ಉಜಿರೆಯ ಐಟಿ ಕಾಲೇಜಿನ ಕ್ರೀಡಾಂಗಣದಲ್ಲಿ ಮೂರು ದಿನಗಳ ಅಂತರ್ ಕಾಲೇಜು ಮಂಗಳೂರು ವಿಭಾಗಮಟ್ಟ ಹಾಗು ರಾಜ್ಯ ಮಟ್ಟದ ಮಹಿಳೆಯರ ತ್ರೋಬಾಲ್ ಪಂದ್ಯಾಟ ನಡೆಯಿತು.
ಬೆಳ್ತಂಗಡಿ: ಸೋಲು ಮತ್ತು ಗೆಲುವು ಪಂದ್ಯಾಟಗಳಲ್ಲಿ ಸಹಜ ಆದರೆ ಕ್ರೀಡೆಗಳಲ್ಲಿ ಭಾಗವಹಿಸುವಿಕೆ ಹೊಸ ಅನುಭವಗಳನ್ನು ನೀಡುತ್ತದೆ, ನಮ್ಮೊಳಗಿನ ಆತ್ಮ ವಿಶ್ವಾಸ ಇಮ್ಮಡಿಗೊಳಿಸುತ್ತದೆ. ಕಲಿಕೆಯೆಂಬುದು ಜೀವನದಲ್ಲಿ ನಿರಂತರ, ವಿದ್ಯಾರ್ಥಿ ಜೀವನದಿಂದಲೇ ಇದಕ್ಕೆ ಅಡಿಪಾಯವನ್ನು ರೂಪಿಸಿಕೊಳ್ಳಬೇಕು ಎಂದು ಅಂತಾರಾಷ್ಟ್ರೀಯ ಚೆಸ್ ಕ್ರೀಡಾಪಟು ಧರ್ಮಸ್ಥಳದ ಶಾಬ್ದಿಕ್ ವರ್ಮಾ ಅಭಿಪ್ರಾಯಪಟ್ಟಿದ್ದಾರೆ.ಉಜಿರೆಯ ಎಸ್.ಡಿ.ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಹಾಗು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸಹಯೋಗದಲ್ಲಿ ಉಜಿರೆಯ ಐಟಿ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಮೂರು ದಿನಗಳ ಅಂತರ್ ಕಾಲೇಜು ಮಂಗಳೂರು ವಿಭಾಗಮಟ್ಟ ಹಾಗು ರಾಜ್ಯ ಮಟ್ಟದ ಮಹಿಳೆಯರ ತ್ರೋಬಾಲ್ ಪಂದ್ಯಾಟ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಎಸ್.ಡಿ.ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ಪ್ರಾಚಾರ್ಯ ಡಾ. ಅಶೋಕ್ ಕುಮಾರ್ ಟಿ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡಾ ಪಾಠದ ಜೊತೆಗೆ ಜೀವನದ ಪಾಠವನ್ನು ಕಲಿಯಬೇಕು ಎಂದರು.ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ ಜನಾರ್ಧನ, ಕ್ರೀಡಾಂಗಣದ ಎರಡು ತ್ರೋಬಾಲ್ ಅಂಕಣಗಳಿಗೆ ರಿಬ್ಬನ್ ಎಳೆದು ಚಾಲನೆ ನೀಡಿದರು.ಉದ್ಘಾಟನಾ ವೇದಿಕೆಯಲ್ಲಿ ಎಸ್.ಡಿ.ಎಂ ಕ್ರೀಡಾ ಸಂಘದ ಕಾರ್ಯದರ್ಶಿ ರಮೇಶ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ನಿವೇದಿತಾ ನಿರೂಪಿಸಿದರು. ವಿದ್ಯಾರ್ಥಿನಿ ಅಪೇಕ್ಷಾ ಸ್ವಾಗತಿಸಿದರು. ವಿದ್ಯಾರ್ಥಿನಿ ಅರ್ಚನ ವಂದಿಸಿದರು. 3 ದಿನಗಳ ಅಂತರ್ ಕಾಲೇಜು ಮತ್ತು ರಾಜ್ಯ ಮಟ್ಟದ ತ್ರೋಬಾಲ್ ಪಂದ್ಯಾಟವನ್ನು ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಪ್ರಭಾಕರ್ ಸಂಯೋಜಿಸಿದ್ದಾರೆ.