ಸಿಗುತ್ತಿಲ್ಲ ಕನ್ಯೆಯರು: ಮದುವೆಗೆ ವಂಚಿಸುತ್ತಿರುವ ಖದೀಮರು

| Published : Dec 17 2024, 01:01 AM IST

ಸಾರಾಂಶ

ಹವಾಮಾನ ವೈಪರೀತ್ಯ, ಕೃಷಿ ಕೂಲಿಕಾರ್ಮಿಕರ ಕೊರತೆ, ಉತ್ಪನ್ನಗಳಿಗೆ ಯೋಗ್ಯ ಬೆಲೆ ಸಿಗದೇ ಸಮಸ್ಯೆಗಳಿಂದ ಬಳಲಿದ ಅನ್ನದಾತನಿಗೆ ಪುತ್ರರ ಮದುವೆ ಎಂಬ ಪೆಡಂಭೂತವಾಗಿ ಕಾಡತೊಡಗಿದೆ. ಕೃಷಿ ಕಾಯಕ ಮಾಡುವ ಯುವಕರನ್ನು ವರಿಸಲು ಯುವತಿಯರು ನಿರಾಕರಿಸುತ್ತಿದ್ದು, ಗ್ರಾಮೀಣ ಭಾಗದಲ್ಲಿ ದೊಡ್ಡ ಸಾಮಾಜಿಕ ಸಮಸ್ಯೆ ಸೃಷ್ಟಿಸಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ವಂಚಕರ ಗ್ಯಾಂಗ್‌ ಹಣ ಪಡೆದು ನಕಲಿ ಮದುವೆ ಮಾಡಿಸಿ ರೈತರನ್ನು ವಂಚಿಸುತ್ತಿರುವ ವ್ಯವಸ್ಥಿತ ಜಾಲ ಕಾರ್ಯನಿರ್ವಹಿಸುತ್ತಿದೆ.

ಸದಾನಂದ ಮಜತಿ

ಕನ್ನಡಪ್ರಭ ವಾರ್ತೆ ಬೆಳಗಾವಿ

ಹವಾಮಾನ ವೈಪರೀತ್ಯ, ಕೃಷಿ ಕೂಲಿಕಾರ್ಮಿಕರ ಕೊರತೆ, ಉತ್ಪನ್ನಗಳಿಗೆ ಯೋಗ್ಯ ಬೆಲೆ ಸಿಗದೇ ಸಮಸ್ಯೆಗಳಿಂದ ಬಳಲಿದ ಅನ್ನದಾತನಿಗೆ ಪುತ್ರರ ಮದುವೆ ಎಂಬ ಪೆಡಂಭೂತವಾಗಿ ಕಾಡತೊಡಗಿದೆ. ಕೃಷಿ ಕಾಯಕ ಮಾಡುವ ಯುವಕರನ್ನು ವರಿಸಲು ಯುವತಿಯರು ನಿರಾಕರಿಸುತ್ತಿದ್ದು, ಗ್ರಾಮೀಣ ಭಾಗದಲ್ಲಿ ದೊಡ್ಡ ಸಾಮಾಜಿಕ ಸಮಸ್ಯೆ ಸೃಷ್ಟಿಸಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ವಂಚಕರ ಗ್ಯಾಂಗ್‌ ಹಣ ಪಡೆದು ನಕಲಿ ಮದುವೆ ಮಾಡಿಸಿ ರೈತರನ್ನು ವಂಚಿಸುತ್ತಿರುವ ವ್ಯವಸ್ಥಿತ ಜಾಲ ಕಾರ್ಯನಿರ್ವಹಿಸುತ್ತಿದೆ.

ಗ್ರಾಮೀಣ ಭಾಗಗಳಲ್ಲಿ ಇಂತಹ ವಂಚನೆಯ ಅನೇಕ ಪ್ರಕರಣಗಳು ವರದಿಯಾಗುತ್ತಿದ್ದರೂ ಕುಟುಂಬದ ಗೌರವ ಮಣ್ಣುಪಾಲಾಗುತ್ತದೆ ಎಂಬ ಕಾರಣಕ್ಕೆ ಈ ವಂಚನೆ ಪ್ರಕರಣಗಳು ಪೊಲೀಸ್‌ ಠಾಣೆಯ ಮೆಟ್ಟಿಲು ಏರುತ್ತಿಲ್ಲ. ಇದರಿಂದ ವಂಚಕರು ರಾಜಾರೋಷವಾಗಿ ಇಂತಹ ಜಾಲಕ್ಕೆ ರೈತರನ್ನು ಕೆಡವಿ ಹಣ ದೋಚುತ್ತಿದ್ದಾರೆ.ಹೇಗೆ ನಡೆಯುತ್ತೆ ವಂಚನೆ ದಂಧೆ?

