅಧ್ಯಕ್ಷ ಕೆ.ಎಚ್. ಪಾಟೀಲ ಆಶಯದಂತೆ ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯವೆಂದು ನಾಮಕರಣವಾಗಲಿ ಎಂದು ಸಮ್ಮೇಳನದಲ್ಲಿ ನಿರ್ಣಯ ಕೈಗೊಳ್ಳಲಾಯಿತು. ನಂತರ ಹೋರಾಟದ ಫಲವಾಗಿ 1973 ನ.1 ರಂದು ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣವಾಯಿತು.ಕರ್ನಾಟಕ ನಾಮಕರಣ ಸಂಭ್ರಮಾಚರಣೆಯನ್ನು ಗದುಗಿನಲ್ಲಿ 1973ರ ನ. 3 ರಂದು ಹಂಪೆಯ ವಿರುಪಾಕ್ಷೇಶ್ವರ ದೇವಾಲಯದಲ್ಲಿ ಪ್ರಜ್ವಲಿಸಿದ ಕನ್ನಡ ಜ್ಯೋತಿಯನ್ನು ಗದುಗಿನ ವೀರನಾರಾಯಣ ದೇವಸ್ಥಾನದಲ್ಲಿ ಸ್ವೀಕರಿಸಿದ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು, ಮೈಸೂರಿನ ಅರಸ ಜಯ ಚಾಮರಾಜೇಂದ್ರ ಒಡೆಯರ ಹಾಗೂ ಅರಣ್ಯ ಮತ್ತು ಕೃಷಿ ಸಚಿವ ಕೆ.ಎಚ್. ಪಾಟೀಲ, ಪೌರಾಡಳಿತ ಸಚಿವ ಡಿ.ಕೆ. ನಾಯ್ಕರ, ಕನ್ನಡ ಮತ್ತು ಸಂಸ್ಕೃತಿ ಸಚಿವ ದೇವೇಂದ್ರಪ್ಪ ಗಾಳಪ್ಪ ಹಾಗೂ ಕನ್ನಡಾಭಿಮಾನಿಗಳು ವೀರನಾರಾಯಣ ದೇವಸ್ಥಾನದಿಂದ ಕಾಟನ್ ಸೇಲ್ ಸೊಸೈಟಿಯವರೆಗೆ ಮೆರವಣಿಗೆ ಮೂಲಕ ಬಂದು ಸಾರ್ವಜನಿಕ ಸಭೆ ನಡೆಸಿ ಕರ್ನಾಟಕ ನಾಮಕರಣ ಮಹೋತ್ಸವವನ್ನು ಸಂಭ್ರಮಿಸಿದ್ದು ಇತಿಹಾಸದಲ್ಲಿ ದಾಖಲಾರ್ಹ.
1973 ನ.1, 2 ಮತ್ತು 3 ರಂದು ಜರುಗಿದ ಕರ್ನಾಟಕ ನಾಮಕರಣ ಮಹೋತ್ಸವವನ್ನು ಮರುಸೃಷ್ಟಿಸಿ, 2023ರ ನ.1, 2 ಮತ್ತು 3 ರಂದು ಮೂರು ದಿನಗಳ ಕಾಲ ಗದಗನಲ್ಲಿ ಗತವೈಭವ ಮರುಕಳಿಸುವ ಐತಿಹಾಸಿಕ ಕಾರ್ಯಕ್ರಮಕ್ಕೆ ತಾವೆಲ್ಲ ಸಾಕ್ಷಿಯಾಗಿದ್ದು, ಸಿಎಂ ಸಿದ್ದರಾಮಯ್ಯನವರು ಸೇರಿದಂತೆ ಸಚಿವ ಸಂಪುಟದ 20ಕ್ಕೂ ಹೆಚ್ಚು ಸಚಿವರು ಕನ್ನಡಾಭಿಮಾನಿಗಳು ಕರ್ನಾಟಕ ಸಂಭ್ರಮ 50ರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಾಮಕರಣ ಮಹೋತ್ಸವದ ಇತಿಹಾಸ ಮೆಲುಕು ಹಾಕಿದರು. ಇಂದು ಕರ್ನಾಟಕ ಸಂಭ್ರಮ 50 ಒಂದು ವರ್ಷದ ಸಂಭ್ರಮಾಚರಣೆಯ ಸಮಾರೋಪ ಸಮಾರಂಭವಾಗಿದ್ದು, ಕನ್ನಡ ನಾಡು-ನುಡಿಯ ಅಭಿಮಾನ ಬೆಳೆಸಲು ಕರ್ನಾಟಕ ರಾಜ್ಯೋತ್ಸವದ ಈ ಸಂದರ್ಭ ಔಚಿತ್ಯಪೂರ್ಣವಾಗಿದೆ ಎಂದರು.ಲಕ್ಕುಂಡಿಯಲ್ಲಿನ 20 ದೇವಸ್ಥಾನಗಳನ್ನು ಸರ್ಕಾರ ಗುರುತಿಸಿ ಸಂರಕ್ಷಣೆಗೆ ಮುಂದಾಗಲಿದೆ ಈ ಮೂಲಕ ನಮ್ಮ ಐತಿಹಾಸಿಕ ಸ್ಮಾರಕಗಳು ಹಾಗೂ ಪರಂಪರೆಯನ್ನು ಯುವ ಜನತೆಗೆ ಪರಿಯಚಿಸುವ, ತಿಳಿಸಿಕೊಡುವ ಪ್ರಯತ್ನಸಾಗಿದೆ ಎಂದರು.
ಖ್ಯಾತ ಗಾಯಕಿ ಉಷಾ ಕಾರಂತ, ನಾಗರಾಜ್ ಹಿರೇಕೊಳಚಿ ಹಾಗೂ ಸಂಗಮೇಶ ಕಲಬುರ್ಗಿ ಸಂಗೀತ ಕಾರ್ಯಕ್ರಮ ಗಮನ ಸೆಳೆಯಿತು.ಈ ಸಂದರ್ಭದಲ್ಲಿ ವಿಪ ಸಭಾಧ್ಯಕ್ಷ ಬಸವರಾಜ ಹೊರಟ್ಟಿ, ಸರ್ಕಾರಿ ಮುಖ್ಯ ಸಚೇತಕ ಹಾಗೂ ಶಾಸಕ ಸಲೀಂ ಅಮ್ಮದ್, ಮಾಜಿ ಸಂಸದ ಐಜಿ ಸನದಿ, ಮಾಜಿ ಶಾಸಕ ಡಿ.ಆರ್. ಪಾಟೀಲ, ಗುರಣ್ಣ ಬಳಗಾನೂರ, ಎಂ.ಸಿ. ಶೇಖ, ರವಿ ಮೂಲಿಮನಿ, ವೀರನಾರಾಯಣ ತ್ರಿಕೋಟೇಶ್ವರ ದೇವಸ್ಥಾನ ಹಾಗೂ ಜುಮ್ಮಾಮಸಿದಿ ಸಮಿತಿಯ ಅಧ್ಯಕ್ಷ ಕೆ.ಡಿ. ಗೋಡಕಿಂಡಿ, ಕಾರ್ಯದರ್ಶಿ ಆನಂದ್ ಪೋತ್ನಿಸ್, ಅಶೋಕ ಮಂದಾಲಿ, ಸಿದ್ದು ಪಾಟೀಲ, ಸುಜಾತ ದೊಡ್ಮನಿ, ಎಸ್ಪಿ ಬಿ. ಎಸ್.ನೇಮಗೌಡ, ಪುರಾತತ್ವ ಇಲಾಖೆ ಆಯುಕ್ತ ದೇವರಾಜ್ ಸೇರಿದಂತೆ ಇತರೆ ಅಧಿಕಾರಿಗಳು ಸಿಬ್ಬಂದಿಗಳು ಉಪಸ್ಥಿತರಿದ್ದರು.