ಸಾರಾಂಶ
ಕನ್ನಡಪ್ರಭ ವಾರ್ತೆ ಹುಣಸೂರು
ಹುಣಸೂರು ನಗರಸಭೆಯ ಅಧ್ಯಕ್ಷರಾಗಿ ಎನ್.ಡಿಎ ಮೈತ್ರಿಕೂಟದ ಅಭ್ಯರ್ಥಿ 7ನೇ ವಾರ್ಡಿನ ಜೆಡಿಎಸ್ ನ ಸದಸ್ಯ ಶರವಣ 2 ಮತಗಳ ಅಂತರದಿಂದ ವಿಜಯಶಾಲಿಯಾದರೆ, ಕಾಂಗ್ರೆಸ್ ಸೋಲಿಗೆ ಶರಣಾಯಿತು.ಎಸ್ಟಿ ಮಹಿಳೆಗೆ ಮೀಸಲಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಏಕೈಕ ಅಭ್ಯರ್ಥಿ 2ನೇ ವಾರ್ಡಿನ ಪಕ್ಷೇತರ ಸದಸ್ಯೆ ಆಶಾ ಕೃಷ್ಣನಾಯಕ ಅವಿರೋಧವಾಗಿ ಆಯ್ಕೆಯಾದರು.
ಹುಣಸೂರು ನಗರಸಭೆಯಲ್ಲಿ ಸೋಮವಾರ ಆಯೋಜನೆಗೊಂಡಿದ್ದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎನ್.ಡಿಎ ಮೈತ್ರಿಕೂಟದ ಅಭ್ಯರ್ಥಿ ಶರವಣ ಸ್ವಪಕ್ಷ ಜೆಡಿಎಸ್ ನ 7 ಮತಗಳು, ಬಿಜೆಪಿಯ 3, ಐವರು ಪಕ್ಷೇತರರು, ಶಾಸಕ ಜಿ.ಡಿ. ಹರೀಶ್ ಗೌಡ ಮತ್ತು ಮೈಸೂರು ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ (ಒಟ್ಟು 2 ಮತಗಳು) ಮತಗಳೊಂದಿಗೆ ಒಟ್ಟು 17 ಮತಗಳನ್ನು ಗಳಿಸಿ ವಿಜಯದ ನಗೆ ಬೀರಿದರೆ, ಪ್ರತಿಸ್ಪರ್ಧಿ ಕಾಂಗ್ರೆಸ್ ನ ಸ್ವಾಮಿಗೌಡ ಸ್ವಪಕ್ಷದ 13 ಮತಗಳು ಮತ್ತು ಎಸ್.ಡಿಪಿಐನ 2 ಮತಗಳೊಂದಿಗೆ ಒಟ್ಟು 15 ಮತಗಳನ್ನು ಗಳಿಸಿ ಪರಾಭವಗೊಂಡರು.ಶರವಣ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಆಶಾ ಕೃಷ್ಣನಾಯಕ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಎಚ್.ಬಿ. ವಿಜಯಕುಮಾರ್ ಘೋಷಿಸಿದರು. ಪೌರಾಯುಕ್ತೆ ಮಾನಸ ಮತ್ತು ಚುನಾವಣಾ ಸಿಬ್ಬಂದಿ ಇದ್ದರು.