ಮದುವೆ ಬ್ರೋಕರ್‌ಗಳ ರೀತಿ ಕಾರ್ಯ ನಿರ್ವಹಿಸುವ ಈ ವಂಚಕರ ಗ್ಯಾಂಗನಲ್ಲಿ ಮಹಿಳೆ ಹಾಗೂ ಪುರುಷರಿರುತ್ತಾರೆ. ಆಮಿಷಕ್ಕೆ ಬಲಿಯಾಗುವ ಸ್ಥಳೀಯರನ್ನು ಸಂಪರ್ಕ ಸಾಧಿಸಿ ಕನ್ಯೆಯರ ಬಗ್ಗೆ ಹೇಳುತ್ತಾರೆ. ಸ್ಥಳೀಯ ಬ್ರೋಕರ್‌ಗಳು ಕನ್ಯೆಯರು ಸಿಗದೆ ಪರದಾಡುತ್ತಿರುವ ಯುವಕರನ್ನು ಸಂಪರ್ಕಿಸಿ ಈ ಬಗ್ಗೆ ಪ್ರಸ್ತಾಪಿಸಿ ವ್ಯವಹಾರ ಕುದುರಿಸಿ, ನಗರದ ಲಾಡ್ಜ್‌ ಅಥವಾ ಸಾರ್ವಜನಿಕ ಪ್ರದೇಶಕ್ಕೆ ಕರೆಸಿಕೊಂಡು 10-15 ಯುವತಿಯರ ಭಾವಚಿತ್ರ ತೋರಿಸಿ ವ್ಯವಹಾರ ಕುದುರಿಸುತ್ತಾರೆ. ಕುಟುಂಬದವರು ಹೇಳಿದ ದಿನ ದೇವಸ್ಥಾನದಲ್ಲಿ ಮದುವೆಗೆ ಯುವತಿಯನ್ನು ಕರೆತಂದು ಸ್ಥಳದಲ್ಲೇ ಹಣ ಪಡೆದು ಕನ್ಯಾದಾನ ಮಾಡಿಕೊಡುತ್ತಾರೆ. ಮದುವೆಯಾದ ಯುವತಿ ಎರಡ್ಮೂರು ದಿನ ಯುವಕನ ಮನೆಯಲ್ಲಿ ಕಳೆದು ಯಾವುದೋ ನೆಪ ಹೇಳಿ ಅಲ್ಲಿಂದ ಎಸ್ಕೇಪ್‌ ಆಗುತ್ತಾಳೆ. ಕುಟುಂಬದ ಮರ್ಯಾದೆಯ ಕಾರಣ ತಾವು ವಂಚನೆಗೆ ಒಳಗಾಗಿರುವುದು ಗೊತ್ತಾದರೂ ಯಾರ ಬಳಿಯೂ ಹೇಳಿಕೊಳ್ಳುತ್ತಿಲ್ಲ. ಆದರೂ, ಈ ವಿಷಯ ಸಂಬಂಧಿಕರಿಂದ ಬಹಿರಂಗವಾಗುತ್ತಿವೆ. ಈ ಹಣದಲ್ಲಿ ವಂಚಕರು ಸ್ಥಳೀಯ ಬ್ರೋಕರ್ ಗಳಿಗೆ ಕಮಿಷನ್‌ ಕೊಡುತ್ತಾರೆ.ಈಚೆಗೆ ಬೈಲಹೊಂಗಲ ತಾಲೂಕಿನ ಗ್ರಾಮವೊಂದರಲ್ಲಿ 6 ತಿಂಗಳ ಅಂತರದಲ್ಲಿ ಒಂದೇ ಕುಟುಂಬ ಇಬ್ಬರು ಯುವಕರಿಗೆ ಈ ರೀತಿಯ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಮೊದಲ ಯುವಕನಿಗೆ ₹2 ಲಕ್ಷ ಕೊಟ್ಟು ಮದುವೆ ಮಾಡಿಕೊಂಡು ಬಂದ ಮಹಾರಾಷ್ಟ್ರದ ಯುವತಿ ಐದು ದಿನಗಳಲ್ಲೇ ಯುವಕನ ಯಾಮಾರಿಸಿ ಪರಾರಿಯಾದರೆ, ಈಚೆಗಷ್ಟೇ ಎರಡನೇ ಪುತ್ರನಿಗೆ ₹1.50 ಲಕ್ಷ ಕೊಟ್ಟು ವರಿಸಿದ್ದ ಕೊಪ್ಪಳ ಭಾಗದ ವಧು ಮೂರನೇ ದಿನಕ್ಕೆ ಮನೆಯಿಂದ ಎಸ್ಕೇಪ್‌ ಆಗಿರುವ ಘಟನೆ ಬೆಳಕಿಗೆ ಬಂದಿದೆ. ಆರು ತಿಂಗಳಲ್ಲಿ ಸುಮಾರು 2 ಲಕ್ಷ ಕಳೆದುಕೊಂಡ ಈ ಕುಟುಂಬ ಮರ್ಯಾದೆಗೆ ಅಂಜಿ ಯಾರ ಮುಂದೆಯೂ ಸಮಸ್ಯೆ ಹೇಳಿಕೊಳ್ಳುತ್ತಿಲ್ಲ. ಇದೇ ರೀತಿಯ ಘಟನೆಗಳು ಬೇರೆ ಬೇರೆ ಹಳ್ಳಿಗಳಲ್ಲಿ ನಡೆದಿರುವುದು ಚರ್ಚೆಗೆ ಗ್ರಾಸವಾಗಿದೆ.ಕನ್ಯಾದಾನಕ್ಕೆ ₹1.50 ದಿಂದ ₹2 ಲಕ್ಷ ಫಿಕ್ಸ್!

