ಭಾರೀ ಮಳೆಗೆ ನಿಲ್ಲದ ಕೃಷ್ಣಾ ನದಿ ಆರ್ಭಟ : ನದಿತೀರದ ಗ್ರಾಮಗಳಲ್ಲಿ ಜನ ಜೀವನ ಅಯೋಮಯ ಸ್ಥಿತಿಗೆ

| Published : Aug 02 2024, 12:53 AM IST / Updated: Aug 02 2024, 01:38 PM IST

ಭಾರೀ ಮಳೆಗೆ ನಿಲ್ಲದ ಕೃಷ್ಣಾ ನದಿ ಆರ್ಭಟ : ನದಿತೀರದ ಗ್ರಾಮಗಳಲ್ಲಿ ಜನ ಜೀವನ ಅಯೋಮಯ ಸ್ಥಿತಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ವಡಗೇರಾ ತಾಲೂಕಿನ ಸಂಗಮ್ ಬ್ರಿಡ್ಜ್‌ ಮುಳುಗಡೆಯಾಗಿರುವ ಹಿನ್ನೆಲೆ ಯಾದಗಿರಿ-ರಾಯಚೂರು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಮಾಡಲಾಗಿದೆ.

 ಕೊಡೇಕಲ್ : ಕಳೆದ 15 ದಿನಗಳಿಂದ ಬಸವಸಾಗರ ಜಲಾಶಯದಿಂದ ನಿರಂತರವಾಗಿ ನದಿಗೆ ನೀರು ಹರಿ ಬಿಡುತ್ತಿರುವುದರಿಂದ ಜಲಾನಯನ ತೀರದ ಜನತೆಗೆ ನೆರೆಯ ಭೀತಿ ಎದುರಾಗಿದೆ.

ಈಗಾಗಲೇ ಶಹಾಪುರ ಸಮೀಪದ ಕೊಳ್ಳುರು(ಎಂ)ಸೇರಿದಂತೆ ನದಿ ತಟದ ಕೆಲವೆಡೆ ಸೇತುವೆಗಳು ಮುಳುಗಿ ಹೋಗಿದ್ದು, ಸಂಚಾರ ಸ್ಥಗಿತಗೊಂಡಿದೆ. ಜೊತೆಗೆ ಕೆಲವು ಜಮೀನುಗಳಿಗೂ ನೀರು ನುಗ್ಗಿದ್ದರಿಂದ ಬೆಳೆಗಳು ಹಾನಿಗೊಳಗಾಗಿವೆ. ಬಸವಸಾಗರ ಜಲಾಶಯದಿಂದ 3ಲಕ್ಷಕ್ಕೂ ಅಧಿಕ ಪ್ರಮಾಣದ ನೀರನ್ನು ಬಿಡುತ್ತಿರುವುದರಿಂದ ನದಿತೀರದ ಗ್ರಾಮಗಳಲ್ಲಿ ಅಯೋಮಯ ಸ್ಥಿತಿ ನಿರ್ಮಾಣಗೊಂಡಿದೆ.