ಚುನಾವಣೆ ಮಧ್ಯಾಹ್ನ 12ಕ್ಕೆ ಇದ್ದರಿಂದ 11.45ರ ವೇಳೆಗೆ ಶಾಸಕ ಹರೀಶ್ ಗೌಡರನ್ನು ಒಳಗೊಂಡು ಮೈತ್ರಿಕೂಟದ ಸದಸ್ಯರೆಲ್ಲರೂ ನಗರಸಭೆ ಆವರಣಕ್ಕೆ ಬಸ್ ನಲ್ಲಿ ಬಂದಿಳಿದರು. ಅದಕ್ಕೂ ಸ್ವಲ್ಪಹೊತ್ತಿನ ಮುಂದೆ ಕಾಂಗ್ರೆಸ್ ಸದಸ್ಯರು ಟಿಟಿ ವಾಹನದಲ್ಲಿ ಒಂದಾಗಿ ಬಂದಿಳಿದು ಚುನಾವಣಾ ಸಭಾಂಗಣಕ್ಕೆ ತೆರಳಿದ್ದರು.ಜೆಡಿಎಸ್ ನ ಸದಸ್ಯ ಅತ್ಯಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಗಾಣಿಗ ಸಮಾಜದ ಶರವಣ ಮೊದಲಿನಿಂದಲೂ ಆಕಾಂಕ್ಷಿಯಾಗಿ ಇದ್ದರು. ಶಾಸಕ ಹರೀಶ್ ಗೌಡ ಅವರ ಸಮರ್ಥ ನಾಯಕತ್ವದಡಿ ಎಲ್ಲ ಪಕ್ಷೇತರರನ್ನೂ ಒಗ್ಗೂಡಿಸಿ ಚುನಾವಣೆಯನ್ನು ಯಶಸ್ವಿಯಾಗಿ ಎದುರಿಸಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡರು. ಮೈತ್ರಿಕೂಟದ ಲೆಕ್ಕಾಚಾರದಂತೆ 17 ಮತಗಳು ಪಕ್ಷದ ಅಭ್ಯರ್ಥಿ ಪರ ಬಂದವು. ವರ್ಷದ ಹಿಂದೆ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಜಿಡಿಎಸ್ ನ ದಲಿತ ನಾಯಕ ಬಸವಲಿಂಗಯ್ಯ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವಲ್ಲಿ ಯಶಸ್ವಿಯಾಗಿದ್ದ ಶಾಸಕ ಹರೀಶ್ ಗೌಡ 50 ವರ್ಷಗಳ ಟಿಎಪಿಸಿಎಂಎಸ್ ನ ಅವಧಿಯ ಇತಿಹಾಸ ನಿರ್ಮಿಸಿದ್ದರು. ಇದೀಗ ನಗರಸಭೆಯಲ್ಲೂ ಸೂಕ್ಷಾತಿಸೂಕ್ಷ್ಮ ಸಮುದಾಯವಾಗಿರುವ ಗಾಣಿಗ ಸಮಾಜದ ಸದಸ್ಯನಿಗೆ ಅಧ್ಯಕ್ಷಗಿರಿ ಕೊಡಿಸುವಲ್ಲಿ ಯಶಸ್ವಿಯಾದರು.
ಕಾಂಗ್ರೆಸ್ ನಲ್ಲಿ 14 ಮಂದಿ ಸದಸ್ಯರಿದ್ದರು. ಚುನಾವಣೆಯಲ್ಲಿ 13 ಮಂದಿ ಮಾತ್ರ ಭಾಗವಹಿಸಿದ್ದರು. 6ನೇ ವಾರ್ಡಿನ ಸದಸ್ಯ ದೇವನಾಯ್ಕ ಅನಾರೋಗ್ಯದ ಕಾರಣವೊಡ್ಡಿ ಚುನಾವಣೆಯಲ್ಲಿ ಭಾಗವಹಿಸಲಿಲ್ಲ. ಹಾಗಾಗಿ ಅವರ ಸದಸ್ಯ ಬಲ 13 ಕುಗ್ಗಿತು. ಎಸ್.ಡಿಪಿಐನ ಇಬ್ಬರು ಸದಸ್ಯರಾದ ಸಯ್ಯದ್ ಯೂನೂಸ್, ಸಮೀನಾ ಬಾನು ಬೆಂಬಲ ಕಾಂಗ್ರೆಸ್ ಗೆ ದಕ್ಕಿತು.ಪಕ್ಷೇತರ ಸದಸ್ಯರಾದ ಸತೀಶ್ ಕುಮಾರ್, ಮಾಲಿಕ್ ಪಾಷ, ದೊಡ್ಡಹೆಜ್ಜೂರು ರಮೇಶ್, ಪರ್ವೀನ್ ತಾಜ್ , ಆಶಾ ಕೃಷ್ಣನಾಯಕ ಈ ಎಲ್ಲ ಪಕ್ಷೇತರರೂ ಎನ್.ಡಿಯ ಮೈತ್ರಿಕೂಟದ ಅಭ್ಯರ್ಥಿ ಪರ ಗಟ್ಟಿಯಾಗಿ ನಿಂತಿದ್ದು ಜೆಡಿಎಸ್ ಅಭ್ಯರ್ಥಿ ಗೆಲುವಿನ ಹಾದಿಯನ್ನು ಸುಗಮಗೊಳಿಸಿತು. ಗೆಲುವಿನ ನಂತರ ಶಾಸಕ ಹರೀಶ್ ಗೌಡ ಮತ್ತು ನಗರಸಭೆ ಅಧ್ಯಕ್ಷ ಶರವಣರೊಂದಿಗೆ ಪಕ್ಷದ ಕಾರ್ಯಕರ್ತರು ಮೆರವಣಿಗೆ ಮೂಲಕ ಪಕ್ಷದ ಕಚೇರಿಗೆ ತೆರಳಿದರು.
