ಸಾರಾಂಶ
ಹೂವಿನಹಡಗಲಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಹತ್ತಾರು ಸಮಸ್ಯೆಗಳು ಎದುರಾಗಿವೆ.
ಜೆಸ್ಕಾಂ ಆರ್‌ಆರ್ ಸಂಖ್ಯೆ ಆಧಾರದ ಮೇಲೆ ರಚಿಸಿದ ಯುಎಚ್‌ಐಡಿ ಲೋಕೇಷನ್, ಸಮೀಕ್ಷೆ ಸಿಬ್ಬಂದಿಯನ್ನು ದಕ್ಷಿಣ ಆಫ್ರಿಕಾ ಮತ್ತು ಗುಜರಾತ್‌ಗೆ ಕರೆದುಕೊಂಡು ಹೋಗುತ್ತದೆ. ಅವರಿಗೆ ಕರೆ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಹೀಗಾದರೆ ನಾವು ಹೇಗೆ ಕೆಲಸ ಮಾಡಬೇಕು ಎಂದು ಸಿಬ್ಬಂದಿ ಗೊಂದಲದ ಗೂಡಿನಲ್ಲಿ ಸಿಲುಕಿದ್ದಾರೆ.
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭಗೊಂಡು 5 ದಿನಗಳು ಕಳೆದಿವೆ. ಅ. 7ರಂದು ಪೂರ್ಣಗೊಳಿಸಬೇಕು. ಆದರೆ ಸಮೀಕ್ಷೆಗೆ ನೀಡಿರುವ ಪರಿಕರಗಳೇ ಸರಿಯಾಗಿಲ್ಲ. ಈ ವರೆಗೂ 1ರಿಂದ 5ರ ವರೆಗೂ ಕೇವಲ ಆ್ಯಪ್‌ಗಳನ್ನು ಡೌನ್‌ಲೋಡ್ ಮಾಡುವುದೇ ಆಗಿದೆ ವಿನಃ ಕೆಲಸವಾಗುತ್ತಿಲ್ಲ. ಸಮಸ್ಯೆಗಳಿಗೆ ಸ್ಪಂದಿಸುವವರೇ ಇಲ್ಲ. ಆದರಿಂದ ನಮ್ಮ ಕೆಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ತಹಸೀಲ್ದಾರ್ ಜಿ. ಸಂತೋಷ ಕುಮಾರ್ ಅವರಿಗೆ ಸಮೀಕ್ಷೆ ಸಿಬ್ಬಂದಿ ಮನವಿ ಸಲ್ಲಿಸಿದ್ದಾರೆ.
ಮನೆ ಪಟ್ಟಿಯನ್ನು ಗಣತಿದಾರರಿಗೆ ನೀಡಬೇಕು, ಗಣತಿ ಮಾಡಲು ಆ್ಯಪ್ ಸರಿಪಡಿಸಬೇಕು. ಗಣತಿದಾರರು ಸಮೀಕ್ಷೆ ಮಾಡಲು 100 ಮನೆಗಳನ್ನು ಮಾತ್ರ ನೀಡಬೇಕಿದೆ. ಕೆಲವರಿಗೆ 75ರಿಂದ 80 ಮನೆಗಳು ಮಾತ್ರ ಇವೆ. ಶಿಕ್ಷಕರು ಕೆಲಸ ಮಾಡುವ ಸ್ಥಳದಲ್ಲೇ ಗಣತಿದಾರರನ್ನು ನೇಮಿಸಬೇಕು. ಬಿಎಲ್‌ಒಗಳಿಗೆ ಗಣತಿ ಕಾರ್ಯದಿಂದ ವಿನಾಯಿತಿ ನೀಡಬೇಕು, ಸರ್ವೇ ಆ್ಯಪ್ ಸಂಪೂರ್ಣ ಸರಿಯಾಗಿ ಆಗುವವರೆಗೂ ಗಣತಿ ಕಾರ್ಯವನ್ನು ಮುಂದೂಡಬೇಕು ಎಂಬುದು ಸೇರಿದಂತೆ ವಿವಿಧ ಸಮಸ್ಯೆಗಳನ್ನು ಸರಿಪಡಿಸಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.
