ಸಾರಾಂಶ
ದೇಶದಲ್ಲಿ ನಡೆದಿದ್ದ ವಿಧ್ವಂಸಕ ಕೃತ್ಯಗಳಿಗೆ ಸ್ಫೋಟಕ ವಸ್ತುಗಳನ್ನು ಪೂರೈಸಿದ ಪ್ರಕರಣ ಸಂಬಂಧ ಹೋಮಿಯೋಪತಿ ವೈದ್ಯ ಸೇರಿ ಇಂಡಿಯನ್ ಮುಜಾಹಿದೀನ್(ಐಎಂ) ಭಯೋತ್ಪಾದಕ ಸಂಘಟನೆಯ ಮೂವರು ಶಂಕಿತ ಉಗ್ರರನ್ನು ದೋಷಿಗಳೆಂದು ನಗರದ ಎನ್‌ಐಎ ವಿಶೇಷ ನ್ಯಾಯಾಲಯ ಸೋಮವಾರ ಮಹತ್ವದ ತೀರ್ಪು ನೀಡಿದೆ.
ಬೆಂಗಳೂರು : ದೇಶದಲ್ಲಿ ನಡೆದಿದ್ದ ವಿಧ್ವಂಸಕ ಕೃತ್ಯಗಳಿಗೆ ಸ್ಫೋಟಕ ವಸ್ತುಗಳನ್ನು ಪೂರೈಸಿದ ಪ್ರಕರಣ ಸಂಬಂಧ ಹೋಮಿಯೋಪತಿ ವೈದ್ಯ ಸೇರಿ ಇಂಡಿಯನ್ ಮುಜಾಹಿದೀನ್(ಐಎಂ) ಭಯೋತ್ಪಾದಕ ಸಂಘಟನೆಯ ಮೂವರು ಶಂಕಿತ ಉಗ್ರರನ್ನು ದೋಷಿಗಳೆಂದು ನಗರದ ಎನ್‌ಐಎ ವಿಶೇಷ ನ್ಯಾಯಾಲಯ ಸೋಮವಾರ ಮಹತ್ವದ ತೀರ್ಪು ನೀಡಿದೆ.
ಉತ್ತರ ಕನ್ನಡ ಜಿಲ್ಲೆ ಭಟ್ಕಳದ ವೈದ್ಯ ಡಾ.ಸೈಯದ್ ಇಸ್ಮಾಯಿಲ್ ಅಫಾಕ್, ಅಬ್ದುಲ್ ಸುಬೂರ್ ಹಾಗೂ ಸದ್ದಾಂ ಹುಸೇನ್‌ಗೆ ದೋಷಿಗಳಾಗಿದ್ದು, ಇದೇ ಪ್ರಕರಣದಲ್ಲಿ ಭಟ್ಕಳದ ಜೈಲ್ವುದ್ದೀನ್ ಹಾಗೂ ರಿಯಾಜ್ ಅಹಮದ್ ಸೈಯದ್ ರನ್ನು ಆರೋಪ ಮುಕ್ತಗೊಳಿಸಿ ನ್ಯಾಯಾಲಯ ಆದೇಶಿಸಿದೆ. ಪ್ರಕರಣದ ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ನ್ಯಾಯಾಲಯ ಕಾಯ್ದಿರಿಸಿದೆ.
2015ರಲ್ಲಿ ಬೆಂಗಳೂರಿನ ಪುಲಿಕೇಶಿ ನಗರ ಹಾಗೂ ಭಟ್ಕಳ ಪಟ್ಟಣದಲ್ಲಿ ಏಕಕಾಲಕ್ಕೆ ಕಾರ್ಯಾಚರಣೆ ನಡೆಸಿ ಐಎಂ ಶಂಕಿತ ಉಗ್ರರನ್ನು ಸೆರೆ ಹಿಡಿದು ಅಪಾರ ಪ್ರಮಾಣ ಸ್ಫೋಟಕ ವಸ್ತುಗಳನ್ನು ಸಿಸಿಬಿ ಜಪ್ತಿ ಮಾಡಿತ್ತು. ಬಳಿಕ ತನಿಖೆ ನಡೆಸಿ ನ್ಯಾಯಾಲಯಕ್ಕೆ 2 ಸಾವಿರಕ್ಕೂ ಅಧಿಕ ಪುಟಗಳ ಆರೋಪ ಪಟ್ಟಿಯನ್ನು ಸಿಸಿಬಿ ಇನ್ಸ್‌ಪೆಕ್ಟರ್ (ಈಗಿನ ಹಾಸನ ಜಿಲ್ಲಾ ಹೆಚ್ಚುವರಿ ಎಸ್ಪಿ) ಎಂ.ಕೆ.ತಮ್ಮಯ್ಯ ಸಲ್ಲಿಸಿದ್ದರು. ಸಿಸಿಬಿ ಪರ ಸರ್ಕಾರಿ ಅಭಿಯೋಜಕ ಶಂಕರ್ ಬಿಕ್ಕಣ್ಣವರ್ ವಾದಿಸಿದ್ದರು. 9 ವರ್ಷಗಳ ಸುದೀರ್ಘವಾಗಿ ವಿಚಾರಣೆ ನಡೆಸಿ ನ್ಯಾಯಾಲಯ ತೀರ್ಪ ನೀಡಿದೆ.
