ಸಾರಾಂಶ
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಡಾ.ಮೋಹನ್ ಭಾಗವತ್ ಅವರಿಗೆ ಪರ್ಯಾಯ ಪುತ್ತಿಗೆ ಶ್ರೀಗಳು ‘ಹಿಂದೂ ಸಾಮ್ರಾಟ್’ ಎಂಬ ಬಿರುದು ಹಾಗೂ ‘ಶ್ರೀಕೃಷ್ಣ ಗೀತಾನುಗ್ರಹ’ ಎಂಬ ಪ್ರಶಸ್ತಿ ಪ್ರಧಾನ ಮಾಡಿದರು.
ಉಡುಪಿ : ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಡಾ.ಮೋಹನ್ ಭಾಗವತ್ ಅವರಿಗೆ ಪರ್ಯಾಯ ಪುತ್ತಿಗೆ ಶ್ರೀಗಳು ‘ಹಿಂದೂ ಸಾಮ್ರಾಟ್’ ಎಂಬ ಬಿರುದು ಹಾಗೂ ‘ಶ್ರೀಕೃಷ್ಣ ಗೀತಾನುಗ್ರಹ’ ಎಂಬ ಪ್ರಶಸ್ತಿ ಪ್ರಧಾನ ಮಾಡಿದರು.
ನಗದಲ್ಲಿರುವ ಕೃಷ್ಣಮಠಕ್ಕೆ ಭಾನುವಾರ ಭೇಟಿ ನೀಡಿದ ಮೋಹನ್ ಭಾಗವತ್ ಅವರು ಕೃಷ್ಣದೇವರ ದರ್ಶನ ಪಡೆದು ಪರ್ಯಾಯ ಶ್ರೀ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರ ಜೊತೆಗೆ ಸಮಾಲೋಚನೆ ನಡೆಸಿದರು. ಈ ವೇಳೆ ಭಾರತ ಹಾಗೂ ಬಾಂಗ್ಲಾದೇಶ ಸೇರಿ ವಿವಿಧೆಡೆ ನಡೆಯುತ್ತಿರುವ ಹಿಂದೂ ವಿರೋಧಿ ಚಟುವಟಿಕೆಗಳ ಕುರಿತು ಚರ್ಚೆ ನಡೆಸಲಾಗಿದೆ.
ಬಳಿಕ ಗೀತಾಮಂದಿರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಮಾತನಾಡಿದ ಭಾಗವತ್ ಅವರು, ಧರ್ಮದ ರಕ್ಷಣೆ, ಪೋಷಣೆ ಹಾಗೂ ಸಂವರ್ಧನೆಯ ವಿಚಾರದಲ್ಲಿ ಪ್ರತಿಯೊಬ್ಬ ಹಿಂದೂ ಶೂನ್ಯ ಸಹಿಷ್ಣುವಾಗಿರಬೇಕು. ಸಮಸ್ತ ಸಾಧು, ಸಂತರು ಹಿಂದೆಂದಿಗಿಂತಲೂ ಹೆಚ್ಚು ತೊಡಗಿಸಿಕೊಂಡು ಸಮರ್ಥವಾಗಿ ಸಮಾಜಕ್ಕೆ ಧಾರ್ಮಿಕ ಮೌಲ್ಯಗಳು ಮತ್ತು ರಾಷ್ಟ್ರೀಯ ವಿಚಾರಧಾರೆಗಳ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.
ಸಮಾರಂಭದಲ್ಲಿ ಸರಸಂಘಚಾಲಕರಿಗೆ ಬೃಹತ್ ಕಡಗೋಲು, ರಜತ ಫಲಕ, ಕೃಷ್ಣನ ಪ್ರಸಾದ ನೀಡಿ ಶಾಲು ಹೋದಿಸಿ ಸನ್ಮಾನಿಸಲಾಯಿತು. ಈ ವೇಳೆ ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು, ಸಂಘದ ಹಿರಿಯ ಮುಖಂಡ ಮುಕುಂದಜೀ, ಮಠದ ದಿವಾನರಾದ ಎಂ.ನಾಗರಾಜ ಆಚಾರ್ಯ ಮುಂತಾದವರಿದ್ದರು.