ಉಕ ಸಿವಿಲ್ ಗುತ್ತಿಗೆದಾರರ ₹20 ಸಾವಿರ ಕೋಟಿ ಬಿಲ್‌ ಬಾಕಿ

| Published : Jul 02 2025, 11:47 PM IST / Updated: Jul 02 2025, 11:48 PM IST

ಸಾರಾಂಶ

ಲೋಕೋಪಯೋಗಿ ಇಲಾಖೆಯ ₹4 ಸಾವಿರ ಕೋಟಿ, ಬೃಹತ್‌ ನೀರಾವರಿ ಇಲಾಖೆ ₹5 ಸಾವಿರ ಕೋಟಿ, ಸಣ್ಣ ನೀರಾವರಿ ಇಲಾಖೆಯ ₹2 ಸಾವಿರ ಕೋಟಿ.. ಹೀಗೆ ವಿವಿಧ ಇಲಾಖೆಗಳ ಸುಮಾರು ₹6 ಸಾವಿರ ಕೋಟಿ ಸೇರಿ ಒಟ್ಟು ₹20 ಸಾವಿರ ಕೋಟಿ ಬಾಕಿ ಇದೆ. ಗುತ್ತಿಗೆದಾರರು ಬ್ಯಾಂಕ್‌ನಲ್ಲಿ ಸಾಲ ಮಾಡಿದ್ದು ಪಾವತಿಸುವ ವರೆಗೆ ಅವರ ಯಂತ್ರೋಪಕರಣ ಹಾಗೂ ಆಸ್ತಿಯನ್ನು ಜಪ್ತಿ ಮಾಡುವ ಸ್ಥಿತಿಗೆ ಬಂದಿದೆ.

ಧಾರವಾಡ: ಸರ್ಕಾರಿ ಕಾಮಗಾರಿಗಳನ್ನು ನಿರ್ವಹಿಸುತ್ತಿರುವ ಉತ್ತರ ಕರ್ನಾಟಕದ ಗುತ್ತಿಗೆದಾರರ ಸುಮಾರು ₹20 ಸಾವಿರ ಕೋಟಿ ಹಣವನ್ನು ರಾಜ್ಯ ಸರ್ಕಾರ ಬಾಕಿ ಇರಿಸಿಕೊಂಡಿದ್ದು, ಗುತ್ತಿಗೆದಾರರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ ಎಂದು ಉತ್ತರ ಕರ್ನಾಟಕ ಸಿವಿಲ್‌ ಗುತ್ತಿಗೆದಾರರ ಸಂಘದ ಅಧ್ಯಕ್ಷ ಸುಭಾಸ ಪಾಟೀಲ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ಲೋಕೋಪಯೋಗಿ ಇಲಾಖೆಯ ₹4 ಸಾವಿರ ಕೋಟಿ, ಬೃಹತ್‌ ನೀರಾವರಿ ಇಲಾಖೆ ₹5 ಸಾವಿರ ಕೋಟಿ, ಸಣ್ಣ ನೀರಾವರಿ ಇಲಾಖೆಯ ₹2 ಸಾವಿರ ಕೋಟಿ.. ಹೀಗೆ ವಿವಿಧ ಇಲಾಖೆಗಳ ಸುಮಾರು ₹6 ಸಾವಿರ ಕೋಟಿ ಸೇರಿ ಒಟ್ಟು ₹20 ಸಾವಿರ ಕೋಟಿ ಬಾಕಿ ಇದೆ. ಗುತ್ತಿಗೆದಾರರು ಬ್ಯಾಂಕ್‌ನಲ್ಲಿ ಸಾಲ ಮಾಡಿದ್ದು ಪಾವತಿಸುವ ವರೆಗೆ ಅವರ ಯಂತ್ರೋಪಕರಣ ಹಾಗೂ ಆಸ್ತಿಯನ್ನು ಜಪ್ತಿ ಮಾಡುವ ಸ್ಥಿತಿಗೆ ಬಂದಿದೆ. ಈ ವಿಷಯವಾಗಿ ಗುತ್ತಿಗೆದಾರರು ಆತ್ಮಹತ್ಯೆಗೆ ಶರಣಾದರೂ ಅಚ್ಚರಿ ಏನಿಲ್ಲ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಬಾಕಿ ಬಿಲ್‌ ಪಾವತಿಸುವ ವರೆಗೂ ಹೊಸ ಟೆಂಡರ್‌ ಕರೆಯಬಾರದು. ಹಿರಿತನದ ಆಧಾರದ ಮೇಲೆ ಬಾಕಿ ಬಿಲ್‌ ಪಾವತಿಸಬೇಕೆಂದು ಆಗ್ರಹಿಸಿದರು.

