ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಕೇವಲ ಅವರ ಕುಟುಂಬಕ್ಕೆ ಅಥವಾ ಊರಿಗೆ ಕೀರ್ತಿ ತಂದಿಲ್ಲ. ಬದಲಿಗೆ ಅವರು ಮುಂದೆ ಈ ದೇಶದ ದೊಡ್ಡ ಸಂಪತ್ತಾಗಲಿದ್ದಾರೆ, ಆದ್ದರಿಂದ ಅವರನ್ನು ಪ್ರೋತ್ಸಾಹಿಸಬೇಕು ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ. ಜಿ. ಆರ್. ಸಿಂಧ್ಯಾ ಹೇಳಿದರು.
ಉಡುಪಿ: ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳು ಕೇವಲ ಅವರ ಕುಟುಂಬಕ್ಕೆ ಅಥವಾ ಊರಿಗೆ ಕೀರ್ತಿ ತಂದಿಲ್ಲ. ಬದಲಿಗೆ ಅವರು ಮುಂದೆ ಈ ದೇಶದ ದೊಡ್ಡ ಸಂಪತ್ತಾಗಲಿದ್ದಾರೆ, ಆದ್ದರಿಂದ ಅವರನ್ನು ಪ್ರೋತ್ಸಾಹಿಸಬೇಕು ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ. ಜಿ. ಆರ್. ಸಿಂಧ್ಯಾ ಹೇಳಿದರು.
ಅವರು ಶುಕ್ರವಾರ ಕೃಷ್ಣಮಠದ ರಾಜಾಂಗಣದಲ್ಲಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆಯ ವತಿಯಿಂದ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ. 90 ಕ್ಕಿಂತ ಹೆಚ್ಚು ಅಂಕಗಳಿಸಿದ ರಾಜ್ಯದ 1200 ಸ್ಕೌಟ್ಸ್, ಗೈಡ್ಸ್, ರೋವರ್ಸ್ ಮತ್ತು ರೇಂರ್ಜಸ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.8 ರಿಂದ 13 ವರ್ಷದೊಳಗಿನ ಮಕ್ಕಳು ಒಂದು ತಿಂಗಳ ಕಾಲ ಮೊಬೈಲ್, ಟಿವಿ ದೂರವಿಟ್ಟು, ಯೋಗಾಭ್ಯಾಸದಲ್ಲಿ ತೊಡಗಿಸಿಕೊಂಡರೆ ಅವರ ಮೆದುಳು ಸೂಪರ್ ಕಂಪ್ಯೂಟರ್ನಂತೆ ಕೆಲಸ ಮಾಡುತ್ತದೆ. ಸ್ಕೌಟ್ಸ್ ಮತ್ತು ಗೈಡ್ಸ್ ಕೇವಲ ಶಿಕ್ಷಣಕ್ಕೆ ಸೀಮಿತವಾಗಿರದೆ ಪರಿಸರ ಜ್ಞಾನ, ಸ್ವಚ್ಛತೆ, ಪ್ರಾಣಿ-ಸಸ್ಯಗಳ ಸಂರಕ್ಷಣೆ, ಮಣ್ಣು ಮತ್ತು ನೀರಿನ ಉಳಿತಾಯದಂತಹ ಜೀವನ ಮೌಲ್ಯಗಳನ್ನು ಕಲಿಸುತ್ತದೆ ಎಂದರು.ಕಾಲೇಜು ವಿಭಾಗದ ವಿದ್ಯಾರ್ಥಿಗಳು ರಾಷ್ಟ್ರಪತಿ ಪರೀಕ್ಷೆ ಉತ್ತೀರ್ಣರಾದರೆ ಎಂಬಿಬಿಎಸ್, ಎಂಜಿನಿಯರಿಂಗ್, ಐಎಎಸ್ನಲ್ಲಿ ಮಾತ್ರವಲ್ಲದೆ ರೈಲ್ವೆ ಇಲಾಖೆ, ಪೊಲೀಸ್ ಮತ್ತು ರಕ್ಷಣಾ ಇಲಾಖೆಗಳ ಉದ್ಯೋಗಗಳಲ್ಲಿ ವಿಶೇಷ ಮೀಸಲಾತಿ ಹಾಗೂ ಆದ್ಯತೆ ದೊರೆಯಲಿದೆ ಎಂದು ತಿಳಿಸಿದರು.ಪರ್ಯಾಯ ಶಿರೂರು ಮಠಾಧೀಶ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಇದೇ ಸಂದರ್ಭದಲ್ಲಿ ಕಬ್, ಬುಲ್ ಬುಲ್ ಮಕ್ಕಳ ‘ಗೋಲ್ಡನ್ ಆರೋ’ ಪ್ರಶಸ್ತಿ ಹಾಗೂ ‘ರಾಷ್ಟ್ರಪತಿ ಪ್ರಮಾಣ ಪತ್ರ’ ವಿತರಿಸಲಾಯಿತು.ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಯಶ್ಪಾಲ್ ಸುವರ್ಣ, ಡಿಡಿಪಿಯು ಮಾರುತಿ, ಜಿಲ್ಲಾ ಮುಖ್ಯ ಆಯುಕ್ತ ಇಂದ್ರಾಳಿ ಜಯಕರ್ ಶೆಟ್ಟಿ , ಜಿಲ್ಲಾ ಗೈಡ್ ಆಯುಕ್ತೆ ಜ್ಯೋತಿ ಪೈ, ಕಾರ್ಯದರ್ಶಿ ಆನಂದ ಅಡಿಗ, ಕೋಶಾಧಿಕಾರಿ ಹರಿಪ್ರಸಾದ್ ರೈ, ಲಯನ್ಸ್ ಸಂಸ್ಥೆಯ ಎಂ. ಎನ್. ಹೆಗ್ಡೆ, ಸ್ಥಳೀಯ ಸಂಸ್ಥೆಯ ಪ್ರತಿನಿಧಿಗಳಾದ ಗುಣರತ್ನ, ದಿವಾಕರ ಸನಿಲ್, ಮಹಮ್ಮದ್ ಮೌಲಾ, ಎಎಸ್ಒ ಸುಮನಾ ಶೇಖರ್ ಉಪಸ್ಥಿತರಿದ್ದರು.