ಸಾರಾಂಶ
ಕರಾವಳಿಯನ್ನು ದಶಕಗಳಿಂದ ಕಾಡುತ್ತಿರುವ ಕಡಲ್ಕೊರೆತ ತಡೆಯಲು ಸರ್ಕಾರ ನೂರಾರು ಕೋಟಿ ರು.ಗಳನ್ನು ವ್ಯಯಿಸಿದ್ದರೂ, ಕಡಲನ್ನು ನಿಯಂತ್ರಿಸುವುದಕ್ಕೆ ಸಾಧ್ಯವಾಗಿಲ್ಲ. ಪ್ರತಿವರ್ಷ ಸಮುದ್ರದಿಂದ ಕೋಟ್ಯಂತರ ರು. ಆಸ್ತಿಪಾಸ್ತಿ ನಾಶವಾಗುವುದು ನಿಂತಿಲ್ಲ.
ಉಡುಪಿ : ಕರಾವಳಿಯನ್ನು ದಶಕಗಳಿಂದ ಕಾಡುತ್ತಿರುವ ಕಡಲ್ಕೊರೆತ ತಡೆಯಲು ಸರ್ಕಾರ ನೂರಾರು ಕೋಟಿ ರು.ಗಳನ್ನು ವ್ಯಯಿಸಿದ್ದರೂ, ಕಡಲನ್ನು ನಿಯಂತ್ರಿಸುವುದಕ್ಕೆ ಸಾಧ್ಯವಾಗಿಲ್ಲ. ಪ್ರತಿವರ್ಷ ಸಮುದ್ರದಿಂದ ಕೋಟ್ಯಂತರ ರು. ಆಸ್ತಿಪಾಸ್ತಿ ನಾಶವಾಗುವುದು ನಿಂತಿಲ್ಲ. ಈ ಹಿನ್ನೆಲೆಯಲ್ಲಿ ಇಲ್ಲಿನ ಕೆಲವು ಆಸ್ತಿಕರು ಮಂತ್ರಗಳಿಂದ ಕಡಲನ್ನು ಶಾಂತಗೊಳಿಸುವುದಕ್ಕೆ ಸಿದ್ಧತೆಗಳನ್ನು ನಡೆಸಿದ್ದಾರೆ.
ಇಲ್ಲಿನ ವೇದ ಕೃಷಿಕ ಕೆ.ಎಸ್. ನಿತ್ಯಾನಂದ ಎಂಬವರ ನೇತೃತ್ವದಲ್ಲಿ ಈ ವಿಷ್ಣುಸಹಸ್ರನಾಮ ಪಠಣದಿಂದ ಕಡಲಿನ ಅಲೆಗಳನ್ನು ಶಾಂತಗೊಳಿಸುವ ಮಹಾಭಿಯಾನ ಜ.26ರಂದು ಕಾಸರಗೋಡಿನ ಕಣ್ಣೂರುನಿಂದ ಉಡುಪಿ ಜಿಲ್ಲೆಯ ಶಿರೂರುವರೆಗೆ ನಡೆಯಲಿದೆ ಎಂದು ಆಯೋಜನಾ ಸಮಿತಿ ಕಾರ್ಯಾಧ್ಯಕ್ಷ ಕಟ್ಕೆರೆ ಪ್ರೇಮಾನಂದ ಶೆಟ್ಟಿ ತಿಳಿಸಿದ್ದಾರೆ.
2005ರಲ್ಲಿ ಕುಂದಾಪುರ ತಾಲೂಕಿನ ಮರವಂತೆ ಸಮುದ್ರ ತೀರದಲ್ಲಿ ಈ ಪ್ರಯೋಗ ಮಾಡಲಾಗಿತ್ತು. ನೂರಾರು ಮಂದಿ ಸಮುದ್ರ ತೀರದಲ್ಲಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿದ್ದರು. ಇದರಿಂದ ಮರವಂತೆಯಲ್ಲಿ ಕಡಲ್ಕೊರೆತ ಕಡಿಮೆಯಾಗಿದೆ ಎಂದವರು ಪ್ರತಿಪಾದಿಸುತಿದ್ದಾರೆ.