ಸರ್ಕಾರಿ ಗುತ್ತಿಗೆದಾರರಿಗೆ ಎಂಡಿಪಿ (ಮಿನರಲ್‌ ಡಿಸ್‌ಪ್ಯಾಚ್‌ ಪರ್ಮಿಟ್‌)ದಿಂದ ವಿನಾಯ್ತಿ ನೀಡಬೇಕು. ಇಲ್ಲವೇ ಸರ್ಕಾರಕ್ಕೆ ಜಿಎಸ್‌ಟಿ ಪಾವತಿಸುವ ರೀತಿ ರಾಜಧನವನ್ನು ಸರ್ಕಾರಕ್ಕೆ ನೇರವಾಗಿ ಪಾವತಿಸಲು ಅವಕಾಶ ಕಲ್ಪಿಸಬೇಕು. ಇಲ್ಲವೇ, ಜಲ್ಲಿಕಲ್ಲು, ಮರಳು, ಮೊರಂಗಳನ್ನು ಸರ್ಕಾರವೇ ಗುತ್ತಿಗೆದಾರರಿಗೆ ಪೂರೈಸಬೇಕೆಂದ ಸುಭಾಸ ಪಾಟೀಲ, ಉತ್ತರ ಕರ್ನಾಟಕದ ಗುತ್ತಿಗೆದಾರರ ಸಾಕಷ್ಟು ಸಮಸ್ಯೆಗಳಿವೆ. ಈ ಬಗ್ಗೆ ಚರ್ಚಿಸಲು ಪಿಡಬ್ಲೂಡಿ ಇಲಾಖೆ ಉತ್ತರ ವಲಯದ ಮುಖ್ಯ ಅಭಿಯಂತರರು ಪಿಡಬ್ಲೂಡಿ ಸಚಿವರ ಮತ್ತು ಗುತ್ತಿಗೆದಾರರ ಸಭೆ ಏರ್ಪಡಿಸಬೇಕು. ಈ ಮೂಲಕವಾದರೂ ನಮ್ಮ ಸಮಸ್ಯೆಗಳಿಗೆ ಪರಿಹಾರ ದೊರೆಯಲಿ ಎಂದರು.

ಮಾಮೂಲಿ ಕೇಳಬೇಡಿ: ಕೆಲವು ಸರ್ಕಾರಿ ಕಾಮಗಾರಿಗಳು ಜರೂರು ಇದ್ದು, ಡಾಂಬರ್‌ ಮಿಕ್ಸ್‌ ಅಂತಹ ವಾಹನಗಳು ದಿನದ ಯಾವುದೇ ಸಮಯದಲ್ಲಿ ನಗರದಲ್ಲಿ ಸಂಚರಿಸಿದರೆ ಟ್ರಾಫಿಕ್ ಪೊಲೀಸರು ತಡೆ ಹಿಡಿಯುತ್ತಿದ್ದಾರೆ. ಜತೆಗೆ ಮಾಮೂಲಿ ಕೇಳುತ್ತಿರುವ ಬಗ್ಗೆಯೂ ದೂರುಗಳಿದ್ದು, ಈ ಬಗ್ಗೆಯೂ ಪೊಲೀಸ್ ಆಯುಕ್ತರು ಕ್ರಮ ಕೈಗೊಳ್ಳಬೇಕು. ತ್ವರಿತವಾಗಿ ದರಪಟ್ಟಿ ನವೀಕರಿಸಬೇಕು. ಜತೆಗೆ ಗುತ್ತಿಗೆದಾರರ ಪರವಾನಗಿ ನವೀಕರಿಸುವಾಗ ಅವಧಿ ಮುಗಿದ ಮೇಲೆ ಹಾಕುತ್ತಿರುವ ದಂಡದ ಹಣವನ್ನು ಕಡಿಮೆ ಮಾಡಬೇಕೆಂದು ಆಗ್ರಹಿಸಿದರು.