ವೈದ್ಯ ಮಾಸ್ಟರ್ ಮೈಂಡ್: 2014ರ ಡಿಸೆಂಬರ್ 30ರಂದು ಎಂ.ಜಿ.ರಸ್ತೆಯ ಚರ್ಚ್ ಸ್ಟ್ರೀಟ್ ಹೋಟೆಲ್ ಬಳಿ ಬಾಂಬ್ ಸ್ಫೋಟವಾಗಿತ್ತು. ಈ ವಿಧ್ವಂಸಕ ಕೃತ್ಯದ ಹಿಂದೆ ಭಟ್ಕಳ ನಂಟಿನ ಕುರಿತು ಸಿಸಿಬಿ ಪೊಲೀಸರಿಗೆ ಮಾಹಿತಿ ಸಿಕ್ಕಿತು. ಈ ಸುಳಿವು ಆಧರಿಸಿ ಕಾರ್ಯಾಚರಣೆಗಿಳಿದ ಸಿಸಿಬಿ, 2015ರ ಜನವರಿ 9 ರಂದು ಬೆಂಗಳೂರಿನ ಪುಲಿಕೇಶಿ ನಗರದಲ್ಲಿ ವೈದ್ಯ ಅಫಾಕ್, ಅಬ್ದುಲ್ ಸುಬೂರ್ ಹಾಗೂ ಭಟ್ಕಳದಲ್ಲಿ ಸದ್ದಾಂ ಹುಸೇನ್ ನನ್ನು ಬಂಧಿಸಿತ್ತು. ಬಳಿಕ ಸಿಸಿಬಿ ತನಿಖೆಯಲ್ಲಿ ದೇಶದ ವಿವಿಧೆಡೆ ಎಂಐ ಸಂಘಟನೆ ನಡೆಸಿದ್ದ ವಿಧ್ವಂಸಕ ಕೃತ್ಯಗಳಿಗೆ ಸ್ಫೋಟಕ ವಸ್ತುಗಳನ್ನು ಶಂಕಿತ ಉಗ್ರ ವೈದ್ಯ ಅಫಾಕ್ ತಂಡ ಪೂರೈಸಿದ್ದ ಮಹತ್ವದ ಸಂಗತಿ ಬಯಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.
2003ರಲ್ಲಿ ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಯನ್ನು ಭಟ್ಕಳದ ರಿಯಾಜ್ ಭಟ್ಕಳ್, ಯಾಸಿನ್ ಭಟ್ಕಳ್ ಹಾಗೂ ಇಕ್ಬಾಲ್ ಭಟ್ಕಳ್ ಸೋದರರು ಹುಟ್ಟು ಹಾಕಿದ್ದರು. ತರುವಾಯ ಈ ಸಂಘಟನೆಗೆ ಹೋಮಿಯೋಪತಿ ವೈದ್ಯ ಅಫಾಕ್ ಸೇರಿ ತನ್ನೂರಿನ ಮುಸ್ಲಿಂ ಸಮುದಾಯದ ಯುವಕರಿಗೆ ಜಿಹಾದ್ ಕುರಿತು ಬೋಧಿಸಿ ನೇಮಿಸಿಕೊಂಡಿದ್ದರು. ಅಫಾಕ್‌ನನ್ನು ಪಾಕಿಸ್ತಾನಕ್ಕೆ ಕರೆಸಿಕೊಂಡು ಭಟ್ಕಳ್ ಸೋದರರು ಬಾಂಬ್ ತಯಾರಿಕೆ ಬಗ್ಗೆ ತರಬೇತಿ ನೀಡಿದ್ದರು.