ಗ್ರಾಮೀಣ ಪ್ರದೇಶದಲ್ಲಿ ರೈತನ ಮಕ್ಕಳಿಗೆ ಕನ್ಯೆ ಸಿಗದಿರುವುದು ದೊಡ್ಡ ಸಾಮಾಜಿಕ ಸಮಸ್ಯೆ ಆಗಿ ಪರಿಣಮಿಸಿದೆ. ಯಾವುದೇ ಗ್ರಾಮಕ್ಕೆ ಹೋದರೂ ಮದುವೆ ವಯೋಮಿತಿ ಮೀರಿದ ಯುವಕರ ದಂಡೇ ಕಾಣಸಿಗುತ್ತಿದೆ. ಪ್ರತಿಷ್ಠಿತ ಕುಟುಂಬ, ಕುಟುಂಬದಲ್ಲಿ ಒಬ್ಬರಾದರೂ ನೌಕರಿಯಲ್ಲಿದ್ದು ಸ್ಥಿತಿವಂತರಾಗಿದ್ದರೆ ಹಾಗೂ ಸಂಬಂಧಿಕರಲ್ಲಿ ಕನ್ಯೆಯಿದ್ದರೆ ಮಾತ್ರ ರೈತನ ಮಕ್ಕಳಿಗೆ ಕಂಕಣ ಭಾಗ್ಯ ಕೂಡಿಬರುತ್ತಿದೆ. ಇಲ್ಲದಿದ್ದರೆ 8-10 ವರ್ಷದ ಅಲೆದರೂ ಕನ್ಯೆಯರು ಸಿಗುತ್ತಿಲ್ಲ. ಅನೇಕರು ಮದುವೆ ವಯಸ್ಸು ಮುಗಿದು ಅವಿವಾಹಿತರಾಗಿ ಜೀವನ ಸಾಗಿಸುವ ಸ್ಥಿತಿ ಬಂದಿದೆ.

