ಉಡುಪಿ: ಕೊರಗ ಸಮುದಾಯದ ಪ್ರತಿಭಟನೆ

| Published : Jul 29 2024, 12:46 AM IST

ಸಾರಾಂಶ

ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟವು ಇಲ್ಲಿನ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಸತ್ಯಾಗ್ರಹವನ್ನು ನಡೆಸುತ್ತಿದೆ.

ಕನ್ನಡಪ್ರಭ ವಾರ್ತೆ ಮಣಿಪಾಲ

ತಮ್ಮ ಜನಾಂಗದ ಯುವಕರಿಗೆ ಸರ್ಕಾರಿ ಇಲಾಖೆಗಳ ಉದ್ಯೋಗದಲ್ಲಿ ನೇರ ನೇಮಕಾತಿ ಮಾಡಬೇಕು ಮತ್ತು ತಮಗೆ ಕೃಷಿಭೂಮಿಯನ್ನು ನೀಡಬೇಕು ಎಂಬ ಬೇಡಿಕೆಯೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟವು ಇಲ್ಲಿನ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಸತ್ಯಾಗ್ರಹವನ್ನು ನಡೆಸುತ್ತಿದೆ.

ಶನಿವಾರ ಆರನೇ ದಿನಕ್ಕೆ ಕಾಲಿಟ್ಟ ಈ ಧರಣಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸದಸ್ಯರು ಭಾಗವಹಿಸಿ ಬೆಂಬಲ ಸೂಚಿಸಿದರು. ಪ್ರತಿಭಟನೆ ಆರಂಭವಾಗಿ 6 ದಿನಗಳಾದರೂ ಸರ್ಕಾರದಿಂದ ಯಾವುದೇ ಸ್ಪಂದನೆ ಇಲ್ಲದಿರುವ ಬಗ್ಗೆ ತೀವ್ರ ಅಸನಮಾಧಾನ ವ್ಯಕ್ತಪಡಿಸಿದ ದಸಂಸ, ಕೊರಗ ಸಮುದಾಯದ ಈ ನ್ಯಾಯಯುತ ಬೇಡಿಕೆಗಳನ್ನು ತಕ್ಷಣ ಈಡೇರಿಸಬೇಕು, ಇಲ್ಲದಿದ್ದಲ್ಲಿ ರಾಜ್ಯ ಮಟ್ಟದಲ್ಲಿ ಪ್ರತಿಭಟನೆ ಸಂಘಟಿಸುವುದಾಗಿ ಎಚ್ಚರಿಕೆ ನೀಡಿದೆ.

ಪ್ರತಿಭಟನೆಯ ನೇತೃತ್ವವನ್ನು ಒಕ್ಕೂಟದ ಪ್ರಮುಖರಾದ ಸುಶೀಲಾ ನಾಡ, ದಿವಾಕರ ಕಳ್ತೂರು, ಕುಮಾರ್‌ದಾಸ್ ವಹಿಸಿದ್ದಾರೆ. ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ಟರ್, ನಾಯಕರಾದ ಮಂಜುನಾಥ್ ಗಿಳಿಯಾರು, ಶ್ಯಾಮರಾಜ್ ಬಿರ್ತಿ, ಶ್ಯಾಮಸುಂದರ್ ತೆಕ್ಕಟ್ಟೆ, ಮಂಜುನಾಥ್ ಬಾಳ್ಕುದ್ರು, ಶಂಕರ್‌ದಾಸ್ ಚೇಂಡ್ಕಳ ಭಾಗವಹಿಸಿದ್ದರು.

ಪ್ರತಿಭಟನಾನಿರತರು ಭಾರಿ ಮಳೆಯಲ್ಲಿಯೂ ಅಲ್ಲಿಯೇ ಉಳಿದುಕೊಂಡು, ಆಡುಗೆ- ಊಟ ಮಾಡಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಮಹಿಳೆಯರು ತಮ್ಮ ಕುಲಕಸುಬಾದ ಬುಟ್ಟಿ ಹೆಣದರೆ, ಯುವಕರು ಡೋಲು ಭಾರಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ...............

ಶಾಸಕ ಯಶ್ಪಾಲ್ ಭೇಟಿ, ಸಿಎಂಗೆ ಆಗ್ರಹದ ಭರವಸೆ

ಕೊರಗ ಸಮುದಾಯದ ಈ ಬೇಡಿಕೆಗಳ ಬಗ್ಗೆ ಸ್ವೀಕರ್ ಯು.ಟಿ.ಖಾದರ್ ಅವರಿಗೆ ಮನವಿ ಸಲ್ಲಿಸಿದ್ದ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಶನಿವಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಪ್ರತಿಭಟನಾ ನಿರತರ ಜೊತೆ ಮಾತುಕತೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಯಶ್ಪಾಲ್ ಸುವರ್ಣ, ಕೊರಗ ಸಮುದಾಯದ ಬೇಡಿಕೆಗಳು ನ್ಯಾಯ ಸಮ್ಮತವಾಗಿದ್ದು, ಬೇಡಿಕೆಗಳ ಈಡೇರಿಕೆ ಶಾಸಕನಾಗಿ ನನ್ನ ಕರ್ತವ್ಯವಾಗಿದೆ. ಈ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ, ಶೀಘ್ರದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಎಲ್ಲ ಶಾಸಕರು ಜೊತೆಗೂಡಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸಮುದಾಯದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸುವುದಾಗಿ ಭರವಸೆ ನೀಡಿದರು.