ಅದೇ ವೇಳೆ ಪಾಕಿಸ್ತಾನದ ಯುವತಿಯನ್ನು ವಿವಾಹವಾದ ಅಫಾಕ್, ಕೆಲ ತಿಂಗಳ ಬಳಿಕ ಆಕೆ ಜತೆ ಭಟ್ಕಳಕ್ಕೆ ಮರಳಿ ನೆಲೆಸಿದ್ದ. ನಂತರ ಭಟ್ಕಳದಲ್ಲೇ ಜಿಲೆಟಿನ್ ಬಳಸಿ ಬಾಂಬ್‌ಗಳನ್ನು ತಯಾರಿಸಿ ಐಎಂ ಶಂಕಿತ ಉಗ್ರರಿಗೆ ಅಫಾಕ್ ತಂಡ ರವಾನಿಸುತ್ತಿತ್ತು. ಈ ಸ್ಫೋಟಕ ವಸ್ತುಗಳಿಗೆ ಟೈಮರ್ ಫಿಕ್ಸ್ ಮಾಡಿ ಶಂಕಿತ ಉಗ್ರರು ವಿಧ್ವಂಸಕ ಕೃತ್ಯ ನಡೆಸಿದ್ದರು. 2006-14ವರೆಗೆ ಹೈದರಾಬಾದ್, ಪುಣೆ ಹಾಗೂ ದೆಹಲಿ ಸೇರಿ ದೇಶದ ವಿವಿಧೆಡೆ ಐಎಂ ನಡೆಸಿದ್ದ ಬಾಂಬ್ ಸ್ಫೋಟಕ ಕೃತ್ಯಗಳಿಗೆ ಅಫಾಕ್ ತಂಡವೇ ಸ್ಫೋಟಕ ವಸ್ತುಗಳನ್ನು ಪೂರೈಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಲ್ಯಾಪ್‌ಟಾಪ್‌ನಲ್ಲಿ ಸಿಕ್ಕಿದ್ದ ಪುರಾವೆ
ಪುಲಿಕೇಶಿ ನಗರದ ಅಫಾಕ್ ಮನೆಯಲ್ಲಿ ಜಪ್ತಿಯಾದ ಲ್ಯಾಪ್‌ಟಾಪ್‌ನಲ್ಲಿ ವಿಧ್ವಂಸಕ ಕೃತ್ಯಗಳಿಗೆ ಬಾಂಬ್ ಪೂರೈಕೆ ಕುರಿತು ಪುರಾವೆ ಸಿಕ್ಕಿತ್ತು. ಈ ಸಂಬಂಧ ಐಎಂನ ಪ್ರಮುಖ ಉಗ್ರ ಯಾಸಿನ್ ಜತೆ ಅಫಾಕ್ ನಡೆಸಿದ್ದ ಚಾಟಿಂಗ್ ವಿವರಣೆ ಸಿಕ್ಕಿತು. ಅಲ್ಲದೆ, ಹಲವು ಬಾರಿ ಪಾಕಿಸ್ತಾನ ಹಾಗೂ ದುಬೈಗೆ ಅಫಾಕ್ ಪ್ರಯಾಣಿಸಿದ್ದ ವಿಮಾನ ಟಿಕೆಟ್ ಅನ್ನು ಆನ್‌ಲೈನ್ ಮೂಲಕ ಭಟ್ಕಳ್ ಸೋದರರು ಬುಕ್ ಮಾಡಿದ್ದರು. ಇಂಡಿಯನ್ ಏರ್‌ಲೈನ್ಸ್ ನೀಡಿದ ಐಪಿ ಅಡ್ರೆಸ್ ಪರಿಶೀಲಿಸಿದಾಗ ರಾವಲ್ಪಿಂಡಿ ವಿಳಾಸ ಪತ್ತೆಯಾಯಿತು. ಹಾಗೆಯೇ ಫ್ಯಾರಚೂಟ್ ಸ್ಲೈಡಿಂಗ್ ತರಬೇತಿಯನ್ನೂ ಅಫಾಕ್ ಪಡೆದಿದ್ದ. ದೇಶದಲ್ಲಿ ಫ್ಯಾರಚೂಟ್ ಬಳಸಿಕೊಂಡು ವಿಧ್ವಂಸಕ ಕೃತ್ಯಕ್ಕೆ ಐಎಂ ಸಂಘಟನೆ ರೂಪಿಸಿದ್ದ ಸಂಚಿಗೆ ಇದು ಸಾಕ್ಷ್ಯವಾಯಿತು ಎಂದು ಅಧಿಕಾರಿಗಳು ತಿಳಸಿದ್ದಾರೆ.