ಕಳೆದ ಮಂಗಳವಾರ ಹಾಗೂ ಬುಧವಾರದ ಸಂಜೆಯವರೆಗೆ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಕಡಿಮೆಯಾದ್ದರಿಂದ ನದಿಗೆ ಬಿಡುವ ನೀರಿನ ಪ್ರಮಾಣವು ಕೊಂಚ ತಗ್ಗಿತ್ತು ಆದರೆ ಈಗ ಜಲಾಶಯಕ್ಕೆ ಮತ್ತೆ ಒಳಹರಿವಿನ ಪ್ರಮಾಣದಲ್ಲಿ ಏರಿಕೆ ಕಂಡು 3.30ಲಕ್ಷ ಕ್ಯುಸೆಕ್‌ಗೂ ಅಧಿಕವಾಗಿ ನೀರು ಬರುತ್ತಿರುವುದರಿಂದ ಜಲಾಶಯದ ಎಲ್ಲಾ 30 ಕ್ರಸ್ಟ್ ಗೇಟ್‌ಗಳಿಂದ 3.25ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಕೃಷ್ಣಾ ನದಿಯ ಉಪನದಿಗಳಾದ ಮಲಪ್ರಭಾ ಹಾಗೂ ಘಟಪ್ರಭಾ ನದಿಗಳಿಗೂ ಪ್ರವಾಹ ಬಂದಿದ್ದು ಕೃಷ್ಣೆಯೊಡನೆ ಸೇರಿ ಇದೀಗ ಕೃಷ್ಣೆಯ ಒಡಲು ಭೋರ್ಗರೆಯುತ್ತಿರುವುದರಿಂದ ನದಿ ತೀರದ ಗ್ರಾಮಗಳ ಜನತೆಗೆ ಪ್ರವಾಹ ಭೀತಿ ಉಂಟಾಗಿ ಕೃಷ್ಣಾ ತೀರದ 45ಕ್ಕೂ ಹೆಚ್ಚು ಗ್ರಾಮಗಳ ಜನ-ಜಾನುವಾರು ನದಿಗೆ ಇಳಿಯದಂತೆ ನಿಗಮದ ಅಧಿಕಾರಿಗಳು ಸೂಚಿಸಿದ್ದು, ಗ್ರಾಪಂ ವತಿಯಿಂದ ಡಂಗೂರ ಸಾರುವ ಕೆಲಸಗಳು ನಡೆಯುತ್ತಿವೆ. ಅಲ್ಲದೇ ನೋಡಲ್ ಅಧಿಕಾರಿಗಳು ಸಹಿತ ನದಿ ತೀರದ ಗ್ರಾಮಗಳಲ್ಲಿ ಹೈ ಅಲರ್ಟ್ ಆಗಿದ್ದು, ಜಿಲ್ಲಾಡಳಿತ ಹಾಗೂ ತಾಲೂಕಾಡಳಿತದಿಂದ ಪ್ರವಾಹ ಎದುರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ನಿರಂತರವಾಗಿ ಆಲಮಟ್ಟಿ ಜಲಾಶಯದಿಂದ ಹೊರಹರಿವಿನ ಪ್ರಮಾಣ ಜಾಸ್ತಿಯಾಗುತ್ತಲೇ ಇರುವುದರಿಂದ ಬಸವಸಾಗರ ಜಲಾಶಯಕ್ಕೆ ಒಳಹರಿವಿನ ಪ್ರಮಾಣವು ಸಹಿತ ಅಧಿಕವಾಗಿದೆ. ಜಲಾಶಯಕ್ಕೆ ಒಂದು ವೇಳೆ ಹೆಚ್ಚಿನ ಪ್ರಮಾಣದಲ್ಲಿ ಒಳಹರಿವು ಬಂದರೆ ಯಾವುದೇ ಸಮಯದಲ್ಲಾದರೂ ನದಿಪಾತ್ರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹರಿದುಬಿಡುವ ಸಾಧ್ಯತೆಗಳಿರುವುದರಿಂದ ನದಿ ತೀರದ ಜನತೆ ಎಚ್ಚರದಿಂದಿ ಇರುವಂತೆ ನಿಗಮದ ಅಧಿಕಾರಿಗಳು ತಿಳಿಸಿದ್ದಾರೆ.

ಒಟ್ಟಾರೆಯಾಗಿ ಮಳೆ ಇಲ್ಲದಿದ್ದರೂ ಸಹಿತ ಕೃಷ್ಣಾ ಜಲಾನಯನದಲ್ಲಿ ಹಾಗೂ ಮಹರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ ನದಿಗೆ ಪ್ರವಾಹ ಬಂದಿದ್ದು ಕೃಷ್ಣಾ ನದಿತಟದ ಭಾಗದ ಜನತೆಗೆ ಹಾಗೂ ರೈತರನ್ನು ಹೈರಾಣಾಗಿಸಿದೆ.

