ಉಳ್ಳಾಲ ತಾಲೂಕಿನ ಕೆರೆಬೈಲ್ ಪ್ರದೇಶದಲ್ಲಿ ಖಾಸಗಿ ಎಸ್ಟೇಟ್‌ನ ಆವರಣಗೋಡೆ ಕುಸಿದು ಮನೆ ಧರಾಶಾಹಿಯಾದ ಸ್ಥಳಕ್ಕೆ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಬುಧವಾರ ಸಂಜೆ ಜಿಲ್ಲಾಧಿಕಾರಿ ದರ್ಶನ್ ಕೆ.ವಿ. ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಉಳ್ಳಾಲ: ಉಳ್ಳಾಲ ತಾಲೂಕಿನ ಕೆರೆಬೈಲ್ ಪ್ರದೇಶದಲ್ಲಿ ಖಾಸಗಿ ಎಸ್ಟೇಟ್‌ನ ಆವರಣಗೋಡೆ ಕುಸಿದು ಮನೆ ಧರಾಶಾಹಿಯಾದ ಸ್ಥಳಕ್ಕೆ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಬುಧವಾರ ಸಂಜೆ ಜಿಲ್ಲಾಧಿಕಾರಿ ದರ್ಶನ್ ಕೆ.ವಿ. ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಸ್ಥಳೀಯ ನಿವಾಸಿಗಳೊಂದಿಗೆ ಮಾತುಕತೆ ನಡೆಸಿದ ಸಚಿವರಿಗೆ, ಖಾಸಗಿ ಎಸ್ಟೇಟ್ ಮಾಲೀಕರ ವಿರುದ್ಧ ಹಲವು ದೂರುಗಳು ಕೇಳಿಬಂದವು. ಎಸ್ಟೇಟ್ ನಿರ್ಮಾಣದ ಬಳಿಕ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ಕಲುಷಿತ ನೀರು ಸರಬರಾಜಾಗುತ್ತಿರುವುದು, ಅವೈಜ್ಞಾನಿಕವಾಗಿ ಆವರಣಗೋಡೆ ನಿರ್ಮಿಸಿ ಸ್ಥಳೀಯರಿಗೆ ನಿರಂತರ ತೊಂದರೆ ಉಂಟು ಮಾಡುತ್ತಿರುವುದು ಹಾಗೂ ಜಾಗ ಖಾಲಿ ಮಾಡಿಸುವ ಉದ್ದೇಶದಿಂದ ಒತ್ತಡ ತರುತ್ತಿರುವ ಬಗ್ಗೆ ನಿವಾಸಿಗಳು ಸಚಿವರ ಗಮನಕ್ಕೆ ತಂದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಯು.ಟಿ. ಖಾದರ್, ಕೆರೆಬೈಲ್‌ನ ಖಾಸಗಿ ಎಸ್ಟೇಟ್‌ನ ಆವರಣಗೋಡೆ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದೆ. ಇದೇ ಗೋಡೆಯಿಂದ ಈ ಹಿಂದೆಯೂ ಕೆಲ ಮನೆಗಳಿಗೆ ಹಾನಿಯಾಗಿತ್ತು. ಇದೀಗ ಮತ್ತೊಮ್ಮೆ ಗೋಡೆ ಕುಸಿದು ಸ್ಥಳೀಯ ನಿವಾಸಿ ಕಿಶೋರ್ ಅವರ ಮನೆ ಸಂಪೂರ್ಣ ನೆಲಸಮಗೊಂಡಿದೆ. ಘಟನೆ ಸಂಭವಿಸಿದ ವೇಳೆ ಕುಟುಂಬದವರು ಮನೆಯಲ್ಲಿ ಇಲ್ಲದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ ಎಂದು ಹೇಳಿದರು.

ಇಂತಹ ಅಪಾಯಕಾರಿ ಪರಿಸ್ಥಿತಿಗಳನ್ನು ತಡೆಯಲು ಪ್ರತಿವರ್ಷ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಜಿಲ್ಲಾಡಳಿತದ ಜವಾಬ್ದಾರಿಯಾಗಿದ್ದು, ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗೆ ಸೂಚನೆ ನೀಡಿರುವುದಾಗಿ ಸಚಿವರು ತಿಳಿಸಿದರು.

ಅಪಾಯದ ಭೀತಿಯಲ್ಲಿರುವ 14 ಮನೆಗಳ ಕುಟುಂಬಗಳನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲು ಸೂಚಿಸಲಾಗಿದ್ದು, ಅವರಿಗೆ ಒಂದು ತಿಂಗಳ ಮನೆ ಬಾಡಿಗೆಯನ್ನು ಹಾಗೂ ತಲಾ ₹10 ಸಾವಿರ ನೆರವನ್ನು ವೈಯಕ್ತಿಕವಾಗಿ ಭರಿಸುವುದಾಗಿ ಸಚಿವ ಖಾದರ್ ಘೋಷಿಸಿದರು.

ಕೆರೆಬೈಲ್ ಪ್ರದೇಶದ ಸಮಸ್ಯೆಗಳ ಕುರಿತು ಶೀಘ್ರದಲ್ಲೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳುವುದಾಗಿ ಸಚಿವ ಖಾದರ್ ಭರವಸೆ ನೀಡಿದರು.ಕಾಂಗ್ರೆಸ್ ಮುಖಂಡ ಪದ್ಮರಾಜ್ ಆರ್. ಪೂಜಾರಿ, ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಉಳ್ಳಾಲ ತಾಪಂ ಕಾರ್ಯನಿರ್ವಹಣಾಧಿಕಾರಿ ಗುರುದತ್ತ್, ಉಳ್ಳಾಲ ನಗರಸಭೆ ಪೌರಾಯುಕ್ತ ಸಂತೋಷ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.