100 ಜಿಲೆಟಿನ್ ಕಡ್ಡಿಗಳು ಸಿಕ್ಕಿದ್ದವು: ಅಂದು ಅಫಾಕ್ ಮನೆ ಮೇಲೆ ದಾಳಿ ನಡೆಸಿದಾಗ 100 ಜಿಲೆಟಿನ್ ಕಡ್ಡಿಗಳು ಹಾಗೂ ಟೈಮರ್‌ಗಳು ಸೇರಿ ಕೆಲ ಸ್ಫೋಟಕ ವಸ್ತುಗಳು ಸಿಕ್ಕಿದ್ದವು. ಅಲ್ಲದೆ, ಈ ಹಿಂದೆ ವಿಧ್ವಂಸಕ ಕೃತ್ಯಗಳಿಗೆ ಪೂರೈಸಿದ್ದ ಸ್ಫೋಟಕ ವಸ್ತುಗಳ ತಯಾರಿಕೆಗೆ ಬಳಸಿದ್ದ ಕಚ್ಚಾ ವಸ್ತುಗಳು ಪತ್ತೆಯಾಗಿದ್ದವು. ಇನ್ನು ಸಿಸಿಬಿ ದಾಳಿ ನಡೆಸುವ ಮುನ್ನ ಆ ಜಿಲಿಟಿನ್ ಕಡ್ಡಿಗಳನ್ನು ಅಫಾಕ್ ಸೂಚನೆ ಮೇರೆಗೆ ಶಿವಮೊಗ್ಗದಿಂದ ಅಕ್ರಮವಾಗಿ ತಂದು ಸದ್ದಾಂ ಹುಸೇನ್ ಸಂಗ್ರಹಿಸಿಟ್ಟಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಒಬಾಮ ಭೇಟಿ ವೇಳೆ ಸ್ಫೋಟಕಕ್ಕೆ ಸಂಚು
2015ರ ಜನವರಿ 26 ರಂದು ಗಣರಾಜ್ಯೋತ್ಸವ ಸಮಾರಂಭಕ್ಕೆ ಅತಿಥಿಯಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭೇಟಿ ವೇಳೆ ದೇಶಾದ್ಯಂತ ವಿಧ್ವಂಸಕ ಕೃತ್ಯ ನಡೆಸಲು ಐಎಂ ಸಂಚು ರೂಪಿಸಿದ್ದ ಸಂಗತಿ ತನಿಖೆ ವೇಳೆ ಬಯಲಾಗಿತ್ತು. ಈ ಕುರಿತು ಅಫಾಕ್ ಜತೆ ಯಾಸಿನ್ ನಡೆಸಿದ್ದ ಚಾಟಿಂಗ್ ನಡೆಸಿದ್ದರು. ಇದಕ್ಕಾಗಿ ಸ್ಫೋಟಕ ವಸ್ತುಗಳನ್ನು ಅಫಾಕ್ ಸಂಗ್ರಹಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಫಾಕ್ ಬಂಧನ ಬಳಿಕ ಬಾಂಬ್ ಸಿಡಿದಿಲ್ಲ
ವೈದ್ಯ ಅಫಾಕ್ ತಂಡ ಬಂಧನ ಬಳಿಕ ಭಾರತದಲ್ಲಿ ಐಎಂ ಸಂಘಟನೆ ಭಯೋತ್ಪಾದಕ ಚಟುಟಿಕೆಗಳು ಸ್ಥಗಿತವಾದವು. 2015ರ ನಂತರ ಯಾಸಿನ್ ಭಟ್ಕಳ್ ಸೋದರರು ಯಾವುದೇ ವಿಧ್ವಂಸಕ ಕೃತ್ಯ ನಡೆಸಿಲ್ಲ ಎಂದು ಸಿಸಿಬಿ ಹೇಳಿದೆ.