ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಯುಗಾದಿ ಹಬ್ಬದ ಮಾರನೇ ದಿನವಾದ ಬುಧವಾರ ವರ್ಷದ ತೊಡಕನ್ನು ಖುಷಿಯಿಂದ ಆಚರಿಸುತ್ತಿರುವ ಜನಸಾಮಾನ್ಯರು ಗ್ರಾಮೀಣ ಪ್ರದೇಶದ ಗುಡ್ಡೆ ಬಾಡಿಗಾಗಿ ಮುಗಿ ಬಿದ್ದಿದ್ದು, ಭಾರೀ ಬೇಡಿಕೆ ಉಂಟಾಯಿತು.ವರ್ಷಕ್ಕೊಮ್ಮೆ ಯುಗಾದಿ ಹಬ್ಬದ ಮಾರನೇ ದಿನದ ವರ್ಷದ ತೊಡಕಿಗೆ ಜನಸಾಮಾನ್ಯರಲ್ಲಿ ಎಲ್ಲಿಲ್ಲದ ಆಸಕ್ತಿ. ಈ ವರ್ಷದ ತೊಡಕನ್ನು ದಿನಪೂರ್ತಿ ಯಾವುದೇ ಕೆಲಸ ಕಾರ್ಯ ಇದ್ದರೂ ಬದಿಗೊತ್ತಿ ಮಾಂಸಾಹಾರ ಸೇವನೆಯಲ್ಲಿ ಕಳೆಯುವುದು ಮೊದಲಿನಿಂದಲೂ ನಡೆದು ಬಂದಿರುವ ಪದ್ದತಿ.ಹಾಗಾಗಿ ವರ್ಷದ ತೊಡಕು ಆಚರಣೆಗೆ ಮಾಂಸದ ಅಂಗಡಿಗಳ ಮುಂದೆ ಮುಂಜಾನೆಯಿಂದಲೇ ಸರದಿ ಸಾಲು ನಿಲ್ಲುವುದುಂಟು. ಹಾಗೆಯೇ ಮಾಂಸದಂಗಡಿಗಳವರು ಸಹ ವರ್ಷದ ತೊಡಕಿನ ವಿಶೇಷವಾಗಿ ಪೆಂಡಾಲ್‌ಗಳನ್ನು ಹಾಕಿ ಹೆಚ್ಚಿನ ಸಂಖ್ಯೆಯಲ್ಲಿ ಮೇಕೆ, ಕುರಿಗಳ ಮಾಂಸ ಮಾರಾಟ ಮಾಡುವುದೂ ಉಂಟು.ನಗರ ಪ್ರದೇಶದ ಜನತೆ ಅದೇಕೋ ಏನೋ ಮಾಂಸದ ಅಂಗಡಿಗಳ ಬಗ್ಗೆ ಒಲವು ಕಡಿಮೆ ಮಾಡಿಕೊಂಡಿದ್ದು, ಹಳ್ಳಿಗಳಲ್ಲಿ ಸಿಗುವ ಗುಡ್ಡೆ ಬಾಡಿನತ್ತ ಚಿತ್ತ ಹರಿಸಿದ್ದಾರೆ.ಯುಗಾದಿ ಹಬ್ಬ ಮುಗಿದ ಬಳಿಕ ಮಧ್ಯರಾತ್ರಿಯಿಂದ ಹಳ್ಳಿಗಳಲ್ಲಿ ಶುರುವಾಗುವ ಮೇಕೆ, ಕುರಿಗಳ ಗುಡ್ಡೆ ಮಾಂಸ ಮಾರಾಟ ಇದೀಗ ನಗರ ಪ್ರದೇಶದ ಜನರನ್ನು ಆಕರ್ಷಿಸಿದೆ. ಹೀಗಾಗಿ ನಗರದ ಜನತೆಯೂ ಸಹ ತಮಗೆ ಪರಿಚಯಸ್ಥ ಹಳ್ಳಿಗಳ ಜನರೊಂದಿಗೆ ಗುಡ್ಡೆ ಬಾಡಿಗಾಗಿ ಬುಕ್ ಮಾಡಿಕೊಂಡು ಮಧ್ಯರಾತ್ರಿಯೇ ಹಳ್ಳಿಗಳೇ ಎಡತಾಕುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ.ನಗರದ ಹೊರವಲಯದ ಜಗನ್ನಾಥಪುರ, ಶೆಟ್ಟಿಹಳ್ಳಿ, ಗೂಳಹರಿವೆ, ಕೆಸರಡುಮಡು, ಹೊನ್ನುಡಿಕೆ, ಕುಮಂಚಿಪಾಳ್ಯ, ಮಲ್ಲಸಂದ್ರ, ಹೆಗ್ಗೆರೆ, ಬುಗುಡನಹಳ್ಳಿ ಸೇರಿದಂತೆ ಇನ್ನಿತರೆ ಹಳ್ಳಿಗಳಲ್ಲಿ ಗುಡ್ಡೆ ಬಾಡು ಸಿಗುವ ಸ್ಥಳಗಳಿಗೆ ನಗರ ಪ್ರದೇಶದ ಜನತೆ ಮುಗ್ಗಿ ಬಿದ್ದಿರುವ ದೃಶ್ಯಗಳು ಕಂಡು ಬಂದವು.ಗುಡ್ಡೆ ಬಾಡಿನಲ್ಲಿ ಒಂದು ಮೇಕೆ ಅಥವಾ ಕುರಿಯ ಎಲ್ಲ ಭಾಗದ ಮಾಂಸ ಲಭ್ಯ ಇರುವುದು ಸಹ ಇದಕ್ಕೆ ಬೇಡಿಕೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ವರ್ಷದ ತೊಡಕನ್ನು ಆಚರಿಸಲು ಹಳ್ಳಿಗಳಲ್ಲಿ ಬಾಡಿನ ಚೀಟಿ ಮಾಡಿಕೊಂಡಿರುತ್ತಾರೆ. ಇಂತಹ ಹಳ್ಳಿಗಳ ಮಾಹಿತಿ ಪಡೆದುಕೊಂಡಿರುವ ನಗರ ಪ್ರದೇಶದ ಜನತೆ ತಮ್ಮ ಸ್ನೇಹಿತರ ಮೂಲಕ ಗುಡ್ಡೆ ಬಾಡಿಗೆ ಬೇಡಿಕೆ ಇಟ್ಟಿರುವ ಪರಿಣಾಮ ಹಳ್ಳಿಗಳಲ್ಲೂ ಮಾಂಸ ಮಾರಾಟಕ್ಕೆ ಹೊಸ ಹುರುಪು ಬಂದಂತಾಗಿದೆ. ತಡರಾತ್ರಿಯೇ ಹಳ್ಳಿಗಳಿಗೆ ತೆರಳಿರುವ ನಗರದ ಜನತೆ ಬೆಳಗಿನ ಜಾವದ ವರೆಗೂ ಅಲ್ಲಿಯೇ ಕಾದು ಕುಳಿತು ಮಾಂಸ ಖರೀದಿಸಿಕೊಂಡು ನಗರಗಳತ್ತ ಮರಳಿದ್ದು ಕಂಡು ಬಂತು.
ಮಟನ್ ಸ್ಟಾಲ್ ಮುಂದೆ ಕ್ಯೂ:ನಗರ ಮತ್ತು ಪಟ್ಟಣ ಪ್ರದೇಶದ ಮಟನ್ ಅಂಗಡಿಗಳಲ್ಲೂ ಸಹ ಚಿಕನ್ , ಮಟನ್ ವ್ಯಾಪಾರ ಭರ್ಜರಿಯಾಗಿಯೇ ನಡೆದಿದ್ದು, ಹನುಮಂತಪುರ ಸೇರಿದಂತೆ ವಿವಿಧೆಡೆ ಇರುವ ಮಾಂಸದ ಅಂಗಡಿಗಳ ಮುಂದೆ ವಿಶೇಷವಾಗಿ ಪೆಂಡಾಲ್‌ಗಳನ್ನು ಹಾಕಲಾಗಿದ್ದು, ಜನರು ಮುಂಜಾನೆಯಿಂದಲೇ ಕ್ಯೂ ನಿಂತು ಮಾಂಸ ಖರೀದಿಸಿದ ದೃಶ್ಯ ಸಾಮಾನ್ಯವಾಗಿತ್ತು.