ದ. ಆಫ್ರಿಕಾ, ಗುಜರಾತ್ ತೋರಿಸುವ ಯುಎಚ್‌ಐಡಿ! : ಮನೆಯ ಆರ್‌ಆರ್ ನಂಬರ್ ಆಧಾರದ ಮೇಲೆ ಜೆಸ್ಕಾಂ ರಚಿಸಿರುವ ಯುಎಚ್‌ಐಡಿ ಲೋಕೋಷನ್ ಹಾಕಿದರೆ ದಕ್ಷಿಣ ಆಫ್ರಿಕಾ ತೋರಿಸುತ್ತದೆ. ಉಳಿದಂತೆ 13 ಮನೆಗಳ ಲೊಕೇಷನ್ ಗುಜರಾತ್‌ಗೆ ಕರೆದುಕೊಂಡು ಹೋಗುತ್ತದೆ. ಕೆಲವು ಗ್ರಾಮಗಳಲ್ಲಿ ಲೋಕೇಷನ್ ಸ್ಮಶಾನ, ನದಿ, ಹಳ್ಳ ತೋರಿಸುತ್ತದೆ. ಸಮಸ್ಯೆ ಹೀಗಿರುವಾಗ ಸಮೀಕ್ಷೆ ಮಾಡಲು ಸಿಬ್ಬಂದಿ ಸುತ್ತಿ ಸುತ್ತಿ ರೋಸಿ ಹೋಗಿದ್ದಾರೆ. ಶಾಲೆಗಳು ರಜೆ ಇರುವ ಹಿನ್ನೆಲೆಯಲ್ಲಿ ಮನೆಯ ಮಾಲೀಕರು ಸೇರಿದಂತೆ ಯಾರೂ ಮನೆಯಲ್ಲಿ ಇಲ್ಲ. ಇಂತಹ ಸಮಸ್ಯೆಗಳು ಹತ್ತಾರು ಇವೆ. ಇವುಗಳನ್ನು ಮೊದಲು ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಎ. ಕೊಟ್ರಗೌಡ, ಪ್ರಾಥಮಿಕ ಶಾಲಾ ಬಡ್ತಿ ಮುಖ್ಯಗುರುಗಳ ಸಂಘದ ಅಧ್ಯಕ್ಷ ಡಿ. ವಿರೂಪಣ್ಣ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷ ವಿ.ಬಿ. ಜಗದೀಶ, ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಎಂ. ಶಿವಪ್ಪ, ಸರ್ಕಾರಿ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಕೆ. ಮಾದೇಶ್ವರ, ಎಚ್.ಎಂ. ಕೊಟ್ರಯ್ಯ, ಶಿವಪ್ರಕಾಶ, ತಿರುಕನಗೌಡ ಹಾಗೂ 25ಕ್ಕೂ ಹೆಚ್ಚು ಗಣತಿದಾರರು ಉಪಸ್ಥಿತರಿದ್ದರು.
ಮನೆಯ ಯುಎಚ್‌ಐಡಿ ನಂಬರ್ ಲೊಕೇಷನ್ ಹಾಕಿದರೆ ಅದು ದಕ್ಷಿಣ ಆಫ್ರಿಕಾ, ಗುಜರಾತ್ ತೋರಿಸುತ್ತದೆ. ಇನ್ನು ಕೆಲವಡೆ ಸ್ಮಶಾನ, ಹಳ್ಳ, ನದಿ ತೋರಿಸುತ್ತದೆ. ಹೀಗಾದರೆ ನಾವು ಹೇಗೆ ಸಮೀಕ್ಷೆ ಮಾಡಬೇಕು? ಎಂದು ಗಣತಿದಾರ ಬಿ. ಹನುಮಂತಪ್ಪ ಹೇಳಿದರು.
ಹತ್ತಾರು ಸಮಸ್ಯೆಗಳ ಮಧ್ಯೆ ಜಿಲ್ಲೆಯಲ್ಲಿ ಹೆಚ್ಚು ಗಣತಿಯಾಗಿದೆ. ಗಣತಿದಾರರಿಗೆ ಎದುರಾಗಿರುವ ಸಮಸ್ಯೆಗಳನ್ನು ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಬಗೆಹರಿಸುವ ಕೆಲಸ ಮಾಡುತ್ತೇವೆ ಎಂದು ಹೂವಿನಹಡಗಲಿ ತಹಸೀಲ್ದಾರ್ ಜಿ. ಸಂತೋಷಕುಮಾರ್ ಹೇಳಿದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))