ಕೃಷಿಕ ಎಂದರೆ ಕನ್ಯೆಯನ್ನೇ ತೋರಿಸುತ್ತಿಲ್ಲ:

ಇದ ಒಂದು ಊರಿನ, ಒಬ್ಬ ಕೃಷಿ ಕುಟುಂಬದ ಸಮಸ್ಯೆಯಲ್ಲ. ರಾಜ್ಯಾದ್ಯಂತ ಅದರಲ್ಲೂ ಖುಷ್ಕಿ ಬೇಸಾಯ ಹೊಂದಿರುವ ಬೆಳಗಾವಿ ಹಾಗೂ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಈ ಸಮಸ್ಯೆ ದೊಡ್ಡ ತಲ್ಲಣ ಸೃಷ್ಟಿಸಿದೆ. ಕೃಷಿಕ ಎಂದರೆ ಕನ್ಯೆಯನ್ನು ಕೊಡಲೂ ಯಾರೂ ಮುಂದೆ ಬರುತ್ತಿಲ್ಲ. ಹುಡುಗಿ ಕೊಡುವುದು ದೂರದ ಮಾತು ತೋರಿಸಲು ಹಿಂದೇಟು ಹಾಕುತ್ತಿದ್ದಾರೆ. ಯಾರನ್ನೇ ಕೇಳಿದರೂ ಒಕ್ಕಲುತನ ಮನೆತನ ಬ್ಯಾಡ್ರಿ.. ನಮ್ಮ ಹುಡುಗಿ ಸಾಲಿ ಕಲಿತಾಳ,,, ರೊಟ್ಟಿ ಮಾಡೋದು, ಪಾತ್ರೆ ತಿಕ್ಕೋದು, ಸೆಗಣಿ ಹಿಡಿಯೋದು ಮಗಳಿಗೆ ನಮಗೆ ಇಷ್ಟ ಇಲ್ಲ. ಸರ್ಕಾರಿ ನೌಕರಿ ಇರೋ ವರ ಇದ್ದರೆ ಹೇಳ್ರಿ, ಸಿಗಲಿಲ್ಲ ಅಂದ್ರೆ, ಕೊನೆಪಕ್ಷ ಖಾಸಗಿ ನೌಕರಿ ಅಥವಾ ಉತ್ತಮ ಗಳಿಕೆ ಹೊಂದಿರುವ ಇತರ ವೃತ್ತಿಯಾದರೂ ಪರವಾಗಿಲ್ಲ ಎಂದು ಹೇಳುತ್ತಿದ್ದಾರೆ. ಕೃಷಿಕರೂ ಸಹ ತಮ್ಮ ಹೆಣ್ಮಕ್ಕಳಿಗೆ ಸರ್ಕಾರಿ ನೌಕರಸ್ಥ ವರನೇ ಬೇಕು ಎಂದು ಕೇಳುತ್ತಿರುವುದು ಸಮಸ್ಯೆ ಮತ್ತಷ್ಟು ಬಿಗಡಾಯಿಸಲು ಕಾರಣವಾಗಿದೆ.ಗ್ರಾಮೀಣ ಭಾಗದಲ್ಲಿ ಯುವಕೃಷಿಕರ ಮದುವೆ ವಿಷಯ ಇಂದು ಸಾಮಾಜಿಕ ಸಮಸ್ಯೆಯಾಗಿ ಬದಲಾಗಿದೆ. ಕನ್ಯೆಯರು ಸಿಗದೇ ಸೂಕ್ತ ಸಮಯಕ್ಕೆ ಮದುವೆ ಆಗದಿರುವುದರಿಂದ ಕೃಷಿಕರ ನೆಮ್ಮದಿ ಹಾಳಾಗಿದೆ. ಇದನ್ನು ತಡೆಯಬೇಕಾದರೆ ಸರ್ಕಾರ ಕೃಷಿಯನ್ನು ಲಾಭದಾಯಕ ಉದ್ಯಮ ಎಂದು ಘೋಷಿಸಬೇಕು. ಖಾಸಗಿ ಹಾಗೂ ಸರ್ಕಾರಿ ನೌಕರಿಗಳ ಭರ್ತಿ ಹೆಚ್ಚಿಸಬೇಕು. ಭ್ರೂಣಹತ್ಯೆ ಕಾಯ್ದೆ ಜಾರಿಗೆ ಕಠಿಣ ಕ್ರಮ ಕೈಗೊಂಡು ಗಂಡು-ಹೆಣ್ಣಿನ ಅನುಪಾತ ತಡೆಯಬೇಕಿದೆ. ಭ್ರೋಕರ್‌ಗಳಿಗೆ ಹಣ ಕೊಡದೇ ಮದುವೆಗಳ ಆಗೋದು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದ್ದು, ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೆ ಪರಿಹಾರೋಪಾಯ ಕಂಡುಕೊಳ್ಳಬೇಕಿದೆ.

-ಸಿದಗೌಡ ಮೋದಗಿ, ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