ಸಾರಾಂಶ
ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಪರ್ಯಾಯ ಪೀಠಾರೋಹಣದ ಸಂದರ್ಭದಲ್ಲಿ ಕೃಷ್ಣನಿಗೆ ಸುವರ್ಣ ಪಾರ್ಥಸಾರಥಿ ರಥವನ್ನು ಸಮರ್ಪಿಸುವುದಾಗಿ ಸಂಕಲ್ಪ ಕೈಗೊಂಡಿದ್ದರು. ಅದರಂತೆ ರಥ ನಿರ್ಮಾಣಕ್ಕೆ ಪೂರ್ವಭಾವಿಯಾಗಿ ಬುಧವಾರ ಕೃಷ್ಣನಿಗೆ ಚಿನ್ನದಲ್ಲಿ ತುಲಾಭಾರ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಪರ್ಯಾಯ ಪೀಠಾರೋಹಣದ ಸಂದರ್ಭದಲ್ಲಿ ಕೃಷ್ಣನಿಗೆ ಸುವರ್ಣ ಪಾರ್ಥಸಾರಥಿ ರಥವನ್ನು ಸಮರ್ಪಿಸುವುದಾಗಿ ಸಂಕಲ್ಪ ಕೈಗೊಂಡಿದ್ದರು. ಅದರಂತೆ ರಥ ನಿರ್ಮಾಣಕ್ಕೆ ಪೂರ್ವಭಾವಿಯಾಗಿ ಬುಧವಾರ ಕೃಷ್ಣನಿಗೆ ಚಿನ್ನದಲ್ಲಿ ತುಲಾಭಾರ ನಡೆಸಲಾಯಿತು.ಈ ಸಂದರ್ಭ ಭಕ್ತರು ಚಿನ್ನದ ರಥ ನಿರ್ಮಾಣದಲ್ಲಿ ಭಾಗಿಯಾಗಿವುದಕ್ಕೆ ಚಿನ್ನ ಸಮರ್ಪಣೆಗೆ ಅವಕಾಶ ನೀಡಲಾಯಿತು. ಅದರಂತೆ ಅನೇಕ ಮಂದಿ ಭಕ್ತರು, ಹೊಸ ಚಿನ್ನದ ಜೊತೆಗೆ ತಮ್ಮ ಹಳೆಯ ಚಿನ್ನವನ್ನೂ ಕೃಷ್ಣನಿಗೆ ಸಮರ್ಪಿಸಿದರು.
ಈ ಸಂದರ್ಭ ಮಾತನಾಡಿದ ಪುತ್ತಿಗೆ ಶ್ರೀಗಳು, ಈ ಅಕ್ಷಯ ತೃತೀಯ ದಿನದಂದು ಈ ಯೋಜನೆಗೆ ಚಾಲನೆ ನೀಡಲಾಗುತ್ತಿದೆ. ಈ ದಿನದಂದು ಸೀತೆಗೆ ಅಗ್ನಿ ಪರೀಕ್ಷೆಯಾಗಿ, ಆಕೆ ಚಿನ್ನದಂತೆ ಪುಟವಾಗಿ ಹೊರಬಂದು ಮತ್ತೆ ಶ್ರೀರಾಮನ ಕೈ ಹಿಡಿದಳು. ಭೂಮಿಯಲ್ಲಿ ಹುಟ್ಟಿದ ಸೀತೆ ಸುವರ್ಣರೂಪಿಯೂ, ಲಕ್ಷ್ಮೀರೂಪಿಯೂ ಆಗಿದ್ದಾಳೆ. ಆದ್ದರಿಂದ ಈ ದಿನ ಭಗವಂತನಿಗೆ ಸುವರ್ಣ ಅರ್ಪಿಸಿದರೆ ಅಕ್ಷಯ ಫಲ ಸಿಗುತ್ತದೆ. ಆದ್ದರಿಂದ ಈ ದಿನ ಭಕ್ತರಿಗೆ ಚಿನ್ನ ಸಮರ್ಪಣೆಗೆ ಅವಕಾಶ ನೀಡಲಾಗಿದೆ ಎಂದರು.ಈ ಸಂದರ್ಭ ಪುತ್ತಿಗೆ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು, ಬಂಡಾರಕೇರಿ ಮಠದ ಶ್ರೀ ವಿದ್ಯೇಶ ತೀರ್ಥ ಶ್ರೀಪಾದರು, ಪುತ್ತಿಗೆ ಶ್ರೀಗಳ ಅಂತರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯರು, ವಿದ್ವಾಂಸ ಗೋಪಾಲಾಚಾರ್ಯರು ಮುಂತಾದವರು ಉಪಸ್ಥಿತರಿದ್ದರು.