ಬೈಲರ್ ಕೋಳಿ ಕೆ.ಜಿ.ಗೆ 240, ಫಾರಂ ಕೋಳಿ ಕೆ.ಜಿ.ಗೆ 190, ಮಟನ್ ಕೆ.ಜಿಗೆ 750 ರೂ. ವರೆಗೆ ಮಾರಾಟವಾಯಿತು. ಒಟ್ಟಾರೆ ಬರದ ನಡುವೆಯೂ ಯುಗಾದಿ ಮತ್ತು ವರ್ಷದ ತೊಡಕನ್ನು ಸಂಭ್ರಮದಿಂದಲೇ ಆಚರಿಸಿದ್ದು ಕಂಡು ಬಂತು. ಯುಗಾದಿ ಆಚರಣೆ:ಬರ, ಮಿತಿ ಮೀರಿದ ಬಿಸಿಲಿನ ತಾಪದಿಂದ ತತ್ತರಿಸಿರುವ ಜನತೆ ಗಗನಕ್ಕೇರಿದ ಬೆಲೆ ಏರಿಕೆ ನಡುವೆಯೂ ಯುಗಾದಿ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಈ ಬಾರಿ ಎಂದೂ ಕಂಡರಿಯದ ಬರ ರಾಜ್ಯದಲ್ಲಿ ಆವರಿಸಿದೆ. ಬಿಸಿಲಿನ ಝಳಕ್ಕೆ ಜನಸಾಮಾನ್ಯರು ಬಸವಳಿದಿದ್ದಾರೆ. ಹಿಂದೆಂದಿಗಿಂತಲೂ ಬೆಲೆ ಏರಿಕೆ ದುಪ್ಪಟವಾಗಿದೆ. ಆದರೂ ಸಹ ಕಂಗೆಡದೆ ಹೊಸ ವರ್ಷದ ಯುಗಾದಿ ಹಬ್ಬವನ್ನು ಖುಷಿಯಿಂದ ಆಚರಿಸಿದ್ದು ಜಿಲ್ಲೆಯ ಎಲ್ಲೆಡೆ ಕಂಡು ಬಂತು.ಬೇವು ಬೆಲ್ಲ ತಿಂದು ಹಬ್ಬ ಆಚರಣೆ:ನಿನ್ನೆ ಮುಂಜಾನೆಯೇ ಸುಮಂಗಲಿಯರು, ಯುವತಿಯರು, ಯುವಕರು, ಮಕ್ಕಳು ಸೇರಿದಂತೆ ಮನೆ ಮಂದಿಯೆಲ್ಲ ಎದ್ದು ಮನೆಯ ಬಾಗಿಲಿಗೆ ಹಸಿರು ತೋರಣ ಕಟ್ಟಿ ದೇವರ ಪೂಜೆ ನೆರವೇರಿಸಿ, ಹೊಸ ಉಡುಪುಗಳನ್ನು ಧರಿಸಿ ಬೇವು-ಬೆಲ್ಲದೊಂದಿಗೆ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದ ನಂತರ ಪರಸ್ಪರ ಬೇವು-ಬೆಲ್ಲ ಹಂಚಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಯುಗಾದಿ ಎಂದರೆ ಮಕ್ಕಳು, ಯುವಕರಿಗೆ ಎಲ್ಲಿಲ್ಲದ ಸಂತಸ. ಹಬ್ಬದಂದು ಮೈಯಿಗೆಲ್ಲ ಎಣ್ಣೆ ಹಚ್ಚಿಕೊಂಡು ಬೇವಿನ ಎಲೆಯನ್ನು ಮೆತ್ತಿಕೊಂಡು ಬಿಸಿಲಿನ ಝಳದಲ್ಲಿ ಓಡಾಡಿ, ನಂತರ ಸ್ನಾನ ಮಾಡಿ ದೇವರಿಗೆ ಪೂಜೆ ಸಲ್ಲಿಸಿ ಹೊಸ ಉಡುಪುಗಳನ್ನು ಧರಿಸಿ ಹಬ್ಬದ ಸಂಭ್ರಮವನ್ನು ಸವಿದರು. ಹಬ್ಬದ ವಿಶೇಷವಾಗಿ ಹೋಳಿಗೆ, ಹೆಸರು ಬೇಳೆ, ಚಿತ್ರಾನ್ನ ಸೇರಿದಂತೆ ಇನ್ನತರೆ ವಿಶೇಷ ಖಾದ್ಯಗಳನ್ನು ಮನೆಯಲ್ಲಿ ಮಾಡಿಕೊಂಡು ಸವಿಯುವ ಮೂಲಕ ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.ಬರದ ನಡುವೆಯೇ ಶ್ರೀಕ್ರೋಧಿ ಸಂವತ್ಸರವನ್ನು ಸಡಗರ ಸಂಭ್ರಮದಿಂದಲೇ ಬರ ಮಾಡಿಕೊಂಡ ಜನಸಾಮಾನ್ಯರು ದೂರದ ಊರುಗಳಿಂದ ಬಂದ ಸ್ನೇಹಿತರು, ಸಂಬಂಧಿಕರೊಂದಿಗೆ ಕಾಲ ಕಳೆಯುತ್ತಾ ಹಬ್ಬವನ್ನು ಖುಷಿಯಿಂದ ಆಚರಿಸಿದರು.
ಎಂದೂ ಕಂಡರಿಯದ ಬಿಸಿಲಿನ ತಾಪ ಹೆಚ್ಚಾಗಿದ್ದರೂ ಯುಗಾದಿ ಪ್ರಯುಕ್ತ ನಗರ ಸೇರಿದಂತೆ ಜಿಲ್ಲೆಯಾದ್ಯಂತ ದೇವಾಲಯಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿಯೇ ಕಂಡು ಬಂದಿತು. ನಗರ, ಗ್ರಾಮೀಣ ಪ್ರದೇಶ ಸೇರಿದಂತೆ ಎಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿತ್ತು.