ಇತ್ತೀಚೆಗೆ ಮತ್ತೆ ಪ್ರಕೃತಿಯಲ್ಲಿ ಏರುಪೇರು ಹೆಚ್ಚಾಗಿದೆ, ಸಮುದ್ರದ ಅಲೆಗಳಿಂದ ಭೂಮಿ ಕೊರೆತ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮತ್ತೆ ವಿಷ್ಣು ಸಹಸ್ರನಾಮ ಪಠಣ ನಡೆಸುವುದಾಗಿ ಅವರು ಹೇಳಿದ್ದಾರೆ.
ಈ ಬಾರಿ ಬೃಹತ್ ಮಟ್ಟದಲ್ಲಿ ಈ ವಿಷ್ಣು ಸಹಸ್ರನಾಮ ಪಠಣ ಆಯೋಜಿಸಲಾಗುತ್ತಿದೆ. ಕಣ್ಣೂರುನಿಂದ ಶಿರೂರು ವರೆಗೆ ಸುಮಾರು 270 ಕಿ.ಮೀ. ಸಮುದ್ರ ತೀರವಿದೆ. ಈ ತೀರವ್ಯಾಪ್ತಿಯಲ್ಲಿ 108 ಕಡೆಗಳಲ್ಲಿ ತಲಾ 108 ಮಂದಿಯಂತೆ ಸುಮಾರು 18,000 ಆಸ್ತಿಕರು ಸಮುದ್ರಾಭಿಮುಖವಾಗಿ ಕುಳಿತುಕೊಂಡು, ಸಂಜೆ 4ರಿಂದ 6 ಗಂಟೆ ವರೆಗೆ 6 ಬಾರಿ ವಿಷ್ಣು ಸಹಸ್ರನಾಮವನ್ನು ಏಕಕಾಲದಲ್ಲಿ ಪಠಿಸಲಿದ್ದಾರೆ. ಸ್ಥಳೀಯ ಗಣ್ಯರು ಸಮುದ್ರಕ್ಕೆ ಹಾಲೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ.
ಸಾಮೂಹಿಕ ಮಂತ್ರಪಠಣಕ್ಕೆ ಈಗಾಗಲೇ ಸಮುದ್ರ ತೀರದಲ್ಲಿ ಸ್ಥಳಗಳನ್ನು ಗುರುತಿಸಲಾಗಿದೆ. ಅಲ್ಲಿ ಸ್ಥಳೀಯ ಮೀನುಗಾರರ ಸಹಕಾರದಲ್ಲಿ ನೆರಳಿನ ವ್ಯವಸ್ಥೆ ಮಾಡಲಾಗುತ್ತದೆ. ಸಹಸ್ರನಾಮ ಪಠಣಕ್ಕೆ ದೂರದೂರುಗಳಿಂದ ಬರುವವರಿಗೆ ವಸತಿ - ಊಟೋಪಚಾರದ ವ್ಯವಸ್ಥೆಗಳನ್ನೂ ಮಾಡಲಾಗುತ್ತದೆ.
ಈಗಾಗಲೇ ವಿಷ್ಣುಸಹಸ್ರನಾಮದ 15000 ಕರಪತ್ರಗಳನ್ನು ಆಸಕ್ತರಿಗೆ ವಿತರಿಸಲಾಗಿದೆ. ಮೂರು ಜಿಲ್ಲೆಗಳಲ್ಲಿ ಅಲ್ಲಲ್ಲಿ ಕೇಂದ್ರಗಳನ್ನು ಆರಂಭಿಸಿ 150ಕ್ಕೂ ಹೆಚ್ಚು ತಂಡಗಳಿಗೆ ವಿಷ್ಣು ಸಹಸ್ರನಾಮ ಪಠಣ ಅಭ್ಯಾಸ ಮಾಡಿಸಲಾಗುತ್ತಿದೆ.