ಸಾರಾಂಶ
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ನೆಹರು ಕಾಲದಿಂದಲು ದೇಶದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ಒಕ್ಕೂಟದ ತಿಕ್ಕಾಟಗಳು ಇವೆ. ಆದರೆ 2014ರ ನಂತರದಲ್ಲಿ ಒಕ್ಕೂಟ ವ್ಯವಸ್ಥೆಯ ಚರ್ಚೆಗಳ ದಿಕ್ಕೇ ಬದಲಾಗಿದೆ ಎಂದು ಎಂದು ಲೇಖಕ ಬಿ.ಶ್ರೀಪಾದಭಟ್ ಹೇಳಿದರು.ಅವರು ನಗರದ ಆರ್.ಡಿ.ಕನ್ವೆನ್ಷನ್ ಹಾಲ್‌ನಲ್ಲಿ ಡಾ.ಡಿ.ಆರ್.ನಾಗರಾಜ್ ಬಳಗದ ವತಿಯಿಂದ ನಡೆದ ‘ಡಿ.ಆರ್.ಎನ್.ತಿಂಗಳ ಮಾತುಕತೆ’ ಕಾರ್ಯಕ್ರಮದಲ್ಲಿ ಒಕ್ಕೂಟವೋ-ತಿಕ್ಕಾಟವೋ ಪುಸ್ತಕ ಕುರಿತ ಸಂವಾದದಲ್ಲಿ ಮಾತನಾಡಿದರು.ಈಗ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಇಂದಿರಾಗಾಂಧಿ ಕಾಲದಲ್ಲಿನ ತುರ್ತು ಪರಿಸ್ಥಿತಿಗೂ ಈಗಿನ ಅಘೋಷಿತ ತುರ್ತು ಪರಿಸ್ಥಿತಿಗು ಸಾಕಷ್ಟು ವ್ಯತ್ಯಾಸಗಳಿವೆ. ಅಂದಿನ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಬಡವರು, ದಲಿತರು, ಅಲ್ಪಸಂಖ್ಯಾತರು ಖುಷಿಯಾಗಿದ್ದರು. ಆದರೆ ಈಗಿನ ಅಘೋಷಿತ ತುರ್ತು ಪರಿಸ್ಥಿತಿಯಲ್ಲಿ ಯಾರು ಹೆಚ್ಚು ಖುಷಿಯಾಗಿದ್ದಾರೆ ಎನ್ನುವುದನ್ನು ಜನರು ಅರ್ಥ ಮಾಡಿಕೊಳ್ಳಬೇಕು ಎಂದರು.ಕೇಂದ್ರ ಸರ್ಕಾರ ರಾಜ್ಯಗಳಲ್ಲಿ ಚುನಾಯಿತ ಸರ್ಕಾರವನ್ನು ವಜಾಮಾಡುವ ಮೂಲಕ ಒಕ್ಕೂಟ ವ್ಯವಸ್ಥೆಯ ಮೇಲೆ ದಬ್ಬಾಳಿಕೆ ಮಾಡುತಿತ್ತು. 1994 ಎಸ್.ಆರ್.ಬೋಮ್ಮಾಯಿ ಸರ್ಕಾರ ವಜಾಮಾಡಿದ ಪ್ರಕರಣದ ತೀರ್ಪಿನಿಂದ ಒಕ್ಕೂಟ ವ್ಯವಸ್ಥೆಗೆ ಒಂದಿಷ್ಟು ಬಲ ಬಂದಿತ್ತು. ಈ ಬಲವನ್ನು ಮುರಿಯುವ ಕೆಲಸವನ್ನು ಮಾಡಿ ತೋರಿಸಿದ್ದ ಯಡಿಯೂರಪ್ಪ ಅವರು ಶಾಸಕರನ್ನು ಖರೀದಿ ಮಾಡುವ ಮೂಲಕ ಅಧಿಕಾರಕ್ಕೆ ಬಂದಿದ್ದು ಒಕ್ಕೂಟ ವ್ಯವಸ್ಥೆಗೆ ಅತ್ಯಂತ ಅಪಾಯಕಾರಿ ಎಂದು ಅಭಿಪ್ರಾಯಪಟ್ಟರು. ಸ್ವಾತಂತ್ರ್ಯ ನಂತರ ದೇಶದಲ್ಲಿನ ಪ್ರಾಂತೀಯ ಸಂಸ್ಥಾನಗಳನ್ನು ಒಟ್ಟುಗೂಡಿಸಲು ಬಲಿಷ್ಠ ಕೇಂದ್ರ ಸರ್ಕಾರದ ಅಗತ್ಯವಿತ್ತು. ಆದರೆ ಈಗ ಬಲಿಷ್ಠ ಕೇಂದ್ರ ಸರ್ಕಾರದ ಅಗತ್ಯ ಇಲ್ಲ. ಸಂವಿಧಾನ ರಚನ ಸಮಿತಿಯಲ್ಲಿ ನಡೆದ ಚರ್ಚೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕು. ನಮ್ಮದು ಕೇಂದ್ರ ಸರ್ಕಾರ ವ್ಯವಸ್ಥೆಯೂ ಅಲ್ಲ, ಒಕ್ಕೂಟ ವ್ಯವಸ್ಥೆಯು ಅಲ್ಲದ ಅರೆಬರೆ ಒಕ್ಕೂಟ ವ್ಯವಸ್ಥೆಯಾಗಿದೆ ಎಂದು ಹೇಳಿದರು. ಜಿ.