ಗಜೇಂದ್ರಗಡ ಪಟ್ಟಣದ ೨೩ನೇ ವಾರ್ಡಿನ ಉಣಚಗೇರಿ ಗ್ರಾಮದ ಕೋಳಿ ಫಾರ್ಮ್‌ನಿಂದ ಗಬ್ಬುವಾಸನೆಯಿಂದ ರೋಸಿ ಹೋಗಿದ್ದ ಗ್ರಾಮಸ್ಥರು ಫಾರ್ಮ್‌ಗೆ ನುಗ್ಗಿ ಕೋಳಿ ಹಾಗೂ ಮೊಟ್ಟೆಗಳನ್ನು ತೆಗೆದುಕೊಂಡು ಹೋದ ಘಟನೆ ಗುರುವಾರ ನಡೆದಿದೆ. ಕೋಳಿ ಫಾರ್ಮ್ ತೆರವುಗೊಳಿಸುವಂತೆ ಹಲವಾರು ಬಾರಿ ಪುರಸಭೆಗೆ ಮಾಡಿದ್ದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕ್ರೋಶಗೊಂಡಿದ್ದರು.

ಗಜೇಂದ್ರಗಡ: ಪಟ್ಟಣದ ೨೩ನೇ ವಾರ್ಡಿನ ಉಣಚಗೇರಿ ಗ್ರಾಮದ ಕೋಳಿ ಫಾರ್ಮ್‌ನ ಗಬ್ಬುವಾಸನೆಯಿಂದ ರೋಸಿ ಹೋಗಿದ್ದ ಗ್ರಾಮಸ್ಥರು ಫಾರ್ಮ್‌ಗೆ ನುಗ್ಗಿ ಕೋಳಿ ಹಾಗೂ ಮೊಟ್ಟೆಗಳನ್ನು ದೋಚಿದ ಘಟನೆ ಗುರುವಾರ ನಡೆದಿದೆ.

ಕೋಳಿ ಫಾರ್ಮ್ ತೆರವುಗೊಳಿಸುವಂತೆ ಹಲವಾರು ಬಾರಿ ಪುರಸಭೆಗೆ ಮನವಿ ಮಾಡಿದ್ದರೂ ಸ್ಪಂದಿಸದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕ್ರೋಶಗೊಂಡು ಕೋಳಿ ಫಾರ್ಮ್‌ಗೆ ನುಗ್ಗಿದ್ದಾರೆ.

ಈ ಕೋಳಿ ಫಾರ್ಮ್‌ನಿಂದ ಬರುವ ಗಬ್ಬು ವಾಸನೆಯಿಂದಾಗಿ ಮನೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಉಸಿರಾಟ ತೊಂದರೆಯಿಂದ ಕೆಲವರು ಸಮಸ್ಯೆ ಎದುರಿಸುತ್ತಿದ್ದಾರೆ. ಈ ಕೋಳಿ ಫಾರ್ಮ್‌ ತೆರವುಗೊಳಿಸುವಂತೆ ಪುರಸಭೆಯಿಂದ ಹಿಡಿದು ಜಿಲ್ಲಾಧಿಕಾರಿ ಅವರಿಗೆ ಗ್ರಾಮಸ್ಥರು ಮನವಿ ಮಾಡಿದ್ದರು. ಆದರೆ ಗ್ರಾಮಸ್ಥರ ಮನವಿಗೆ ಸೂಕ್ತ ಸ್ಪಂದನೆ ಸಿಗಲಿಲ್ಲ. ನೂರಾರು ಗ್ರಾಮಸ್ಥರು ಕೋಳಿ ಫಾರ್ಮ್‌ಗೆ ನುಗ್ಗಿ ಕೋಳಿ ಹಾಗೂ ಮೊಟ್ಟೆಯನ್ನು ತೆಗೆದುಕೊಂಡು ಹೋಗಿದ್ದಾರೆ.

ತೆರವಾಗದ ಕೋಳಿ ಫಾರ್ಮ್: ಈ ಕೋಳಿ ಫಾರ್ಮ್ ತೆರವುಗೊಳಿಸುವಂತೆ ಗ್ರಾಮಸ್ಥರು ಗಜೇಂದ್ರಗಡದಲ್ಲಿ ನಡೆದ ಜಿಲ್ಲಾಧಿಕಾರಿ ಜಿಲ್ಲಾ ಜನತಾ ದರ್ಶನದಲ್ಲಿ ಮನವಿ ನೀಡಿದ್ದರು. ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಪುರಸಭೆಗೆ ಸೂಚಿಸಿದ್ದರು. ಹೀಗಾಗಿ ಕೋಳಿ ಫಾರ್ಮ್ ಮಾಲೀಕರಿಗೆ ತೆರವುಗೊಳಿಸುವಂತೆ ಪುರಸಭೆಯಿಂದ ಜು. ೨೭, ೨೦೨೪ರಂದು ಎಚ್ಚರಿಕೆ ನೋಟಿಸ್ ನೀಡಲಾಗಿತ್ತು. ಆದರೆ ತೆರವು ಮಾಡಿರಲಿಲ್ಲ. ಹೀಗಾಗಿ ಗ್ರಾಮಸ್ಥರು ಶಾಸಕ ಜಿ.ಎಸ್. ಪಾಟೀಲ ಹಾಗೂ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ ಅವರಿಗೆ ಸಮಸ್ಯೆ ವಿವರಿಸಿ, ಮನವಿ ಸಲ್ಲಿಸಿದ್ದರು. ಆದರೂ ಯಾವುದೇ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಸಹನೆ ಕಟ್ಟೆ ಒಡೆಯಿತು.ಸಿಪಿಐ ವಿಜಯಕುಮಾರ ಹಾಗೂ ಪಿಎಸ್‌ಐ ಪ್ರಕಾಶ ಡಿ. ಅವರು ಸ್ಥಳಕ್ಕೆ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಚರ್ಚಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಘಟನೆಯ ಸಮಗ್ರ ಮಾಹಿತಿ ಸಂಗ್ರಹಿಸಿದರು.ಉಣಚಗೇರಿ ಕೋಳಿ ಫಾರ್ಮ್ ತೆರವಿಗೆ ಸಂಬಂಧಿಸಿದಂತೆ ನಡೆದ ಘಟನೆ ಕುರಿತು ಮೇಲಧಿಕಾರಿಗಳೊಂದಿಗೆ ಚರ್ಚಿಸಿ, ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಗಜೇಂದ್ರಗಡ ಪುರಸಭೆ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಹೇಳಿದರು. ಈ ಕೋಳಿ ಫಾರ್ಮ್‌ನಿಂದ ಉಂಟಾಗುತ್ತಿರುವ ಗಬ್ಬುವಾಸನೆಯಿಂದ ಉಸಿರಾಟ ತೊಂದರೆಯಾಗಿ ಕೆಲವರು ಅಸುನೀಗಿದ್ದಾರೆ. ಹೀಗಾಗಿ ಕೋಳಿ ಫಾರ್ಮ್‌ಗೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದ್ದೇವೆ. ಮುಂದಿನ ದಿನಗಳಲ್ಲಿ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಉಣಚಗೇರಿ ಗ್ರಾಮಸ್ಥರು ಹೇಳುತ್ತಾರೆ.