ಉಡುಪಿ: ಅರ್ಗೋಡು ಮೋಹನ್‌ ಶೆಣೈ, ಅಬ್ದುಲ್ಲಾ ಪರ್ಕಳರಿಗೆ ರಾಜ್ಯೋತ್ಸವ ಪ್ರಶಸ್ತಿ

| Published : Nov 01 2023, 01:00 AM IST

ಉಡುಪಿ: ಅರ್ಗೋಡು ಮೋಹನ್‌ ಶೆಣೈ, ಅಬ್ದುಲ್ಲಾ ಪರ್ಕಳರಿಗೆ ರಾಜ್ಯೋತ್ಸವ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಈ ಬಾರಿಯ ಕರ್ನಾಟಕ ರಾಜ್ಯೋತ್ಸವಕ್ಕೆ ಉಡುಪಿ ಜಿಲ್ಲೆಯ ಖ್ಯಾತ ಯಕ್ಷಗಾನ ಕಲಾವಿದ ಅರ್ಗೋಡು ಮೋಹನ್ ಶೆಣೈ ಮತ್ತು ಸಮಾಜ ಸೇವಕ ಹಾಜಿ ಅಬ್ದುಲ್ಲಾ ಪರ್ಕಳ ಅವರು ಆಯ್ಕೆಯಾಗಿದ್ದಾರೆ.
ಕನ್ನಡಪ್ರಭ ವಾರ್ತೆ ಉಡುಪಿ ಈ ಬಾರಿಯ ಕರ್ನಾಟಕ ರಾಜ್ಯೋತ್ಸವಕ್ಕೆ ಉಡುಪಿ ಜಿಲ್ಲೆಯ ಖ್ಯಾತ ಯಕ್ಷಗಾನ ಕಲಾವಿದ ಅರ್ಗೋಡು ಮೋಹನ್ ಶೆಣೈ ಮತ್ತು ಸಮಾಜ ಸೇವಕ ಹಾಜಿ ಅಬ್ದುಲ್ಲಾ ಪರ್ಕಳ ಅವರು ಆಯ್ಕೆಯಾಗಿದ್ದಾರೆ. ಅರ್ಗೋಡು ಮೋಹನ್ ಶೆಣೈ (42): ಕುಂದಾಪುರದ ಕಮಲಶಿಲೆ ಅರ್ಗೋಡಪ ಗ್ರಾಮದವರಾದ ಮೋಹನದಾಸ್ ಶೆಣೈ ಅವರ ತಂದೆ ಕೆ. ಗೋವಿಂದರಾಯ ಶೆಣೈ ಪ್ರಸಿದ್ಧ ಭಾಗವತರಾಗಿದ್ದರು. ಅವರಿಂದಲೇ ಸ್ಫೂರ್ತಿ ಪಡೆದು ಯಕ್ಷಗಾನ ರಂಗಕ್ಕೆ ಕಾಲಿಟ್ಟರು. ದೊಡ್ಡಪ್ಪಂದಿರಾದ ರಾಮಚಂದ್ರ ಶೆಣೈ ಮತ್ತು ನಗಸಿಂಹ ಶೆಣೈ ಅವರಿಂದ ಮಾತುಗಾರಿಕೆ, ಕಮಲಶಿಲೆ ಮಹಾಬಲ ದೇವಾಡಿಗರಿಂದ ಹೆಜ್ಜೆಗಾರಿಕೆ ಕಲಿತು, ಪ್ರಪ್ರಥಮವಾಗಿ ಸುಧನ್ವ ಪಾತ್ರದೊಂದಿಗೆ ರಂಗಸ್ಥಳ ಹತ್ತಿದ ಶೆಣೈ, ಮುಂದೆ ಹಿರಿಯಡ್ಕ, ಪೆರ್ಡೂರು, ಸಾಲಿಗ್ರಾಮ, ಶಿರಸಿ, ಕುಮಟಾ, ಅಮೃತೇಶ್ವರಿ, ಕಮಲಶಿಲೆ ಮೇಳಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರ ದಶರಥ, ಭೀಷ್ಮ, ಶ್ರೀರಾಮ, ಶಂತನು, ಉಗ್ರಸೇನ, ಅಕ್ರೂರ, ನಾರದ, ಭೀಮ, ನಳ, ಹನುಮಂತ, ನರಕಾಸುರ, ಬ್ರಹ್ಮ, ವಿಷ್ಣು, ರಾವಣ ಇತ್ಯಾದಿ ಪಾತ್ರಗಳು ಪ್ರಸಿದ್ದವಾದವು. ಕಲಾವಿದರಾಗಿಯಲ್ಲದೆ ಶೆಣೈ ಅವರು ಸ್ವಪ್ನ ಸಾಮ್ರಾಜ್ಯ, ರಕ್ತತಿಲಕ, ಮೃಗನಯನೆ, ಯಶೋಧಾ ಕೃಷ್ಣ, ಪಾರ್ಥಿವಾಗ್ರಣಿ, ಕರ್ಣಕಥಾಮೃತ ಮುಂತಾದ ಪ್ರಸಂಗ ಕರ್ತರಾಗಿಯೂ, ಬೆಳ್ಳಿನಕ್ಷತ್ರ, ಶಿವಭೈರವಿ, ವರ್ಣವೈಭವ, ವಜ್ರಕೀಟ ಇತ್ಯಾದಿ ಕತೆಗಳಿಗೆ ಪದ್ಯರಚನಾಕಾರರಾಗಿಯೂ ಪ್ರಸಿದ್ಧರಾಗಿದ್ದಾರೆ. ಹಾಜಿ ಅಬ್ದುಲ್ಲಾ ಪರ್ಕಳ (80): ಕೇರಳದ ನೀಲೇಶ್ವರದಲ್ಲಿ ಜನಿಸಿದ ಅಬ್ದುಲ್ಲಾ ಅವರು 24ನೇ ವಯಸ್ಸಿನಲ್ಲೇ ಉಡುಪಿಯ ಪರ್ಕಳಕ್ಕೆ ಬಂದು ವೃತ್ತಿ ಜೀವನವನ್ನು ಆರಂಭಿಸಿದರು. ಮಣಿಪಾಲದ ಡಾ.ಟಿ.ಎ.ಪೈ ಅವರ ಉತ್ತೇಜನದಿಂದ ಸಣ್ಣ ಉದ್ಯಮ ಪ್ರಾರಂಭಿಸಿದ, ಕಠಿಣ ಪರಿಶ್ರಮದಿಂದ ಉದ್ಯಮವನ್ನು ವಿಸ್ತರಿಸಿ ಉಡುಪಿಯ ಯಶಸ್ವಿ ಉದ್ಯಮಿಯಾಗಿ ಬೆಳೆದರು. ಕೊಡುಗೈ ದಾನಿಯಾಗಿ, ಮಣಿಪಾಲದಲ್ಲಿ ಮಸ್ಜಿದ್-ಎ- ಮಣಿಪಾಲ್ ನಿರ್ಮಿಸುವಲ್ಲಿ ಪ್ರಧಾನ ಪಾತ್ರ ವಹಿಸಿದ ಅವರು ಸರ್ವಧರ್ಮೀಯರೊಂದಿಗೆ ಸೌಹಾರ್ದಕ್ಕಾಗಿ ಗುರುತಿಸಲ್ಪಟ್ಟಿದ್ದಾರೆ. ಜಮೀಯತುಲ್ ಫಲಾಹ್, ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್, ಮಿಲ್ಲತ್ ಎಜುಕೇಶನ್ ಟ್ರಸ್ಟ್, ಝಿಯಾ ಎಜುಕೇಶನ್ ಟ್ರಸ್ಟ್ ಮುಂತಾದ ಸಂಘ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ, ಕಾಂಗ್ರೆಸ್ ಅಲ್ಪಸಂಖ್ಯಾತರ ಉಡುಪಿ ಘಟಕದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಸ್ಥಾಪನೆಯಲ್ಲಿ ಬಹಳ ಮುತುವರ್ಜಿ ವಹಿಸಿ, ಪ್ರಥಮ ಅಧ್ಯಕ್ಷರಾಗಿ ಸತತ ಆರು ವರ್ಷಗಳ ಕಾಲ ಒಕ್ಕೂಟವನ್ನು ಯಶಸ್ವಿಯಾಗಿ ಮುನ್ನಡೆಸಿದರು. ಈಗ ಅದರ ಗೌರವಾಧ್ಯಕ್ಷರಾಗಿದ್ದಾರೆ. ಇವರ ಸೇವಾ ಮನೋಭಾವ ಮತ್ತು ಉದಾರತೆಯನ್ನು ಪರಿಗಣಿಸಿ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ 2021-22ನೇ ವರ್ಷದ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಿತು.