ಪರ್ಯಾಯ ಪುತ್ತಿಗೆ ಶ್ರೀ ಕೃಷ್ಣಮಠ ಆಶ್ರಯದಲ್ಲಿ 13ರಂದು ವಿಶ್ವಶಾಂತಿ ಸಮಾವೇಶ ನಡೆಯಲಿದೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ಉಡುಪಿ: ಪರ್ಯಾಯ ಪುತ್ತಿಗೆ ಶ್ರೀ ಕೃಷ್ಣಮಠ ಆಶ್ರಯದಲ್ಲಿ 13ರಂದು ವಿಶ್ವಶಾಂತಿ ಸಮಾವೇಶ ನಡೆಯಲಿದೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ಅಂದು ಬೆಳಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ವಿಶೇಷ ಅಭ್ಯಾಗತರಾಗಿ ಅಮೆರಿಕಾದ ವರ್ಲ್ಡ್ ರಿಲೀಜಿಜಿಯಸ್ ಫಾರ್ ಪೀಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ.ವಿಲಿಯಂ ಎಫ್. ವಿಂಡ್ಲೆ, ‘ಒನ್ ವರ್ಲ್ಡ್ ಒನ್ ಫ್ಯಾಮಿಲಿ’ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ, ಆಂಧ್ರಪ್ರದೇಶದ ರಾಜ್ಯಪಾಲ ಅಬ್ದುಲ್ ನಝೀರ್ ಮೊದಲಾದವರು ಭಾಗವಹಿಸುವರು ಎಂದು ಶ್ರೀಗಳು ತಿಳಿಸಿದರು.ಶ್ರೀಮಠದ ಅಂತಾರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಅವರು, ಈ ಸಮಾವೇಶದಲ್ಲಿ ಚಿಂತಕರಾದ ರೋಹಿತ್ ಚಕ್ರತೀರ್ಥ ಹಾಗೂ ಡಾ.ಸುಧೀರ್ ರಾಜ್ ಕೆ. ವಿಚಾರ ಮಂಡಿಸುವರು. ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಲಿದ್ದು, ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸುವರು ಎಂದು ತಿಳಿಸಿದರು.ಅಪರಾಹ್ನ 4 ಗಂಟೆಗೆ ನಡೆಯುವ ಕಾರ್ಯಕ್ರಮ ದಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆಗಮಿಸುವರು. ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಅವರನ್ನು ಸನ್ಮಾನಿಸಲಾಗುವುದು ಎಂದವರು ವಿವರಗಳನ್ನು ನೀಡಿದರು.

ನಾಳೆ ಸಮಾರೋಪ:ನ.8ರಿಂದ ಆರಂಭವಾದ ಬೃಹತ್ ಗೀತೋತ್ಸವ ಡಿ.7ರಂದು ಸಮಾಪನಗೊಳ್ಳಲಿದ್ದು ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಆಗಮಿಸುವರು. ಡಿ.7ರಿಂದ 13ರ ವರೆಗೆ ಇಸ್ಕಾನ್ ನವರಿಂದ ಸತ್ಸಂಗ ಕಾರ್ಯಕ್ರಮ ನಡೆಯಲಿದೆ. ಡಿ.27ರಂದು ಶ್ರೀಕೃಷ್ಣನಿಗೆ‌ ಪಾರ್ಥಸಾರಥಿ ಸುವರ್ಣ ರಥ ಸಮರ್ಪಣೆ ನಡೆಯಲಿದೆ ಎಂದವರು ಹೇಳಿದರು.ಇಂದು ಗೀತಾಯಜ್ಞ

ಗೀತೋತ್ಸವ ಅಂಗವಾಗಿ ಶನಿವಾರ 18 ಕುಂಡಗಳಲ್ಲಿ ಗೀತಾ ಯಜ್ಞ ನಡೆಯಲಿದೆ. ರಾಜಾಂಗಣದಲ್ಲಿ ಬೆಳಿಗ್ಗೆ 6 ಗಂಟೆಯಿಂದ ಆರಂಭವಾಗುವ ಕಾರ್ಯಕ್ರಮದಲ್ಲಿ 18 ಮಂದಿ ಋತ್ವಿಜರು ಭಗವದ್ಗೀತೆಯ 18 ಅಧ್ಯಾಯಗಳ 700 ಶ್ಲೋಕಗಳ ಮೂಲಕ ಆಹುತಿ ನೀಡುವರು ಎಂದು ಪ್ರಸನ್ನ ಆಚಾರ್ಯ ವಿವರಿಸಿದರು.