ಉಡುಪಿ: ಶೇ.80.72 ಶಿಕ್ಷಕರಿಂದ, ಶೇ.75.38 ಪದವೀಧರರಿಂದ ಮತದಾನ

| Published : Jun 04 2024, 12:30 AM IST

ಸಾರಾಂಶ

ಜಿಲ್ಲೆಯಲ್ಲಿ ಪದವೀಧರ ಕ್ಷೇತ್ರಕ್ಕೆ 19 ಮತಗಟ್ಟೆಗಳನ್ನು ಮತ್ತು ಶಿಕ್ಷಕರ ಕ್ಷೇತ್ರಕ್ಕೆ 10 ಮತಗಟ್ಟೆಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಮತದಾರರ ಸಂಖ್ಯೆ ಹೆಚ್ಚಿಲ್ಲದಿರುವುದರಿಂದ ನಿಧಾನಗತಿಯಲ್ಲಿ ಆರಾಮವಾಗಿ ದಿನವಿಡೀ ಮತದಾನ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿವಿಧಾನ ಪರಿಷತ್ತಿನ ನೈರುತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಸೋಮವಾರ ನಡೆದ ಚುನಾವಣೆಗೆ ಉಡುಪಿ ಜಿಲ್ಲೆಯಲ್ಲಿ ಶಾಂತಿಯುತವಾಗಿ ಮತದಾನ ನಡೆಯಿತು. ಪದವೀಧರ ಕ್ಷೇತ್ರಕ್ಕೆ ಶೇ.74.17 ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಶೇ.80.75 ಮತದಾನವಾಗಿದೆ.

ಜಿಲ್ಲೆಯಲ್ಲಿ ಪದವೀಧರ ಕ್ಷೇತ್ರಕ್ಕೆ 7858 ಪುರುಷ ಮತ್ತು 9176 ಮಹಿಳಾ ಮತದರಾರು ಸೇರಿ ಒಟ್ಟು 17033 ಮಂದಿ ಮತದಾರರಿದ್ದಾರೆ. ಅವರಲ್ಲಿ 6220 (ಶೇ.79.17) ಪುರುಷ ಮತ್ತು 6619 (ಶೇ.72.13) ಮಹಿಳಾ ಮತದಾರರು ಸೇರಿ ಒಟ್ಟು 12633 (ಶೇ.75.38) ಮಂದಿ ಮತದಾನ ಮಾಡಿದ್ದಾರೆ.

ಶಿಕ್ಷಕರ ಕ್ಷೇತ್ರಕ್ಕೆ 1717 ಪುರುಷ ಮತ್ತು 2350 ಮಹಿಳಾ ಮತದಾರರಿದ್ದಾರೆ. ಅವರಲ್ಲಿ 1475 (ಶೇ.85.91) ಪುರುಷ ಮತ್ತು 1808 (ಶೇ.76.94) ಮಹಿಳಾ ಮತದಾರರು ಸೇರಿ ಒಟ್ಟು 3284 (ಶೇ.80.72) ಮಂದಿ ಮತದಾರರು ಮತದಾನದಲ್ಲಿ ಭಾಗವಹಿಸಿದ್ದರು.

ಜಿಲ್ಲೆಯಲ್ಲಿ ಪದವೀಧರ ಕ್ಷೇತ್ರಕ್ಕೆ 19 ಮತಗಟ್ಟೆಗಳನ್ನು ಮತ್ತು ಶಿಕ್ಷಕರ ಕ್ಷೇತ್ರಕ್ಕೆ 10 ಮತಗಟ್ಟೆಗಳನ್ನು ವ್ಯವಸ್ಥೆ ಮಾಡಲಾಗಿತ್ತು. ಮತದಾರರ ಸಂಖ್ಯೆ ಹೆಚ್ಚಿಲ್ಲದಿರುವುದರಿಂದ ನಿಧಾನಗತಿಯಲ್ಲಿ ಆರಾಮವಾಗಿ ದಿನವಿಡೀ ಮತದಾನ ನಡೆಯಿತು.

ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ಕಾರ್ಯಕರ್ತರು ಕಾರಿನಲ್ಲಿ ಮತದಾರರನ್ನು ಅವರ ಮನೆಯಿಂದಲೇ ಕರೆತಂದು ಮತದಾನದ ನಂತರ ಹಿಂದಕ್ಕೆ ಬಿಡುವ ವ್ಯವಸ್ಥೆಯನ್ನೂ ಮಾಡಿದ್ದರು.

* ಕಾಪುನಲ್ಲಿ ಮಾತಿನ ಚಕಮಕಿಕಾಪು ವಿಧಾನಸಭಾ ಕ್ಷೇತ್ರದ ಕಾಪು ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮತದಾರರನ್ನು ಒಲಿಸುವ ಭರದಲ್ಲಿ ಮಾತಿನ ಚಕಮಕಿಯ ಘಟನೆ ನಡೆಯಿತು.ತಮ್ಮ ಅಭ್ಯರ್ಥಿಗೆ ಮತ ಹಾಕುವಂತೆ ಕಾರ್ಯಕರ್ತರು ಮತಗಟ್ಟೆಗೆ ಬರುವ ಮತದಾರರ ಗಮನ ಸೆಳೆದು ಒತ್ತಡ ಹೇರುವ ಪ್ರಯತ್ನ ನಡೆಸುತ್ತಿದರು. ಈ ಸಂದರ್ಭದಲ್ಲಿ ಕಾರ್ಯಕರ್ತರ ನಡುವೆ ಮಾತು ಬೆಳದು ಪರಸ್ಪರ ದೋಷಾರೋಪಕ್ಕೆ ಕಾರಣವಾಯಿತು. ಇದರಿಂದ ಸ್ವಲ್ಪ ಗೊಂದಲದ ವಾತಾವರಣವೂ ಸೃಷ್ಟಿಯಾಯಿತು. ತಕ್ಷಣ ಮಧ್ಯ ಪ್ರವೇಶಿದ ಪೊಲೀಸರು ಎರಡೂ ಪಕ್ಷಗಳ ಕಾರ್ಯಕರ್ತರನ್ನು ಸ್ಥಳದಿಂದ ದೂರ ಕಳುಹಿಸಿದರು.