ಎಸ್.ಟಿ ಜಾರಿಯಿಂದ ಒಕ್ಕೂಟ ವ್ಯವಸ್ಥೆಯೇ ಈಗ ತಿರುಗ ಮುರುಗವಾಗಿದೆ. ರಾಜ್ಯ ಸರ್ಕಾರಗಳ ಸ್ವಯತ್ತತೆಯೇ ಬದಲಾಗಿದೆ. ಆರ್.ಬಿ.ಐ ಲಾಭದಲ್ಲಿನ ಡಿವಿಡೆಂಟ್ ಹಣವನ್ನು ರಾಜ್ಯಗಳಿಗೂ ನೀಡಬೇಕು. ಶಿಕ್ಷಣ ಸೇರಿದಂತೆ ಅಭಿವೃದ್ಧಿ ವೆಚ್ಚಗಳನ್ನು ಮಾಡುವುದು ರಾಜ್ಯ ಸರ್ಕಾರ. ದೇಶದಲ್ಲಿ ಮಿಶ್ರ ಆರ್ಥಿಕ ನೀತಿ ಇದ್ದಾಗ ಹಣಕಾಸು ಆಯೋಗ ಹಂಚಿಕೆ ಮಾಡುತ್ತಿದ್ದ ನೀತಿಯನ್ನೇ ಇಂದಿನ ಖಾಸಗೀಕರಣದ ಆರ್ಥಿಕ ನೀತಿಗಳು ಇರುವ ಸಂದರ್ಭದಲ್ಲು ಪಾಲಿಸದೆ ಹಣ ಹಂಚಿಕೆಯ ಮಾನದಂಡಗಳು ಬದಲಾಗಬೇಕು ಎಂದು ಹೇಳಿದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ರವಿ ಬಾಗಿ ಮಾತನಾಡಿ, ಯಾವುದೇ ಒಂದು ರಾಜ್ಯದ ಚುನಾಯಿತ ಸರ್ಕಾರ ಬಹುಮತದಿಂದ ಅಧಿಕಾರಕ್ಕೆ ಬಂದು ಆಡಳಿತ ನಡೆಸುವಾಗ ಸರ್ಕಾರ ಪತನವಾಗುತ್ತದೆ ಎಂದು ವಿರೋಧ ಪಕ್ಷಗಳು ಹೇಳುವುದೇ ತಪ್ಪು. ಕೇಂದ್ರ ಸರ್ಕಾರದ ಬಜೆಟ್ ಮೊತ್ತ ದೊಡ್ಡದಾಗಿರುವಂತೆ ರಾಜ್ಯಗಳಿಗೆ ಬರುವ ಅನುದಾನವು ಹೆಚ್ಚಾಗಬೇಕು. ಇದು ಬಹುತ್ವ ಭಾರತ. ಇಲ್ಲಿ ಒಂದು ಭಾಷೆ, ಒಂದು ಶಿಕ್ಷಣ ನೀತಿ ಅಸಾಧ್ಯ. ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ. ಉತ್ತರ, ದಕ್ಷಿಣ ಯಾವುದೂ ಶ್ರೇಷ್ಠವಲ್ಲ. ಎಲ್ಲವು ಸಮಾನ ಎಂದರು.ಕಾರ್ಯಕ್ರಮದಲ್ಲಿ ಆಕೃತಿ ಪುಸ್ತಕ ಪ್ರಕಾಶನದ ಗುರುಪ್ರಸಾದ್, ಡಿ.ಆರ್.ಎನ್ ಬಳಗದ ದಯಾನಂದಗೌಡ, ಸಂವಾದ ಸಂಸ್ಥೆಯ ರಾಮಕ್ಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ.ಪ್ರಕಾಶ್ ಮಂಟೇದ, ಕನ್ನಡ ಪಕ್ಷದ ಸಂಜೀವನಾಯ್ಕ, ಪ್ರಾಂತರೈತ ಸಂಘದ ಚಂದ್ರತೇಜಸ್ವಿ, ದಲಿತ ಮುಖಂಡ ಕಾರಹಳ್ಳಿ ಶ್ರೀನಿವಾಸ್, ಛಲವಾದಿ ಮಹಾಸಭಾದ ಗುರುರಾಜಪ್ಪ, ಸೌಭಾಗ್ಯ ಸೇವಾ ಟ್ರಸ್ಟ್‌ನ ರಾಜಗೋಪಾಲ್, ಸಿಪಿಐಎಂ ತಾಲ್ಲೂಕು ಕಾರ್ಯದರ್ಶಿ ರುದ್ರಆರಾಧ್ಯ, ದಲಿತ ವಿದ್ಯಾರ್ಥಿ ಒಕ್ಕೂಟದ ಹೇಮಂತ್ ಮುಂತಾದವರು ಉಪಸ್ಥಿತರಿದ್ದರು.ಫೋಟೋ-21ಕೆಡಿಬಿಪಿ1- ದೊಡ್ಡಬಳ್ಳಾಪುರದಲ್ಲಿ ಡಿ.ಆರ್.ನಾಗರಾಜ್ ಬಳಗದ ನೇತೃತ್ವದಲ್ಲಿ ಡಿ.ಆರ್.ಎನ್.ತಿಂಗಳ ಮಾತುಕತೆ’ ಕಾರ್ಯಕ್ರಮ ನಡೆಯಿತು.