492.25 ಮೀ. ಗರಿಷ್ಠ ನೀರಿನ ಸಂಗ್ರಹವಿರುವ ಬಸವಸಾಗರ ಜಲಾಶಯದಲ್ಲಿ ಸದ್ಯ 489.98 ಮೀ ತಲುಪಿದ್ದು 23.93 ಟಿಎಂಸಿ ನೀರಿನ ಸಂಗ್ರಹವಿದೆ.

ಹೊಲಗದ್ದೆಗಳು ಜಲಾವೃತ: 45 ಗ್ರಾಮಗಳಲ್ಲಿ ಪ್ರವಾಹ ಭೀತಿ

ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯದಿಂದ 3.25ಲಕ್ಷ ಕ್ಯುಸೆಕ್ ಪ್ರಮಾಣದಷ್ಟು ನೀರನ್ನು ಕೃಷ್ಣಾ ನದಿಗೆ ಹೊರ ಬಿಡಲಾಗಿದೆ.

ಕೃಷ್ಣಾ ನದಿ ಪಾತ್ರದ ಯಾದಗಿರಿ ಜಿಲ್ಲೆಯ 45 ಗ್ರಾಮಗಳಲ್ಲಿ ಪ್ರವಾಹ ಭೀತಿ ಕಾಣಿಸಿಕೊಂಡಿದ್ದು, ಕಳೆದ 15 ದಿನಗಳಿಂದ, ಕೃಷ್ಣಾ ನದಿಗೆ ಬಸವಸಾಗರ ಜಲಾಶಯ ಮೂಲಕ ಸುಮಾರು 18ಟಿಎಂಸಿ ಯಷ್ಟು ನೀರನ್ನು ಹೊರ ಬಿಡಲಾಗಿದೆ.

ಜಿಲ್ಲೆಯಲ್ಲಿ 600 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ಹಾನಿ ಅಂದಾಜಿಸಲಾಗಿದೆ. ಭತ್ತ ಹಾಗೂ ಹತ್ತಿ ಬೆಳೆಗಳು ಹೆಚ್ಚು ಹಾನಿಗೀಡಾಗಿವೆ. ವಡಗೇರಾ ಹಾಗೂ ಶಹಾಪೂರ ತಾಲೂಕುಗಳಲ್ಲಿನ ಕೃಷ್ಣಾ ನದಿ ಪಾತ್ರದ ಗ್ರಾಮಗಳಲ್ಲಿ ಹೆಚ್ಚಿನ ಬೆಳೆ ಹಾನಿ ಸಂಭವಿಸಿದೆ. ಮಹಾರಾಷ್ಟ್ರ ಸರ್ಕಾರದ ಕೋರಿಕೆ ಮೇರೆಗೆ ಆಲಮಟ್ಟಿಯಿಂದ ಹೆಚ್ಚಿನ ನೀರನ್ನು ಹೊರ ಬಿಡಲಾಗುತ್ತಿದೆ. ಹೀಗಾಗಿ, ಆಲಮಟ್ಟಿಯಿಂದ ಬಸವ ಸಾಗರ ಜಲಾಶಯಕ್ಕೆ ನೀರು ಹರಿದು ಬರುತ್ತಿದೆ. ಗುರುವಾರ ಸಂಜೆ ವೇಳೆ ಹೊರಹರಿವು ತಗ್ಗುವ ಸಾಧ್ಯತೆಯಿದೆ.

ಜಿಲ್ಲೆಯ ವಡಗೇರಾ ತಾಲೂಕಿನ ಸಂಗಮ್ ಬ್ರಿಡ್ಜ್‌ ಮುಳುಗಡೆಯಾಗಿರುವ ಹಿನ್ನೆಲೆ ಯಾದಗಿರಿ-ರಾಯಚೂರು ಜಿಲ್ಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಮಾಡಲಾಗಿದೆ ಹಾಗೂ ಕೊಳ್ಳೂರು ಎಂ ಸೇತುವೆ ಕೂಡ ನೀರಲ್ಲಿ ಮುಳುಗಿದ್ದು, ಸಂಚಾರ ನಿಷೇಧಿಸಲಾಗಿದೆ.