ಸ್ವಪಕ್ಷೀಯನ ವಿರುದ್ಧವೇ ಕಾಂಗ್ರೆಸ್ ಪ್ರತಿಭಟನೆ:ಕಾಂಗ್ರೆಸ್ ಸದಸ್ಯ ದೇವನಾಯ್ಕ ಚುನಾವಣೆಗೆ ಗೈರಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರನ್ನು ಕೆರಳಿಸಿತ್ತು. ಚುನಾವಣೆ ಸಂಪನ್ನಗೊಂಡ ನಂತರ ನಗರಸಭೆ ಆವರಣದಲ್ಲಿ ಒಂದೆಡೆ ಜೆಡಿಎಸ್-ಬಿಜೆಪಿ ಪಟಾಕಿ ಸಿಡಿಸಿ, ಬಾವುಟ ಬೀಸುತ್ತಾ ಸಂಭ್ರಮಾಚರಣೆಯಲ್ಲಿ ತೊಡಗಿದ್ದರೆ, ಇತ್ತ ಕಾಂಗ್ರೆಸ್ ಕೆಲ ಕಾರ್ಯಕರ್ತರು ದೇವನಾಯ್ಕರ ವಿರುದ್ಧ 30 ಲಕ್ಷಕ್ಕೆ ಮಾರಾಟವಾದ ದೇವನಾಯ್ಕರಿಗೆ ಧಿಕ್ಕಾರ ಮುಂತಾದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದುದು ಕಂಡು ಬಂದಿತು.
ಎನ್.ಡಿಎ ಮೈತ್ರಿಕೂಟದ ಅಭ್ಯರ್ಥಿಯೊಂದಿಗೆ ಕಾಂಗ್ರೆಸ್ ಸದಸ್ಯೆ 24ನೇ ವಾರ್ಡಿನ ಗೀತ ನಿಂಗರಾಜು ಬಸ್ ನಲ್ಲಿ ಚುನಾವಣೆಗೆ ಬಂದಿದ್ದರು. ಆದರೆ ಮತದಾನದ ವೇಳೆ ಗೀತಾ ನಿಂಗರಾಜು ತಮ್ಮ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿ ಎಲ್ಲರಲ್ಲಿದ್ದ ಕುತೂಹಲಕ್ಕೆ ತಣ್ಣೀರು ಎರಚಿದ್ದರು. ಚುನಾವಣೆ ಸೋಲಿನ ನಂತರ ಕಾಂಗ್ರೆಸ್ ಸದಸ್ಯರು ಸಭೆಯಿಂದ ಹೊರ ನಡೆದರೆ, ಗೀತಾ ನಿಂಗರಾಜು ಮಾತ್ರ ಎನ್.ಡಿಎ ಮೈತ್ರಿ ಅಭ್ಯಥಿಯ ಗೆಲುವಿನ ಸಂಭ್ರಮವನ್ನು ನೋಡುತ್ತಾ ಕುಳಿತಿದ್ದುದು ವಿಶೇಷವಾಗಿತ್ತು.ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮಹದೇವಸ್ವಾಮಿ, ನಗರಸಭೆಯ ನೂತನ ಉಪಾಧ್ಯಕ್ಷೆ ಆಶಾ ಕೃಷ್ಣನಾಯ್ಕ, ಸದಸ್ಯರಾದ ದೇವರಾಜ್, ಕೃಷ್ಣರಾಜ ಗುಪ್ತ, ಶಾಹಿನ್ ತಾಜ್, ಶ್ರೀನಾಥ್, ರಾಣಿ ಪೆರುಮಾಳ್, ರಾಧ, ಬಿಜೆಪಿಯ ಗಣೇಶ್ ಕುಮಾರಸ್ವಾಮಿ, ವಿವೇಕಾನಂದ, ಹರೀಶ್, ಪಕ್ಷೇತರರಾದ ಮಾಲಿಕ್‌ಪಾಷ, ಸತೀಶ್‌ಕುಮಾರ್, ದೊಡ್ಡಹೆಜ್ಜೂರು ರಮೇಶ್, ಪರ್ವೀನ್ ತಾಜ್, ಜೆಡಿಎಸ್ ಮತ್ತು ಬಿಜೆಪಿ ಇದ್ದರು.