ಪಿಡಬ್ಲೂಡಿ ಇಲಾಖೆಯಲ್ಲಿ ₹2 ಕೋಟಿ ಮೀರಿದ ರಸ್ತೆ ಕಾಮಗಾರಿಗೆ ಐದು ವರ್ಷ ನಿರ್ವಹಣೆ ನಿಯಮ ಇದೆ. ರಸ್ತೆ ಮೇಲ್‌ಮೈ ಡಾಂಬರ್ ಹೊದಿಕೆ ಮಾತ್ರ ತೆಗೆದು ಹೊಸದಾಗಿ ಡಾಂಬರೀಕರಣ ಮಾಡುವ ರಸ್ತೆ ಕಾಮಗಾರಿಗೂ ಈ ನಿಯಮ ಹೇರುತ್ತಿರುವುದು ಅವೈಜ್ಞಾನಿಕ. ಇಂತಹ ರಸ್ತೆಗಳು ಎರಡು ವರ್ಷಕ್ಕಿಂತ ಹೆಚ್ಚಿನ ಬಾಳಿಕೆ ಬರುವುದಿಲ್ಲ. ₹2 ಕೋಟಿಗೆ ಒಳಗಿರುವ ಕಾಮಗಾರಿಗೆ ಒಂದು ವರ್ಷ ನಿರ್ವಹಣೆ ಸಮಯ ನೀಡಬೇಕೆಂದು ಸುಭಾಸ ಪಾಟೀಲ ಒತ್ತಾಯಿಸಿದರು. ಹಲವು ಕಾಮಗಾರಿಗೆ ಅಂದಾಜು ಪತ್ರಿಕೆ ಒಟ್ಟುಗೂಡಿಸಿ ಸಾಕಷ್ಟು ಕಾಮಗಾರಿ ಪ್ಯಾಕೇಜ್‌ ಟೆಂಡರ್‌ ಪದ್ಧತಿ ನಿಲ್ಲಿಸಬೇಕು ಎಂಬ ಮನವಿ ಸಹ ಸಲ್ಲಿಸಿದರು.

ಈ ಎಲ್ಲ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿಗಳು, ಪಿಡಬ್ಲೂಡಿ ಸಚಿವರು ಸೇರಿದಂತೆ ಸಂಬಂಧಿಸಿದ ಎಲ್ಲರಿಗೂ ನೀಡಲಾಗಿದೆ. ಆದಷ್ಟು ಶೀಘ್ರ ಸಮಸ್ಯೆಗಳಿಗೆ ಪರಿಹಾರ ನೀಡದೇ ಹೋದಲ್ಲಿ ಸರ್ಕಾರಿ ಕಾಮಗಾರಿಗಳನ್ನು ಬಂದ್‌ ಮಾಡಿ ಗುತ್ತಿಗೆದಾರರು ಹೋರಾಟ ಮಾಡಬೇಕಾಗುತ್ತದೆ ಎಂದು ಸುಭಾಸ ಪಾಟೀಲ ಎಚ್ಚರಿಕೆ ನೀಡಿದರು.